ಚೆನ್ನೈ: ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ಸಮಸ್ಯೆಯನ್ನು ನೀಗಿಸಲು ಕೇಂದ್ರ ಸರಕಾರ ಹೊಸದೊಂದು ಯೋಜನೆ ರೂಪಿಸಿದೆ.
ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಪ್ರಸ್ತಾವದಂತೆ ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ, ಕರ್ನಾಟಕದ ರೈತರಿಗೆ ನೀಡುವ ನೀರನ್ನು ತಮಿಳುನಾಡಿಗೆ ಬಿಡಬೇಕಾದ ಪ್ರಮೇಯವೇ ಇರುವುದಿಲ್ಲ. ಜತೆಗೆ ತಮಿಳುನಾಡಿಗೆ ಕರ್ನಾಟಕದಿಂದ ನೀಡಲಾಗುವ ಕಾವೇರಿ ನೀರಿನ ಅಗತ್ಯ ಕಡಿಮೆಯಾಗಿ, ರಾಜ್ಯದಲ್ಲಿ ಕಾವೇರಿ ನೀರನ್ನು ಅವಲಂಬಿಸಿರುವ ಭಾಗಗಳಿಗೆ ಸಾಕಷ್ಟು ನೀರಿನ ಪೂರೈಕೆ ಸಾಧ್ಯವಾಗಲಿದೆ.
ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ರೂಪಿಸಿದ ಯೋಜನೆಯ ಪ್ರಕಾರ, ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸಲಾಗುತ್ತದೆ. ಗೋದಾವರಿ ನದಿಯಲ್ಲಿ ಸದ್ಯ 3 ಸಾವಿರ ಟಿಎಂಸಿ ನೀರು ಸಮುದ್ರಕ್ಕೆ ಹರಿದು ಪೋಲಾಗುತ್ತಿದೆ. ಇದನ್ನು ಬಳಸಿಕೊಂಡರೆ ದಕ್ಷಿಣ ರಾಜ್ಯಗಳ ನೀರಿನ ಸಮಸ್ಯೆ ನಿವಾರಣೆ ಯಾಗಲಿದೆ. ಈ ಸಂಬಂಧ 2 ಯೋಜನೆಗಳ ಪ್ರಸ್ತಾವ ಸಚಿವಾಲಯದ ಮುಂದಿದೆ. ಈ ಸಂಬಂಧ ಮುಖ್ಯ ಮಂತ್ರಿಗಳ ಸಭೆ ನಡೆಸಿ ಎಲ್ಲ ರಾಜ್ಯಗಳೂ ಸಮ್ಮತಿಸಿದರೆ ಮುಂದುವರಿಯಲಾಗುವುದು. ಇದು ರಾಷ್ಟ್ರೀಯ ಯೋಜನೆಯಾಗಿದ್ದರಿಂದ ಕೇಂದ್ರ ಸರಕಾರವೇ ಜಾರಿ ಗೊಳಿಸಿ, ಶೇ. 90 ವೆಚ್ಚವನ್ನು ಭರಿಸಲಿದೆ. ಶೇ.10ರಷ್ಟನ್ನು ಮಾತ್ರ ರಾಜ್ಯ ಸರಕಾರಗಳು ಭರಿಸಬೇಕಾಗುತ್ತದೆ. ಈ ಯೋಜನೆ ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣಕ್ಕೆ ಅತ್ಯಂತ ಮಹತ್ವದ್ದಾಗಿರಲಿದೆ ಎಂದಿದ್ದಾರೆ ಸಚಿವ ನಿತಿನ್ ಗಡ್ಕರಿ.
ಎಲ್ಲಿಂದ ಎಲ್ಲಿಗೆ ನೀರು?: ಜಲ ಸಂಪನ್ಮೂಲ ಇಲಾಖೆಯು ಎರಡು ಯೋಜನೆಗಳನ್ನು ರೂಪಿಸಿದೆ. ಈ ಪೈಕಿ ಒಂದು ಯೋಜನೆಯಲ್ಲಿ ಗೋದಾವರಿ ನೀರನ್ನು ಕಾವೇರಿಗೆ ತರಲಾಗುತ್ತದೆ. ಗೋದಾವರಿ ನೀರನ್ನು ಆಂಧ್ರಪ್ರದೇಶದ ನಾಗಾರ್ಜುನ ಸಾಗರ ಅಣೆಕಟ್ಟೆಯ ಮೂಲಕ ಪೊಲ್ಲಾವರಂಗೆ ತಂದು ಕೃಷ್ಣಾ ನದಿಗೆ ಸಾಗಿಸಲಾಗುತ್ತದೆ. ಅಲ್ಲಿಂದ ನೀರು ಪೆನ್ನಾರ್‌ನಲ್ಲಿರುವ ಸೋಮಶಿಲೆ ಅಣೆಕಟ್ಟೆಗೆ ಬರುತ್ತದೆ. ಅನಂತರ ಇದನ್ನು ತಿರುಚಿರಾಪಳ್ಳಿ ಸಮೀಪದ ಗ್ರಾಂಡ್ ಅಣೆಕಟ್ಟಿನ ಮೂಲಕ ಕಾವೇರಿ ನದಿಗೆ ತಿರುಗಿಸಲಾಗುತ್ತದೆ.
ನಾಲೆಯಿಲ್ಲ , ಸ್ಟೀಲ್ ಪೈಪ್
ಸಾಂಪ್ರದಾಯಿಕ ನದಿ ತಿರುವು ಯೋಜನೆ ಯಂತೆ ಈ ಯೋಜನೆಯಲ್ಲಿ ನಾಲೆಗಳ ಮೂಲಕ ನೀರು ಸಾಗಿಸುವುದಿಲ್ಲ. ಬದಲಿಗೆ ಸ್ಟೀಲ್ ಪೈಪ್‌ಗ್ಳನ್ನು ಬಳಸಲಾಗುತ್ತದೆ ಎಂದು ಗಡ್ಕರಿ ಹೇಳಿದ್ದಾರೆ. ಇದರಿಂದ ನೀರು ಪೋಲಾ ಗುವ ಪ್ರಮಾಣ ಕಡಿಮೆಯಾಗಲಿದೆ.
ಸಾವಿರ ಕಿ.ಮೀ. ಹರಿಯಲಿದೆ
ಈ ಯೋಜನೆ ಜಾರಿಯಾದರೆ ಮೂರು ಅಣೆಕಟ್ಟೆಗಳು ಸಂಪರ್ಕಗೊಳ್ಳಲಿವೆ. ಇವುಗಳನ್ನು ಸಂಪರ್ಕಿಸಲು ಸುಮಾರು ಸಾವಿರಕ್ಕೂ ಹೆಚ್ಚು ಕಿ.ಮೀ. ಉದ್ದದ ಸ್ಟೀಲ್ ಪೈಪ್‌ಗ್ಳನ್ನು ಅಳವಡಿಸಬೇಕಾಗುತ್ತದೆ. ಗೋದಾವರಿಯ ನೀರು ತಿರುಚಿರಾಪಳ್ಳಿಯವರೆಗೆ ಸಾಗಲು ವಾರಗಳೇ ಬೇಕಾಗಬಹುದು.