Advertisement
ಬುಧವಾರ ಶಾಲಿಮಾರ್ ಹಾಲ್ ನಲ್ಲಿ ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿ ಗ್ರಾಮದ ವಧು ಮತ್ತು ಹ್ಯಾರಗುಡ್ಡೆ ಗ್ರಾಮದ ವರನ ವಿವಾಹ ಕಾರ್ಯಕ್ರಮ ಏರ್ಪಾಡಾಗಿತ್ತು. ಈ ವೇಳೆ ವರನ ಕಡೆಯವರು ವಧುವಿಗೆ ನೀಡಿದ್ದ ಆಭರಣಗಳನ್ನು ಖದೀಮರು ಎಗರಿಸಿದ್ದಾರೆ. ಅಂದಾಜು ಮೂರು ಲಕ್ಷ ಮೌಲ್ಯದ ಚಿನ್ನ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಮದುವೆ ವೇಳೆ ವರನ ಕಡೆಯವರು ನೀಡಿದ್ದ ಚಿನ್ನದಲ್ಲಿ ನೆಕ್ಲೆಸ್ ಮತ್ತು ಓಲೆಗಳನ್ನು ವಧುವಿನ ಕೊಠಡಿಯಲ್ಲಿ ಇರಿಸಿ ರೂಮಿನ ಲಾಕ್ ಮಾಡಿ ಎಲ್ಲರು ಮುಹೂರ್ತ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ವಧುವಿನ ಕೊಠಡಿಯ ಕಿಟಕಿ(ಸ್ಲೈಡಿಂಗ್ ಗ್ಲಾಸ್ ಕಿಟಕಿ)ಯಿಂದ ಒಳಬಂದಿರುವ ಕಳ್ಳರು ರೂಮನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಚಿನ್ನವನ್ನು ಎಗರಿಸಿ ಕಿಟಕಿಯಿಂದಲೇ ಪರಾರಿಯಾಗಿದ್ದಾರೆ. ಮುಹೂರ್ತದ ವೇಳೆ ವಧುವಿನ ಕಡೆಯವರು ಕೊಠಡಿಗೆ ಹೋಗಲು ಮುಂದಾದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ವಿವಾಹ ಸಂದರ್ಭದಲ್ಲಿ ತೀವ್ರ ಗೊಂದಲ ಉಂಟಾಗಿದೆ. ತಕ್ಷಣ ಕಟ್ಟಡ ಮಾಲೀಕರಿಗೆ ವಿಷಯ ಮುಟ್ಟಿಸಿದ್ದು, ಮಾಲೀಕರು ಮತ್ತು ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಳ್ಳರು ಕಿಟಕಿ ಮೂಲಕ ಒಳಬಂದಿರುವುದು ಬೆಳಕಿಗೆ ಬಂದಿದೆ.
Related Articles
Advertisement
ಈ ಬಗ್ಗೆ ವಿಷಯ ತಿಳಿದ ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ ಕಟ್ಟಡದಲ್ಲಿ ಸುಮಾರು 16 ಸಿಸಿ ಕ್ಯಾಮರಗಳು ಇವೆ ಎಂದು ತಿಳಿದುಬಂದಿದ್ದು, ಸಿಸಿ ಕ್ಯಾಮರಗಳ ದೃಶ್ಯಗಳು ಕಳ್ಳರ ಪತ್ತೆಗೆ ಸಹಾಯಕವಾಗುವ ಸಾಧ್ಯತೆಯಿದೆ. ಈಗಾಗಲೇ ಇಬ್ಬರು ವ್ಯಕ್ತಿಗಳ ಚಹರೆ ಪತ್ತೆಯಾಗಿದೆ ಎನ್ನಲಾಗಿದೆ.
ಮದುವೆ ಮನೆಯವರು ಇನ್ನೂ ಅಧಿಕೃತವಾಗಿ ಠಾಣೆಗೆ ದೂರು ನೀಡಿಲ್ಲ, ಗುರುವಾರ ಬೆಳಿಗ್ಗೆ ಈ ಬಗ್ಗೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಲಿದ್ದಾರೆ.
ನಷ್ಟ ಭರಿಸಿಕೊಡುವ ಭರವಸೆ
ವಧುವಿನ ಕೊಠಡಿಗೆ ಸರಳುಗಳಿಲ್ಲದ ಮಾಮೂಲಿ ಕಿಟಕಿ ಇರಿಸಿರುವ ಬಗ್ಗೆ ಕಟ್ಟಡ ಮಾಲೀಕರ ವಿರುದ್ಧ ವಧುವರರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯದ ಬಗ್ಗೆ ಕಟ್ಟಡ ಮಾಲೀಕರು ವಿಷಾದ ವ್ಯಕ್ತಪಡಿಸಿದ್ದು, ಚಿನ್ನ ಪತ್ತೆಯಾಗದಿದ್ದಲ್ಲಿ ನಿರ್ಲಕ್ಷ್ಯದ ನೈತಿಕ ಹೊಣೆ ಹೊತ್ತು ಆಗಿರುವ ನಷ್ಟಭರಿಸಿಕೊಡುವುದಾಗಿ ವಧುವರರ ಕಡೆಯವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219