Advertisement
ದೇಶದ ಈಶಾನ್ಯ ರಾಜ್ಯವಾದ ಅಸ್ಸಾಂನ ರಾಜಧಾನಿ ಗುವಾಹಟಿಯ ನೀಲಾಚಲ ಪರ್ವತದ ಹೃದಯ ಭಾಗದಲ್ಲಿ ಮಾತಾ ಕಾಮಖ್ಯಾ ದೇವಾಲಯವಿದೆ. ತಾಂತ್ರಿಕ ಸಂಪ್ರದಾಯದ ಅತೀ ಪುರಾತನ ಹಾಗೂ ಪ್ರಸಿದ್ಧ ದೇಗುಲವಿದಾಗಿದೆ.
Related Articles
ಈ ದೇವಾಲಯದ ವಾಸ್ತುಶಿಲ್ಪಗಳನ್ನು ಗಮನಿಸಿದಾಗ 8-9ನೇ ಶತಮಾನದಲ್ಲಿ ಇದು ನಿರ್ಮಿತವಾದಂತೆ ಕಂಡುಬರುತ್ತದೆ. ಅನಂತರ 11ರಿಂದ 14ನೇ ಶತಮಾನದ ನಡುವೆ ಹಲವು ಬಾರಿ ಇದನ್ನು ಪುನರ್ ನಿರ್ಮಿಸಲಾಗಿದೆ ಎಂಬುದು ಪುರಾತತ್ವ ಶಾಸ್ತ್ರಜ್ಞರ ಅಭಿಮತ. ಹಾಲಿ ದೇವಾಲಯದಲ್ಲಿನ ಶಿಲ್ಪಗಳು 16ನೇ ಶತಮಾನದ್ದಾಗಿದ್ದು ಪ್ರಮುಖವಾಗಿ ನೀಲಾಚಲ ಶೈಲಿ ಹಾಗೂ ಇನ್ನಿತರ ಶೈಲಿಯನ್ನು ಹೊಂದಿದೆ. ನಾಲ್ಕು ಭಾಗಗಳನ್ನು ಒಳಗೊಂಡಿರುವ ಈ ದೇಗುಲ, ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಪ್ರವೇಶವನ್ನು ಹೊಂದಿದೆ. ಶಕ್ತ ಪರಂಪರೆಯ 51 ಪುರಾತನ ಶಕ್ತಿ ಪೀಠಗಳಲ್ಲಿ ಇದು ಒಂದಾಗಿ ಗುರುತಿಸಲ್ಪಟ್ಟಿದೆ. 19ನೇ ಶತಮಾನದಲ್ಲಿ ಬಂಗಾಲದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗಾಗಮಿಸಲಾರಂಭಿಸಿದ ಬಳಿಕ ಈ ದೇವಾಲಯ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿತು.
Advertisement
ದೇವಿಯ ಹತ್ತು ಅವತಾರಗಳನ್ನು ಇಲ್ಲಿ ಆರಾಧಿಸಲಾಗುತ್ತದೆ. ಮಾತಾಂಗಿ ಮತ್ತು ಕಮಲಾ ದೇವತೆಯನ್ನು ಒಳಗೊಂಡ ತ್ರಿಪುರಸುಂದರಿ ಮಾತಾ ಕಾಮಾಖ್ಯಾ ದೇವಿ ಪ್ರಧಾನ ದೇವತೆಯಾಗಿದ್ದಾಳೆ. ಜತೆಯಲ್ಲಿ ಕಾಳಿ, ತಾರಾ, ಭುವನೇಶ್ವರಿ, ಬಗ್ಲಾಮುಖಿ , ಛಿನ್ನಮಸ್ತಾ, ಭೈರವಿ, ಧೂಮಾವತಿ ಹಾಗೂ ಶಿವನ ವಿವಿಧ ರೂಪಗಳಾದ ಕಾಮೇಶ್ವರ, ಸಿದ್ದೇಶ್ವರ, ಕೇದಾರೇಶ್ವರ, ಅಮೃತೋಕೇಶ್ವರ, ಅಘೋರ ಮತ್ತು ಕೋಟಿಲಿಂಗ ದೇವಾಲಯಗಳು ಈ ನೀಲಾಚಲ ಪರ್ವತದ ಸುತ್ತಮುತ್ತವಿದೆ. ಇವೆಲ್ಲವನ್ನೂ ಜತೆಯಾಗಿ ಕಾಮಾಖ್ಯಾ ದೇವಾಲಯ ಸಮುಚ್ಚಯ ಎಂದೇ ಕರೆಯಲಾಗುತ್ತದೆ.
ದೇಶದ ಈಶಾನ್ಯ ಭಾಗದಲ್ಲಿನ ಪ್ರಧಾನ ಶಕ್ತಿಪೀಠವಾಗಿರುವ ಈ ದೇವಾಲಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಯಾತ್ರಿಕರು ಭೇಟಿ ನೀಡುತ್ತಿರುತ್ತಾರೆ. ನವರಾತ್ರಿಯ ಸಂದರ್ಭದಲ್ಲಂತೂ ಕಾಮಾಖ್ಯಾ ಮಾತೆಯ ದರುಶನಕ್ಕಾಗಿ ಭಕ್ತರ ದಂಡೇ ಹರಿದುಬರುತ್ತದೆ.