Advertisement

ಅಧ್ಯಾದೇಶ ಮಾರ್ಗ?; ವಿಧಾನ ಪರಿಷತ್‌ನಲ್ಲಿ ಮಂಡನೆಯಾಗದ ಗೋಹತ್ಯೆ ನಿಷೇಧ ಮಸೂದೆ

12:11 AM Dec 11, 2020 | mahesh |

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರದ ಮಹತ್ವಾಕಾಂಕ್ಷಿ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಮಸೂದೆ- 2020′ (ಗೋಹತ್ಯೆ ನಿಷೇಧ ಕಾಯ್ದೆ) ಪರಿಷತ್‌ನಲ್ಲಿ ಮಂಡನೆಯಾಗದೆ ಹೋಯಿತು!

Advertisement

ಬುಧವಾರವೇ ವಿಧಾನಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡು, ಗುರುವಾರ ವಿಧಾನಪರಿಷತ್‌ಗೆ ಬರಬೇಕಿತ್ತು. ಆದರೆ ವಿಪಕ್ಷದ ನಡೆಯು ಸರಕಾರದ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ್ದು ಮತ್ತು ಪರಿಷತ್‌ ಕಲಾಪವನ್ನು ಸಭಾಪತಿಗಳು ಮುಂದೂಡಿದ್ದರಿಂದ ಮಸೂದೆ ಮಂಡನೆ
ಯಾಗಲೇ ಇಲ್ಲ. ಹೀಗಾಗಿ ಸರಕಾರವು ಅಧ್ಯಾದೇಶ ಹೊರಡಿಸುವ ಅಥವಾ ವಿಶೇಷ ಅಧಿವೇಶನ ಕರೆದು ಮಸೂದೆಗೆ ಅಂಗೀಕಾರ ಪಡೆಯುವ ಸಾಧ್ಯತೆ ಇದೆ.

ಸಭಾಪತಿ ನೀಡಿದ ಆಘಾತ
ಪರಿಷತ್‌ ಸಭಾಪತಿ ಕಲಾಪವನ್ನು ದಿಢೀರ್‌ ಅನಿರ್ದಿಷ್ಟಾವಧಿಗೆ ಮುಂದೂಡಿ ಆಘಾತ ನೀಡಿದರು. ಆದರೆ ಸದನ ಸಲಹಾ ಸಮಿತಿಯಲ್ಲಿ ನಿರ್ಧಾರವಾಗದೆ, ಏಕಾಏಕಿ ಕಲಾಪ ಮುಂದೂಡಲಾಗಿದೆ. ಹಾಗಾಗಿ ವಿಶೇಷ ಅಧಿವೇಶನ ಕರೆಯಲು ಸಭಾಪತಿಗಳಿಗೆ ಸೂಚಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲು ಸರಕಾರ ಉದ್ದೇಶಿ ಸಿದೆ. ಇದು ಸಾಧ್ಯವಾಗದಿದ್ದರೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧ್ಯಾದೇಶ ತರುವ ಯೋಚನೆಯೂ ಇದೆ.

ಕೆಳಮನೆಯಲ್ಲಿ ಅಂಗೀಕಾರಗೊಂಡ ಮಸೂದೆಯನ್ನು ಗುರುವಾರ ಮೇಲ್ಮನೆಯಲ್ಲಿ ಕೈಗೆತ್ತಿಕೊಳ್ಳುವ ಲೆಕ್ಕಾಚಾರ ಇತ್ತು. ಅದರಂತೆ ಕಾರ್ಯಕಲಾಪಗಳ ಪಟ್ಟಿಯಲ್ಲೂ ವಿಷಯ ಸೇರಿಸಲಾಗಿತ್ತು. ಪರಿಷತ್ತಿನ ಬಿಜೆಪಿಯ ಎಲ್ಲ ಸದಸ್ಯರು ಕೇಸರಿ ಶಲ್ಯ ಧರಿಸಿ ಸಿದ್ಧತೆಗಳೊಂದಿಗೆ ಹಾಜರಾಗಿದ್ದರು. ಆದರೆ ವಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಆ ಮಸೂದೆಯೇ ಮಂಡನೆಯಾಗದಂತೆ ಮಾಡಿದವು.

ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಎರಡು-ಮೂರು ಮಸೂದೆಗಳು ಸುದೀರ್ಘ‌ ಚರ್ಚೆಯೊಂದಿಗೆ ಅಂಗೀಕಾರಗೊಂಡವು. ಅನಂತರ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು, ಗೋಹತ್ಯೆ ನಿಷೇಧ ಕಾಯ್ದೆಯನ್ನು ಶುಕ್ರವಾರ ಬೆಳಗ್ಗೆ ಮಂಡಿಸಲಾಗುವುದು ಎಂದು ಸಭೆಯ ಗಮನಕ್ಕೆ ತಂದರು. ಅಲ್ಲಿಯ ವರೆಗೆ ಕಲಾಪ ಮೊಟಕುಗೊಳ್ಳಲಿರುವ ಯಾವುದೇ ಸುಳಿವು ನೀಡದ ಸಭಾಪತಿ, ಕೊನೆಯ ಗಳಿಗೆಯಲ್ಲಿ “ಗ್ರಾ. ಪಂ.ಚುನಾವಣೆ ಹಿನ್ನೆಲೆಯಲ್ಲಿ ಡಿ. 10 ರಿಂದ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಲಾಗಿದೆ’ ಎಂದು ಪ್ರಕಟಿಸಿದರು.

Advertisement

ಅವಿಶ್ವಾಸ ಮಂಡನೆ
ಗುರುವಾರ ಸಂಜೆ ಸದಸ್ಯ ಆಯನೂರು ಮಂಜುನಾಥ್‌ ಮತ್ತೆ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾದರು. ಆಗ ಪ್ರತಿಕ್ರಿಯಿಸಿದ ಸಭಾಪತಿಗಳು, “ಅವಿಶ್ವಾಸ ನಿರ್ಣಯ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಂಡಿದ್ದೇನೆ. ಆ ನಿರ್ಣಯವನ್ನು ಅವಿಶ್ವಾಸ ನಿರ್ಣಯ ಮಂಡನೆ ನೋಟಿಸ್‌ ನೀಡಿದ ಸದಸ್ಯರಿಗೆ ತಲುಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

ರಾಜ್ಯಪಾಲರಿಗೆ ದೂರು: ಮಾಧುಸ್ವಾಮಿ
ಸಭಾಪತಿಗಳ ನಡೆ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಿದ್ದು, ಶುಕ್ರವಾರ ಸ್ವತಃ ಸಭಾಪತಿಗಳಿಗೂ ಕಲಾಪ ಮುಂದುವರಿಸುವಂತೆ ಪತ್ರ ಬರೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸರಕಾರದ ಮುಂದಿರುವ ದಾರಿಗಳು
01ರಾಜ್ಯಪಾಲರ ಮೊರೆಹೋಗಬಹುದು. ವಿಶೇಷ ಅಧಿವೇಶನ ಕರೆಯಲು ಒತ್ತಡ ತರಬಹುದು.
02 ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧ್ಯಾದೇಶ ಹೊರಡಿಸಬಹುದು.
03ಗ್ರಾ.ಪಂ. ಚುನಾವಣೆ ಪೂರ್ಣಗೊಳ್ಳುವ ವರೆಗೆ ಕಾಯಬಹುದು.
04ಜನವರಿಯಲ್ಲಿ ಜಂಟಿ ಅಧಿವೇಶನ ನಡೆಯಲಿದ್ದು ಆಗ ಮಂಡಿಸಬಹುದು.

ವಿಧಾನ ಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ
ಕಾಯ್ದೆಗೆ ಅಂಗೀಕಾರ ಸಿಗದಂತೆ ಮಾಡಲು ವಿಪಕ್ಷಗಳು ಯೋಚಿಸಿದ್ದವು. ನಾವು ಅವರಿಗಿಂತ ಚಾಣಾಕ್ಷರಿದ್ದೇವೆ. ಮುಂದಿನ
ಸಚಿವ ಸಂಪುಟದಲ್ಲಿ ಏನಾಗುತ್ತದೆ ಕಾದು ನೋಡಿ.
– ಆರ್‌. ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next