1957ರಲ್ಲಿ ತೆಲುಗಿನಲ್ಲಿ “ಸುವರ್ಣ ಸುಂದರಿ’ ಎಂಬ ಸಿನಿಮಾವೊಂದು ಬಂದಿತ್ತು. ಈಗ ಮತ್ತೆ ಆ ಟೈಟಲ್ ರಿಪೀಟ್ ಆಗಿದೆ. ಹೊಸಬರ ತಂಡವೊಂದು “ಸುವರ್ಣ ಸುಂದರಿ’ ಎಂಬ ಸಿನಿಮಾ ಮಾಡಲು ಹೊರಟಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಸೂರ್ಯ ಎನ್ನುವವರು ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಸೂರ್ಯ “ಸುವರ್ಣ ಸುಂದರಿ’ಯಲ್ಲಿ ಹೊಸ ಬಗೆಯ ಕಥೆ ಹೇಳಲು ಹೊರಟಿದ್ದಾರಂತೆ. ಇದೊಂದು ಸೂಪರ್ ನ್ಯಾಚುರಲ್ ಥ್ರಿಲ್ಲರ್ ಕಥೆಯಾಗಿದ್ದು, 600 ವರ್ಷಗಳ ಹಿನ್ನೆಲೆಯೊಂದಿಗೆ ಕಥೆ ತೆರೆದುಕೊಳ್ಳುತ್ತದೆಯಂತೆ.
“ಚಿತ್ರದ ಕಥೆ 600 ವರ್ಷಗಳ ಇತಿಹಾಸ ಹೊಂದಿದ್ದು, ಮೂರು ಹಂತಗಳಲ್ಲಿ ಸಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಸಾಕಷ್ಟು ಹೊಸತನಗಳಿರಲಿದೆ. ಚಿತ್ರದಲ್ಲಿ ಶ್ರೀ ಕೃಷ್ಣದೇವರಾಯರ ಕಾಲದ ಆಳ್ವಿಕೆ ವೈಭೋಗವನ್ನು ಕೂಡಾ ತೋರಿಸುವ ಉದ್ದೇಶವಿದೆ. ಚಿತ್ರದಲ್ಲಿ 1960ರ ಕೆಲವು ಸನ್ನಿವೇಶಗಳು ಬರಲಿದ್ದು, ಅದನ್ನು ಕಪ್ಪು-ಬಿಳುಪುವಿನಲ್ಲಿ ತೋರಿಸಲಿದ್ದೇವೆ. ಚಿತ್ರದಲ್ಲಿ 10 ನಿಮಿಷಗಳ ಗ್ರಾಫಿಕ್ ಕೂಡಾ ಬರಲಿದೆ’ ಎಂದು ಸಿನಿಮಾ ಬಗ್ಗೆ ವಿವರ ನೀಡಿದರು ಸೂರ್ಯ.
ಚಿತ್ರದ ಕೆಲವು ಸನ್ನಿವೇಶಗಳನ್ನು ನೀರಿನಡಿ ಚಿತ್ರೀಕರಿಸಬೇಕಾಗಿದ್ದು, ಅನಂತಪುರ, ಕೇರಳ ಅಥವಾ ಬೀದರ್‌ನಲ್ಲಿ ಚಿತ್ರೀಕರಿಸುವ ಆಲೋಚನೆ ಇದೆಯಂತೆ. ಮೊದಲೇ ಹೇಳಿದಂತೆ ಸುಮಾರು ನಾಲ್ಕು ಕೋಟಿ ರೂಪಾಯಿ ಬಜೆಟ್‌ನಲ್ಲಿ ಕನ್ನಡ ಹಾಗೂ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ತೆಲುಗು ಸಿನಿಮಾವನ್ನು ನಿರ್ಮಿಸಲಿದ್ದಾರಂತೆ. ಈಗಾಗಲೇ ಒಂದು ವಾರ ಕಾಲ ತೆಲುಗು ಸಿನಿಮಾದ ಚಿತ್ರೀಕರಣ ನಡೆದು ಹೋಗಿದೆ.
ಚಿತ್ರದಲ್ಲಿ ಪೂರ್ಣ ನಟಿಸುತ್ತಿದ್ದಾರೆ. ಈ ಹಿಂದೆ “ಜೋಶ್’ ಹಾಗೂ “ರಾಧಿಕನ್ ಗಂಡ’ ಚಿತ್ರದಲ್ಲಿ ನಟಿಸಿದ್ದ ಪೂರ್ಣ ಈಗ “ಸುವರ್ಣ ಸುಂದರಿ’ಯಲ್ಲಿ ನಟಿಸುತ್ತಿದ್ದಾರೆ. ಇಲ್ಲಿ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಇವರ ಪಾತ್ರ 60ರ ದಶಕದಲ್ಲಿ ಟ್ರಾವೆಲ್ ಆಗಲಿದ್ದು, ತಿಲಕ್ ಇವರ ಜೋಡಿಯಂತೆ. ಚಿತ್ರದಲ್ಲಿ ಸಾಕ್ಷಿ ರಾಜಕುಮಾರಿಯಾಗಿ ನಟಿಸುತ್ತಿದ್ದಾರೆ. ಇವರಿಗೆ ರಾಮ್ ಎನ್ನುವವರು ಜೋಡಿಯಾಗಿ ನಟಿಸುತ್ತಿದ್ದು, ಇವರ ಜೀವನದಲ್ಲಿ ನಡೆದ ಕೆಲವು ಘಟನೆಗಳ ಮೂಲಕವೂ ಕಥೆ ಮುಂದುವರೆಯಲಿದೆಯಂತೆ. ಚಿತ್ರಕ್ಕೆ ಸಾಯಿಕಾರ್ತಿಕ್ ಸಂಗೀತ ನೀಡುತ್ತಿದ್ದಾರೆ. ಹಳೆಯ ದಿನಗಳ ಮೂಡ್ ಅನ್ನು ಸಂಗೀತದ ಮೂಲಕ ತರುವುದು ಅವರಿಗೆ ಚಾಲೆಂಜಿಂಗ್ ಕೆಲಸವಂತೆ. ಈಶ್ವರ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.