Advertisement

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

03:02 AM Jul 10, 2020 | Hari Prasad |

ತಿರುವನಂತಪುರ: ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಇತ್ತೀಚಿನ ಚಿನ್ನದ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದ ನಂತರ, ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಅವರ ಪಕ್ಷವಾದ ಸಿಪಿಎಂ ಹಾಗೂ ಎಲ್‌ಡಿಎಫ್ ಅವರನ್ನು ಏಕಾಂಗಿಯನ್ನಾಗಿಸಿವೆ.

Advertisement

ಪ್ರಕರಣದಲ್ಲಿ ಪಿಣರಾಯಿ ಅವರ ಆಪ್ತರ ಹೆಸರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ LDFನ ಪ್ರಮುಖ ಪಕ್ಷಗಳಾದ ಸಿಪಿಐ, ಸಿಪಿಎಂ ನಡುವೆ ವಾಗ್ಯುದ್ಧ ನಡೆದಿದೆ. ಇತ್ತೀಚೆಗೆ, ಸರಕಾರದಲ್ಲಿ ಸಿಪಿಐ ನಾಯಕ ಜೋಸ್‌ ಕೆ. ಮಣಿ ಗುಂಪುಗಾರಿಕೆ ನಡೆಸುತ್ತಿದ್ದಾರೆಂದು ಸಿಪಿಎಂ ಉಗ್ರವಾಗಿ ಪ್ರತಿರೋಧ ವ್ಯಕ್ತಪಡಿಸಿತ್ತು.

ಈಗ, ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಪಿಣರಾಯಿ ಆಪ್ತರು ಸಿಲುಕಿರುವುದು ಸಿಪಿಎಂ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿಪಿಐಗೆ ಸುವರ್ಣಾವಕಾಶ ತಂದು ಕೊಟ್ಟಂತಾಗಿದೆ. ಅದರ ಪರಿಣಾಮದಿಂದಲೇ, ಎಂ. ಶಿವಶಂಕರ್‌ ಅವರನ್ನು ಅಮಾನತು ಮಾಡಲಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ ಎಂದು ‘ಮಾತೃಭೂಮಿ ಇಂಗ್ಲಿಷ್‌’ ವರದಿ ಮಾಡಿದೆ. ಇಷ್ಟಾದರೂ, ಸಿಪಿಎಂ ಆಗಲೀ, ಸಿಪಿಐ ಆಗಲೀ ಅಥವಾ LDFನ ಯಾವುದೇ ಅಂಗ ಪಕ್ಷವಾಗಲೀ ಪಿಣರಾಯಿ ಬೆನ್ನಿಗೆ ನಿಲ್ಲುತ್ತಿಲ್ಲ.

ಚಿನ್ನ ಕಳ್ಳ ಸಾಗಣೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೇ ವಹಿಸುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ, LDFನ ಎಲ್ಲಾ ಅಂಗಪಕ್ಷಗಳೂ ಸ್ತಬ್ಧವಾಗಿವೆ. ಇಂಥ ಸಂದರ್ಭದಲ್ಲಿ ಮುಖ್ಯಮಂತ್ರಿ ಬೆನ್ನಿಗೆ ನಿಂತರೆ ಮುಂದಿನ ವರ್ಷದ ಚುನಾವಣೆಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಮನಗಂಡಿರುವ ಪಕ್ಷಗಳು ಕಾದು ನೋಡುವ ತಂತ್ರಗಾರಿಕೆ ಅನುಸರಿಸಲಾರಂಭಿಸಿವೆ. ಪ್ರಕರಣದಲ್ಲಿ ತಮ್ಮನ್ನು, ಸರಕಾರ ರಕ್ಷಿಸಿಕೊಳ್ಳುವ ಹೊಣೆ ಪಿಣರಾಯಿ ಹೆಗಲಿಗೆ ಬಂದಿದೆ ಎನ್ನಲಾಗಿದೆ.

ವ್ಯಾಪಕ ಹುಡುಕಾಟ: ಕೇರಳದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಚಿನ್ನದ ಕಳ್ಳ ಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಅವರಿಗಾಗಿ ತೀವ್ರ ಹುಡು ಕಾಟ ನಡೆಸಲಾಗಿದೆ. ಮತ್ತೊಂದೆಡೆ, ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್‌ ಅಧಿಕಾರಿಗಳು, ಯುಎಇ ದೂತಾವಾಸ ಕಚೇರಿಯಲ್ಲಿರುವ ಉನ್ನತ ಅಧಿಕಾರಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡು ತುಂಬಾ ದಿನಗಳಿಂದ ಚಿನ್ನದ ಕಳ್ಳಸಾಗಣೆ ಮಾಡಲಾಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

Advertisement

ಜಾಮೀನಿಗಾಗಿ ಸ್ವಪ್ನ ಅರ್ಜಿ: ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌, ಕೇರಳ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ರಾತ್ರಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಸಿಬಿಐ ತನಿಖೆ ಏಕಿಲ್ಲ?:ಇದೇ ವೇಳೆ ಪ್ರಕರಣವನ್ನು ಸಿಬಿಐಗೆ ಏಕೆ ವಹಿಸಲಿಲ್ಲ ಎಂದು ಬಿಜೆಪಿ ನಾಯಕ ಕೆ.ಸುರೇಂದ್ರನ್‌ ಪ್ರಶ್ನೆ ಮಾಡಿದ್ದಾರೆ. ಪ್ರಕರಣದಲ್ಲಿ ವಿಧಾನಸಭೆಯ ಸ್ಪೀಕರ್‌ ಹೆಸರೂ ಕೇಳಿಬಂದಿದೆ. ಅವರನ್ನೇಕೆ ಆ ಹುದ್ದೆಯಿಂದ ತೆರವುಗೊಳಿಸಲು ಸಿಎಂ ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕಸ್ಟಮ್ಸ್‌ ಕಸ್ಟಡಿಗೆ ಸರಿತ್‌: ಜು. 4ರಂದು ಚಿನ್ನದ ಕಳ್ಳಸಾಗಣೆ ಮಾಡುವ ಪ್ರಯತ್ನದಲ್ಲಿದ್ದಾಗ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತನಾಗಿದ್ದ ಸರಿತ್‌ ಕುಮಾರ್‌ನನ್ನು ಈ ತಿಂಗಳ 15ರವರೆಗೆ ಕಸ್ಟಮ್ಸ್‌ ಅಧಿಕಾರಿಗಳ ವಶಕ್ಕೆ ಒಪ್ಪಿಸಿ, ಕೊಚ್ಚಿಯ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ಪ್ರಕರಣಕ್ಕೆ ಎನ್‌ಐಎ ತನಿಖೆ
ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಎನ್‌ಐಎಯಿಂದ ನಡೆಸಲು ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಈ ಪ್ರಕರಣ ರಾಷ್ಟ್ರೀಯ ಭದ್ರತೆಗೆ ಸವಾಲಾಗಿ ಪರಿಣಮಿಸುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿವರಣೆ ನೀಡಿದೆ. ಕೇರಳ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಸಿಬಿಐ ತನಿಖೆಗೆ ಒತ್ತಾಯಿಸಿ ಪ್ರಧಾನಿಯವರಿಗೆ ಪತ್ರ ಬರೆದಿದ್ದರು.

ಇದಾದ ಬಳಿಕ ಖುದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಮಗ್ರ ತನಿಖೆಗೆ ಒತ್ತಾಯಿಸಿ ಗುರುವಾರ ಪತ್ರ ಬರೆದು ಕೇಂದ್ರದ ಎಲ್ಲಾ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ ಸತ್ಯಾಂಶ ಹೊರ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next