ಲಿಂಗಸುಗೂರು: ತಾಲೂಕಿನ 15 ಹಳ್ಳಿಗಳ ಮನೆಗಳಿಗೆ ಬೆಂಕಿ ಹಚ್ಚಿ ಅದರಿಂದ ಮಾನಪ್ಪ ವಜ್ಜಲ್ ತಮ್ಮ ಮನೆ ಬೆಳೆಸಿಕೊಳ್ಳಲು ಹೊರಟಿದ್ದಾರೆ. ರೈತರಿಗೆ ಬೇಡವಾದ ಗೊಲ್ಲಪಲ್ಲಿ ಜಲ ವಿದ್ಯುತ್ ಯೋಜನೆ ಕೈಬಿಡಲು ಶೀಘ್ರವೇ ಹೋರಾಟ ಮಾಡಲಾಗುವುದು ಎಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅವರು 15 ಹಳ್ಳಿಗಳ 14 ಸಾವಿರ ಹೆಕ್ಟೇರ್ ಪ್ರದೇಶ ನಾಶ ಮಾಡಲು ಗೊಲ್ಲಪಲ್ಲಿ ಜಲ ವಿದ್ಯುತ್ ಯೋಜನೆ ಜಾರಿಗೆ ತರಲು ಶತ ಪ್ರಯತ್ನ ನಡೆಸಿದ್ದಾರೆ. ಇದು ರೈತರಿಗೆ ಲಾಭವಿಲ್ಲ. ಆದರೆ ಮಾನಪ್ಪ ವಜ್ಜಲ್ ಅವರ ಮನೆ ತುಂಬುವ ಯೋಜನೆಯಾಗಿದೆ. 8 ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲ ವಿದ್ಯುತ್ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಪರವಾನಗಿ ಪಡೆಯಲು ಮಾನಪ್ಪ ವಜ್ಜಲ್ ಈಗಾಗಲೇ ದೆಹಲಿಗೆ ತಿರುಗಾಡುತ್ತಿದ್ದಾರೆ. ಈ ಯೋಜನೆ ಜಾರಿಯಾಗಲು ನಾನು ಬಿಡೋಲ್ಲ. ರೈತರೊಂದಿಗೆ ಹೋರಾಟ ಮಾಡುವೆ. ಇದುಲ್ಲದೆ ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದರು.
ಜೆಡಿಎಸ್ ಪಕ್ಷದಿಂದ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪ್ರತಿ ಬೂತ್ ಮಟ್ಟದಿಂದ ಪಕ್ಷ ಬಲಪಡಿಸುವ ಕೆಲಸ ನಡೆಯುತ್ತಿದೆ. ಪ್ರತಿ ಬೂತ್‌ನಲ್ಲಿ 25 ಜನ ಸದಸ್ಯರನ್ನು ಮಾಡಿ ಪಕ್ಷ ಸಂಘಟಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಜೆಡಿಎಸ್ ಹಿರಿಯ ಮುಖಂಡ ಮಹಾಂತೇಶ ಪಾಟೀಲ್ ಅತ್ನೂರು ಮಾತನಾಡಿ, 15 ವರ್ಷ ಕ್ಷೇತ್ರದಲ್ಲಿ ಆಡಳಿತವೇ ಇಲ್ಲದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಅವರು ಸ್ವಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಆದರೆ, ಕಳೆದ ಚುನಾವಣೆ ಆಗಿರುವ ತಪ್ಪುಗಳನ್ನು ಮುಂದಿನ ಚುನಾವಣೆಯಲ್ಲಿ ಸರಿಪಡಿಸಿಕೊಂಡು ಗೆಲುವು ಸಾಧಿಸುವತ್ತ ಕಾರ್ಯಕರ್ತರು ಗಟ್ಟಿಯಾಗಬೇಕು. ನಾರಾಯಣಪುರ ಬಲದಂಡೆ ಯೋಜನೆ ಜಾರಿಯಲ್ಲಿ ಎಚ್.ಡಿ. ದೇವೇಗೌಡ ಕೊಡುಗೆ ಅಪಾರವಾಗಿದೆ. ರಾಷ್ಟ್ರೀಯ ಪಕ್ಷಗಳನ್ನು ದಿಕ್ಕರಿಸಿ ಜನ ಪ್ರಾದೇಶಿಕ ಪಕ್ಷಗಳ ಒಲವು ತೋರಿಸುತ್ತಿದ್ದಾರೆ. ಮುಂದೆ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ ಎಂದರು.
ಜೆಡಿಎಸ್ ಕಲ್ಯಾಣ ಕರ್ನಾಟಕದ ಉಸ್ತುವಾರಿ ಕೆ.ಕರಿಯಮ್ಮ ನಾಯಕ, ಮುತ್ತಮ್ಮ, ಕೆ.ನಾಗಭೂಷಣ, ಸುನೀತಾ ಕೆಂಭಾವಿ, ಬಸವರಾಜ ಮಾಕಾಪುರ, ಅಮೀರ್ ಬೇಗ್ ಉಸ್ತಾದ್, ರೇಣುಕಾ ಇದ್ದರು.