Advertisement

11 ವರ್ಷಗಳ ಹಿಂದೆ ದಾವಣಗೆರೆಗೆ ಆಗಮಿಸಿದ್ದ ದೇವರು!

06:14 AM Jan 22, 2019 | Team Udayavani |

ದಾವಣಗೆರೆ: ಸೋಮವಾರ ದೇವರ ಭೇಟಿಗೆ ತೆರಳಿರುವ ನಡೆದಾಡುವ ದೇವರು…. ತುಮಕೂರಿನ ಸಿದ್ದಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿಯವರು ಬರೋಬ್ಬರಿ 11 ವರ್ಷಗಳ ಹಿಂದೆ ಅಂದರೆ 21-1-2007 ರಂದು ದಾವಣಗೆರೆಗೆ ಆಗಮಿಸಿದ್ದರು!

Advertisement

ರಾಂ ಆ್ಯಂಡ್‌ ಕೋ ವೃತ್ತದಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರು ಆಗಮಿಸಿದ್ದರು. 11 ವರ್ಷಗಳ ನಂತರ ಅದೇ ದಿನ (21.1.2019) ಡಾ| ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿರುವುದು ಆಕಸ್ಮಿಕವೋ…, ಕಾಕತಾಳಿಯವೋ… ಅಚ್ಚರಿಯೋ…, ದೈವ ಇಚ್ಛೆಯೋ… ಎನ್ನುವ ಭಾವನೆ ದಾವಣಗೆರೆಯ ಭಕ್ತಾದಿಗಳದ್ದಾಗಿದೆ.ಆಗಲೇ ಶತಾಯುಷಿಗಳಾಗಿದ್ದ ಡಾ| ಶಿವಕುಮಾರ ಸ್ವಾಮೀಜಿಯವರು 2 ಗಂಟೆಗೂ ಅಧಿಕ ಕಾಲ ದಾವಣಗೆರೆಯಲ್ಲಿದ್ದರು.

ಡಾ| ಶಿವಕುಮಾರ ಸ್ವಾಮೀಜಿಯವರ ನೇತೃತ್ವದಲ್ಲೇ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ನೆರವೇರಿದವು. ಕಳಸಾರೋಹಣ ಕಾರ್ಯಕ್ರಮವನ್ನು ಸಾಂಗೋಪವಾಗಿ ನೆರವೇರಿಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದ್ದರು. ಡಾ| ಶಿವಕುಮಾರ ಸ್ವಾಮೀಜಿಯವರ ದಾವಣಗೆರೆಯ ಭೇಟಿ ಅದುವೇ ಕೊನೆ.

ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ| ಶಿವಕುಮಾರ ಸ್ವಾಮೀಜಿಯವರು ನಗರಸಭೆ ಮಾಜಿ ಅಧ್ಯಕ್ಷ ಜಂಬಗಿ ಶರಣಪ್ಪ ಅವರ ನಿವಾಸಕ್ಕೆ ಪಾದಪೂಜೆಗೆ ತೆರಳಿದ್ದರು.

ಪಾದಪೂಜೆ ಕಾರ್ಯಕ್ರಮ ಮುಗಿದ ನಂತರ ಬಹು ಕಾಲ ಇದ್ದ ಡಾ| ಶಿವಕುಮಾರ ಸ್ವಾಮೀಜಿಯವರು ಸರ್ವರಿಗೂ ದರ್ಶನ, ಆಶೀರ್ವಾದ ಭಾಗ್ಯ ನೀಡಿದ್ದರು. ಸಾಕಷ್ಟು ಹೊತ್ತು ಕಳೆದ ಡಾ| ಶಿವಕುಮಾರ ಸ್ವಾಮೀಜಿಯವರು ಎಲ್ಲರೂ ಸಂತೃಪ್ತಗೊಂಡ ನಂತರವೇ ತುಮಕೂರಿಗೆ ತೆರಳಿದರು ಎಂದು ಜಂಬಗಿ ಶರಣಪ್ಪ ಅವರ ಪುತ್ರ ರಾಧೇಶ್‌ ಮತ್ತು ಸೊಸೆ ಜ್ಯೋತಿ ಸ್ಮರಿಸುತ್ತಾರೆ.

Advertisement

ಡಾ| ಶಿವಕುಮಾರ ಸ್ವಾಮೀಜಿಯವರು ಮನೆಗೆ ಬಂದು, ಪಾದಪೂಜೆಯಲ್ಲಿ ಭಾಗವಹಿಸಿ ತೆರಳಿದ ನಂತರ ಮನೆಯಲ್ಲಿ ಒಂದು ರೀತಿಯ ಧನಾತ್ಮಕ ಶಕ್ತಿಯ ಅಂಶದ ಭಾವನೆ ಈ ಕ್ಷಣಕ್ಕೂ ಬರುತ್ತದೆ. ಹಾಗಾಗಿಯೇ ಡಾ| ಶಿವಕುಮಾರ ಸ್ವಾಮೀಜಿಯವರ ಪಾದಪೂಜೆ ನೆರವೇರಿದ ಸ್ಥಳವನ್ನು ಅತ್ಯಂತ ಜತನದಿಂದ ಕಾಪಾಡಲಾಗುತ್ತಿದೆ. ಮನೆಯ ದುರಸ್ತಿ ಸಂದರ್ಭದಲ್ಲೂ ಆ ಜಾಗಕ್ಕೆ ಯಾರೂ ಕಾಲಿಡದಂತೆ ನಿಗಾವಹಿಸಲಾಗಿತ್ತು. ಆ ಜಾಗ ತಮ್ಮ ಕುಟುಂಬಕ್ಕೆ ಅಷ್ಟೊಂದು ಪೂಜ್ಯನೀಯವಾಗಿದೆ ಎಂದು ಜ್ಯೋತಿ ಜಂಬಗಿ ಸ್ಮರಿಸುತ್ತಾರೆ.

ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ನಂತರ ಡಾ| ಶಿವಕುಮಾರ ಸ್ವಾಮೀಜಿಯವರು ಸಾರ್ವತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿಲ್ಲ. ಕೈಗಾರಿಕೋದ್ಯಮಿ ಎಸ್‌.ಎಸ್‌. ಗಣೇಶ್‌ ಪುತ್ರಿಯ ವಿವಾಹ ಸಂದರ್ಭದಲ್ಲಿ ಪಾದಪೂಜೆಗೆ ಆಗಮಿಸಿದ್ದರು. ಸ್ಫೂರ್ತಿ ಪ್ರಕಾಶನದ 16ನೇ ವಾರ್ಷಿಕೋತ್ಸವಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿತ್ತು. ಆದರೆ, ಆರೋಗ್ಯದ ಕಾರಣಕ್ಕೆ ಡಾ| ಶಿವಕುಮಾರ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸದೇ ಇದ್ದರೂ…. ನನ್ನ ಆಶೀರ್ವಾದ ಸದಾ ನಿಮ್ಮೊಂದಿಗೆ ಇರುತ್ತದೆ. ಕಾರ್ಯಕ್ರಮ ನಡೆಸಿ… ಎಂದು ಆಶೀರ್ವದಿಸಿದ್ದರು. ಕಾರ್ಯಕ್ರಮದ ನಂತರ ಸಿದ್ದಗಂಗಾ ಮಠಕ್ಕೆ ತೆರಳಿದ್ದಾಗ ಸನ್ಮಾನಿಸಿ, ಕಾರ್ಯಕ್ರಮದ ಬಗ್ಗೆ ವಿಚಾರಿಸಿದ್ದರು ಎಂದು ಸ್ಫೂರ್ತಿ ಪ್ರಕಾಶನದ ಎಂ. ಬಸವರಾಜ್‌ ಸ್ಮರಿಸುತ್ತಾರೆ.

ಶ್ರೀಗಳನ್ನು ನೋಡಿದ್ದೇ ನಮ್ಮ ಪುಣ್ಯ 
ದಾವಣಗೆರೆ: ಈ ಶತಮಾನದ ಶಿವಯೋಗಿ, ನಡೆದಾಡುವ ದೇವರು ಎಂದೇ ಹೆಸರುವಾಸಿ ಯಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ಲಿಂಗೈಕ್ಯರಾಗಿರುವುದು ಕರ್ನಾಟಕದ ಜನತೆಗೆ ಅತೀವ ದುಃಖವನ್ನು ಉಂಟು ಮಾಡಿದೆ. ಜಾತಿ, ಮತದ ಭೇದವಿಲ್ಲದೆ
ಲಕ್ಷಾಂತರ ವಿದ್ಯಾರ್ಥಿಗಳಿಗೆ ಅಕ್ಷರ ಹಾಗೂ ಅನ್ನ ದಾಸೋಹ ಕಲ್ಪಿಸಿದ ದಿವ್ಯ ಚೇತನ ಶಿವಕುಮಾರ ಶ್ರೀಗಳು. ವಿಧಾನ
ಪರಿಷತ್‌ ಆಗ್ನೇಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿದ್ದಾಗ ಶ್ರೀಗಳ ದರ್ಶನಾಶೀರ್ವಾದ ಪಡೆಯುವ ಸೌಭಾಗ್ಯ ನನ್ನದಾಗಿತ್ತು.

ಶ್ರೀಮಠಕ್ಕೆ ಯಾರೇ ಬಂದರೂ ಅವರಿಗೆ ಪ್ರಸಾದ ಸ್ವೀಕರಿಸಿ ಎಂಬುದಾಗಿ ಹೇಳುತ್ತಿದ್ದರು. ಆರೋಗ್ಯ ಕ್ಷೀಣಿಸುತ್ತಿದ್ದರೂ ನಿತ್ಯವೂ ತ್ರಿಕಾಲ ಪೂಜೆ ತಪ್ಪಿಸಲಿಲ್ಲ. ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಭರತ ಖಂಡ ಎಂದು ಉಲ್ಲೇಖೀಸಿ,ದೇಶಭಕ್ತಿ, ಸಂಸ್ಕೃತಿ ಬಗ್ಗೆ ತಿಳಿಸುತ್ತಿದ್ದರು. ಶ್ರೀಗಳು, ಅಟಲ್‌ ಬಿಹಾರಿ ವಾಜಪೇಯಿ ಅವರನ್ನ ಮೆಚ್ಚಿಕೊಂಡಿದ್ದರು. 1996ರಲ್ಲಿ ವಾಜಪೇಯಿಯವರು 13 ದಿನ ಪ್ರಧಾನಿಯಾಗಿ ರಾಜೀನಾಮೆ ನೀಡಿದಾಗ ಬಹಳ
ನೊಂದುಕೊಂಡಿದ್ದರು. ಉತ್ತರಾಯಣ ಪುಣ್ಯಕಾಲಕ್ಕಾಗಿ ಕಾದು ಶ್ರೀಗಳು ಇಚ್ಛಾಮರಣಿಯಾಗಿ ನಮ್ಮನ್ನಗಲಿದ್ದಾರೆ. ನಡೆದಾಡುವ ದೇವರನ್ನ ನಾವು ನೋಡಿದೆವು ಎಂಬುದೇ ನಮ್ಮ ಪುಣ್ಯ. ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿ, ಆ ಪ್ರಶಸ್ತಿಯ ಗೌರವ ಹೆಚ್ಚಿಸಲಿ ಎಂದು ಕೋರುವೆ. 
 ಡಾ| ಎ.ಎಚ್‌.ಶಿವಯೋಗಿಸ್ವಾಮಿ, ವಿಧಾನ ಪರಿಷತ್‌ ಮಾಜಿ ಮುಖ್ಯ ಸಚೇತಕ.

Advertisement

Udayavani is now on Telegram. Click here to join our channel and stay updated with the latest news.

Next