Advertisement

ಮಳೆಕೊಡುವ ದೇವರು

12:43 PM Jun 23, 2019 | Vishnu Das |

ಬಾಗಲಕೋಟೆ ತಾಲೂಕಿನ ಮುರನಾಳದಲ್ಲಿ ಈ ಮಠವಿದೆ. 1822ರಲ್ಲಿ ಈ ಮಠ ನಿರ್ಮಾಣವಾದ ಇತಿಹಾಸದ ದಾಖಲೆ ಹೇಳುತ್ತದೆ. 1450ರಲ್ಲಿ ಮಳೆಪ್ಪಯ್ಯ ಅಜ್ಜನು ಪವಾಡದಿಂದ ಮಳೆ ತರಿಸಿದ ಉಲ್ಲೇಖವಿದ್ದು, ಅಂದಿನಿಂದ ಈ ಮಠಕ್ಕೆ ಮಳೆಪ್ಪಯ್ಯನ ಮಠ ಮತ್ತು ಮಳೆರಾಜೇಂದ್ರ ಮಠ ಎಂದು ಕರೆಯುವುದು ವಾಡಿಕೆ. ಸದ್ಯ ಶ್ರೀ ಮಳೇರಾಜೇಂದ್ರ ಸ್ವಾಮೀಜಿ ಇದರ ಉತ್ತರಾಧಿಕಾರಿಯಾಗಿದ್ದಾರೆ. ಮುರನಾಳ ಗ್ರಾಮ ಹಾಗೂ ಈ ಮಠ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಇದೀಗ ಮುರನಾಳ ಪುನರ್‌ವಸತಿ ಕೇಂದ್ರದಲ್ಲಿ ಹೊಸ ಮಠ ಸ್ಥಾಪಿಸುವ ಕಾರ್ಯ ನಡೆದಿದೆ. ಈ ಮಠದ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಹಳ್ಳಿಗಳಿದ್ದು, ಎಲ್ಲಾ ಹಳ್ಳಿಯ ರೈತರು, ಜನರು, ಮಳೆ ಬಾರದಿದ್ದರೆ ಈ ಮಠಕ್ಕೆ ಬಂದು, ದವಸ-ಧಾನ್ಯ ನೀಡಿ, ಮಳೆಗಾಗಿ ಪ್ರಾರ್ಥಿಸುತ್ತಾರೆ.

Advertisement

ಬಹುತೇಕ ಎಲ್ಲ ಮಠ, ದೇವಸ್ಥಾನಗಳಲ್ಲಿ ಮೂರ್ತಿ ಪೂಜೆ ನಡೆಯುತ್ತದೆ. ಆದರೆ, ಈ ಮಠದಲ್ಲಿ ಜಲಪೂಜೆ ನಡೆಯುತ್ತದೆ. ಪ್ರತಿವರ್ಷ ಮಾರ್ಚ್‌ನಲ್ಲಿ ನಡೆಯುವ ಜಾತ್ರೆಯ ರಥೋತ್ಸವದ ವೇಳೆ ರಥದಲ್ಲಿ ಬಿಂದಿಗೆ ನೀರು ಇಟ್ಟು, ರಥ ಎಳೆಯಲಾಗುತ್ತದೆ. ಉತ್ತರಕರ್ನಾಟಕದಲ್ಲಿ ಮಳೆ ತರಿಸುವ ಮಠವೆಂದೇ ಈ ಮಳೆಪ್ಪಯ್ಯನ ಮಠ ಪ್ರಸಿದ್ಧವಾಗಿದೆ.

ಭದ್ರಗಿರಿ ಬೆಟ್ಟ
ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಬಳಿ ಜೈನ ಸಮುದಾಯದ ಭದ್ರಗಿರಿ ಬೆಟ್ಟವಿವಿದ್ದು, ಇಲ್ಲಿಯೂ ಮಳೆಗಾಗಿ ಪೂಜೆ ನಡೆಸುವ ಸಂಪ್ರದಾಯವಿದೆ. ಜೈನ ಮುನಿಗಳು, ಬೆಟ್ಟದಲ್ಲಿ ಮಳೆಗಾಗಿ ಹಾಗೂ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲೆಂದು ಪೂಜೆ ಮಾಡುತ್ತಾರೆ.

ಒಂಟಿ ಕಾಲಿನ ಭಜನೆ
ಬೀಳಗಿ ಪಟ್ಟಣದ ಕಾಟಕರ ಓಣಿಯಲ್ಲಿ ಇರುವ ಹುಚ್ಚೇಶ್ವರ ಮಠದಲ್ಲಿ ಹುಚ್ಚೇಶ್ವರ ಸ್ವಾಮೀಜಿಯ ಗದ್ದುಗೆ ಇದೆ. ಅದರ ಎದುರು ರೈತರು, ಭಕ್ತರು ಮಳೆಗಾಗಿ 11 ದಿನ, 21 ದಿನ ಹೀಗೆ ಹಲವು ದಿನ ಹರಕೆ ಹೊತ್ತು ಒಂಟಿ ಕಾಲಿನಲ್ಲಿ ನಿಂತು ಭಜನೆ ಮಾಡುತ್ತಾರೆ. ಭೀಕರ ಬರ ಬಿದ್ದಾಗ ಹಲವು ಬಾರಿ ಒಂಟಿ ಕಾಲಿನಲ್ಲಿ ನಿಂತು ಪೂಜೆ ಮಾಡಿದ ಫಲವಾಗಿ ಮಳೆ ಬಂದ ಉದಾಹರಣೆಗಳು ಸಾಕಷ್ಟಿವೆ.

ಶ್ರೀಶೈಲ ಕೆ. ಬಿರಾದಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next