Advertisement

ಬಡವರ ಕೂಗಿಗೆ ದೇವರೂ ಕಿವುಡಾಗ್ತಾನೆ!

12:30 AM Oct 23, 2018 | Team Udayavani |

ವಾರದ ರಜೆಯ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್‌ ರಾಜೇಶ್‌ಗೆ ಫೋನ್‌ ಮಾಡುವುದು; ಅವರಿಗೇನಾದರೂ ಬಿಡುವಿದ್ದರೆ, ಸ್ಟೇಷನ್‌ಗೆ ಹೋಗಿ ಒಂದರ್ಧ ಗಂಟೆ ಅದೂ ಇದೂ ಮಾತಾಡಿ ಬರುವುದು ನನ್ನ ಅಭ್ಯಾಸ. ಮೊನ್ನೆ, ಸಾಲುಸಾಲಾಗಿ ನಾಲ್ಕು ರಜೆ ಸಿಕ್ಕವಲ್ಲ: ಅದೇ ನೆಪದಲ್ಲಿ ಫೋನ್‌ ಮಾಡಿದರೆ, “ಬನ್ನಿ ಸಾರ್‌, ಫ್ರೀ ಇದ್ದೀನಿ ಬನ್ನಿ, ಸಾಲು ಸಾಲಾಗಿ ರಜೆ ಬಂತು ನೋಡಿ; ಅದಕ್ಕೇ ಕ್ರೈಂ ಕಡಿಮೆಯಾಗಿದೆ. ಇವತ್ತು ನಿಮ್ಮ ಜೊತೆ ಕಾಫಿ ಕುಡಿಯಲು ಮಾತ್ರವಲ್ಲ, ಊಟ ಮಾಡುವಷ್ಟು ಫ್ರೀ ಟೈಮ್‌ ಇದೆ’ ಅಂದರು ರಾಜೇಶ್‌.

Advertisement

ಇನ್ಸ್‌ಪೆಕ್ಟರ್‌ಗಳಿಗೆ ಫ್ರೀ ಸಿಕ್ಕಿತೆಂದರೆ, ಅವರಿಗೆ ಮಾತಾಡುವ ಮೂಡ್‌ ಇದೆ ಎಂದರೆ, ಒಂದು ಇಂಟರೆಸ್ಟಿಂಗ್‌ ಸ್ಟೋರಿ ಸಿಕ್ಕಿತೆಂದೇ ಅರ್ಥ. ಅಂಥದೊಂದು ಕಥೆ ಕೇಳುವ ಆಸೆಯಿಂದಲೇ ನಡೆದುಹೋಗಿದ್ದೆ. ಮೊದಲು ಕಾಫಿ ಕುಡಿಯೋಣ, ಆಮೇಲೆ ಮಾತು ಶುರು ಮಾಡೋಣ ಎನ್ನುತ್ತಲೇ ಅವರು ಕಾಫಿಯ ಕಪ್‌ ಎತ್ತಿಕೊಂಡರು. ಕೊನೆಯ ಸಿಪ್‌ ಮುಗಿಯುತ್ತಿದ್ದಂತೆಯೇ ಮೊಬೈಲ್‌ ಮೊರೆಯಿತು. ಆ ಕಡೆಯ ಮಾತುಗಳಿಗೆ ಕಿವಿಯಾದ ರಾಜೇಶ್‌ ನಂತರ ಹೇಳಿದರು: “ನೀವು ಗಾಬರಿ ಆಗಬೇಡಿ. ಅಲ್ಲಿರುವ ಜನರನ್ನು ಕಂಟ್ರೋಲ್‌ ಮಾಡಿ. ಐದೇ ನಿಮಿಷ, ನಾನು ಬರ್ತಿದೀನಿ’… ಹೀಗೆಂದವರೇ- “ಒಂದು ಕೇಸ್‌ ಬಂದಿದೆ. ಬೇಗ ಬರೋಣ ಬನ್ನಿ..’ ಅಂದರು. ಗಡಿಬಿಡಿಯಿಂದಲೇ ಹಿಂಬಾಲಿಸಿದೆ…

ಅಲ್ಲಿ ನೂರಕ್ಕೂ ಹೆಚ್ಚು ಜನ ಸೇರಿದ್ದರು. ಗುಂಪಲ್ಲಿದ್ದ ಒಬ್ಬರು “ಇವಳ ದುರಹಂಕಾರ ಎಷ್ಟಿದೆ ನೋಡ್ರೀ. ಆ ಬಡಪಾಯಿಗೆ, ಅದೂ ಏನು? ಕೈ ಹಿಡಿದ ಗಂಡನಿಗೆ ಚಾಕು ಹಾಕಲು ಹೋಗಿದ್ದಾಳೆ…’ ಅಂದರು. ಮತ್ತೂಬ್ಬರು- “ಇವಳೇನೋ ಮಾಡಬಾರದ್ದು ಮಾಡಿರ್ತಾಳೆ. ಅವನು ಅದನ್ನು ವಿರೋಧಿಸಿದ ಅನ್ಸುತ್ತೆ. ಮೊದಲೇ ಘಟವಾಣಿ ಥರಾ ಇದಾಳೆ. ಹೆದರಿಸಿ ಕಂಟ್ರೋಲಲ್ಲಿ ಇಟ್ಕೊàಬೇಕು ಅಂತಾನೇ ಚಾಕು ಹಾಕಲು ಮುಂದಾದಳೇನೋ..’ ಅಂದರು. ಇದೇವೇಳೆಗೆ ಗುಂಪಿನ ಮಧ್ಯದಿಂದ ಬಂದ ಹೆಣ್ಣೊಬ್ಬಳು, ಗುಂಪಿನ ಮತ್ತೂಂದು ಕೊನೆಯಲ್ಲಿ ನಿರ್ಭಾವುಕಳಾಗಿ ಕುಳಿತಿದ್ದ ಹೆಂಗಸಿಗೆ ಛಟೀರನೆ ಹೊಡೆದು, “ಏನೇ ಬಜಾರಿ, ಮುತ್ತೈದೆ ಅನಿಸಿಕೊಂಡು ಬದುಕೋಕೆ ಇಷ್ಟ ಇಲ್ವ? ಗಂಡಸಿಲ್ದ ಮನೇಲಿ ಬದುಕೋದು ಎಷ್ಟು ಕಷ್ಟ ಅಂತ ಅಂದಾಜಿದೆಯೇನೇ ನಿನ್ಗೆ?’ ಎಂದು ರೇಗಿದಳು. ಈ ಯಾವ ಟೀಕೆಗೂ ಆ ಹೆಂಗಸು ಉತ್ತರಿಸಲಿಲ್ಲ. ಥೇಟ್‌ ಶಿಲೆಯಂತೆ ಕೂತು ಬಿಟ್ಟಿದ್ದಳು. ಗುಂಪಲ್ಲಿದ್ದ ಜನ ಆಕೆಯನ್ನು ಥಳಿಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿ, ಆಕೆಯ ಕೆನ್ನೆಗಳು ಊದಿಕೊಂಡಿದ್ದವು. ಗಂಡನನ್ನು ಈಕೆ ಅಟ್ಟಿಸಿಕೊಂಡು ಬಂದು ಚಾಕು ಹಾಕಿದಳೆಂದೂ, ಅವನ ಚೀರಾಟ ಕೇಳಿ, ಸುತ್ತಮುತ್ತಲಿನ ಜನ ಓಡಿ ಬಂದು ಬಿಡಿಸಿದರೆಂದೂ, ಅವರೇ ಆ್ಯಂಬುಲೆನ್ಸ್‌ ಮಾಡಿ ಅವನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆಂದೂ, ಪೊಲೀಸರು ಇನ್ಸ್‌ಪೆಕ್ಟರ್‌ಗೆ ಮಾಹಿತಿ ನೀಡಿದರು.

“ನೋಡಿ, ಕಾನೂನು ಪ್ರಕಾರ ಆ್ಯಕ್ಷನ್‌ ತಗೋತೀನಿ. ಹೋಗಿ, ಎಲ್ರೂ ನಿಮ್ಮ ನಿಮ್ಮ ಕೆಲಸ ನೋಡಿ. ಹೀಗೆ ಗುಂಪುಗೂಡಿದ್ರೆ ಟ್ರಾಫಿಕ್‌ ಜಾಮ್‌ ಆಗಿ ಎಲ್ರಿಗೂ ತೊಂದರೆ ಆಗುತ್ತೆ. ಪಿ.ಸಿ, ಆ ಹೆಂಗಸನ್ನು ಜೀಪ್‌ಗೆ ಹತ್ತಿಸಿಕೊಳ್ಳಿ. ಲೇಡಿ ಕಾನ್ಸ್‌ಟೇಬಲ್‌ಗ‌ೂ ಅಲರ್ಟ್‌ ಆಗಿರೋಕೆ ಹೇಳೆ¤àನೆ. ಹುಂ, ಹೊರಡಿ’ ಏಕಕಾಲಕ್ಕೆ ಅಲ್ಲಿದ್ದ ಜನರಿಗೂ, ಪೊಲೀಸರಿಗೂ ಆರ್ಡರ್‌ ಮಾಡಿದರು ಇನ್ಸ್‌ಪೆಕ್ಟರ್‌. ಜನ, ತಮ್ಮ ತಮ್ಮಲ್ಲಿಯೇ ಏನೇನೋ ಮಾತಾಡಿಕೊಳ್ಳುತ್ತಲೇ ಅಲ್ಲಿಂದ ಚದುರಿಹೋದರು.

ಅಚ್ಚರಿ ಅನ್ನಿಸುವಂತೆ, ಸ್ಟೇಷನ್‌ನಲ್ಲಿ ಆ ಹೆಂಗಸಿಗೆ ಇನ್ಸ್‌ಪೆಕ್ಟರ್‌ ಬಯ್ಯಲಿಲ್ಲ. ಗದರಿಸಲೂ ಇಲ್ಲ. ಬದಲಾಗಿ, ಆಕೆಗೆ ತಿಂಡಿ ತರಿಸಿಕೊಟ್ಟರು. “ಈಕೇನ ಸೆಲ್‌ಗೆ ಕಳಿಸಿ. ಮಧ್ಯಾಹ್ನ ಊಟ ತರಿಸಿಕೊಡಿ. ಸಂಜೆ ವಿಚಾರಿಸೋಣ. ಒಂದು ಹೆಂಗಸು, ಕೈಹಿಡಿದ ಗಂಡನಿಗೇ ಚಾಕು ಹಾಕಲು ಹೋಗ್ತಾಳೆ ಅಂದ್ರೆ, ಅದರ ಹಿಂದೆ ಏನಾದ್ರೂ ಗಟ್ಟಿ ಕಾರಣ ಇದ್ದೇ ಇರುತ್ತೆ…’ ಅಂದವರು, ನನ್ನತ್ತ ತಿರುಗಿ, ಹೇಗಿದ್ರೂ ರಜೆಯಿದೆಯಲ್ವ? ಸಂಜೆ ಬನ್ನಿ’ ಅಂದರು.

Advertisement

ಠಾಣೆಯಲ್ಲಿ ಉಳಿಸಿದ್ದರೂ ಇಡೀ ದಿನ ಯಾರೂ ಬೈದಿರಲಿಲ್ಲ. ಹೊಡೆಯುವ ಮಾತು ದೂರವೇ ಉಳಿಯಿತು. ಇದೇ ಕಾರಣಕ್ಕೆ, ಆ ಹೆಂಗಸು ಸಂಜೆಯ ವೇಳೆಗೆ ಸ್ವಲ್ಪ ಗೆಲುವಾಗಿದ್ದಳು. ನಾನು ಹೋಗು ತ್ತಿದ್ದಂತೆಯೇ ಆಕೆಯನ್ನೂ ಕರೆದು, ಕೂರಲು ಚೇರ್‌ ತೋರಿಸಿದ ಇನ್ಸ್‌ಪೆಕ್ಟರ್‌-“ಹೇಳಮ್ಮ, ಏನು ನಿನ್‌ ಕಥೆ? ಗಂಡನಿಗೇ ಚಾಕು ಹಾಕುವಂಥ ಮನಸ್ಸು ನಿನಗಾದ್ರೂ ಯಾಕೆ ಬಂತು? ಕೊಲೆ ಮಾಡಿ ಜೀವನ ಪೂರ್ತಿ ಜೈಲಲ್ಲಿ ಸಾಯಬೇಕು ಅಂತ ಮಾಡಿದ್ದೀಯಾ?’ ಅಂದರು. ನಂತರ ಆಕೆಯನ್ನೇ ದಿಟ್ಟಿಸಿ ನೋಡುತ್ತಾ- “ನಿನ್ನ ಕಥೆ ಹೇಳ್ಕೊà ಅಂದಿದೀನಿ. ಏನಾದ್ರೂ ಸುಳ್ಳು ಹೇಳಲು ಹೋದ್ರೆ ಹುಷಾರ್‌! ಅದೆಲ್ಲಾ ನನಗೆ ಬೇಗ ಗೊತ್ತಾಗಿಬಿಡ್ತದೆ’ ಅಂದರು.

“ಏನಂತ ಹೇಳಲಿ ಸ್ವಾಮಿ? ನಲವತ್ತು ವರ್ಷದ ಬದುಕಲ್ಲಿ ಖುಷಿ ಅನ್ನೋದನ್ನೇ ನೋಡಲಿಲ್ಲ. ಜೀವನ ಪೂರ್ತಿ ನನಗೆ ಸಿಕ್ಕಿದ್ದು ನೋವು, ನೋವು, ನೋವು. ಎಲ್ಲಿಂದ ಶುರು ಮಾಡ್ಲಿ? ಚಿಕ್ಕವಳಿದ್ನ, ಆಗಿನ್ನೂ ಐದು ವರ್ಷ ನಂಗೆ. ನಮುª ಬಡಕುಟುಂಬ ಸ್ವಾಮಿ. ಅಮ್ಮನಿಗೆ ಒಬ್ಬ ತಮ್ಮನಿದ್ದ. ಮನೆಯಿಂದ ಅಂಗಡಿಗೆ, ಪೇಟೆಗೆ, ಸಂತೆಗೆ, ಜಾತ್ರೆಗೆ, ಪಕ್ಕದೂರಿಗೆ… ಹೀಗೆ ಎಲ್ಲಿಗೆ ಹೋಗಬೇಕೆಂದ್ರೂ ಅವನ ಜೊತೆಯೇ ಕಳಿಸ್ತಿದ್ಲು ಅಮ್ಮ. ತಮ್ಮನ ಮೇಲೆ ಅವಳಿಗೆ ದೊಡ್ಡ ನಂಬಿಕೆ. ಎಲ್ಲಿಗಾದ್ರೂ ಕಳಿಸುವ ಮೊದ್ಲು ನನ್ನನ್ನೂ, ಅಕ್ಕನನ್ನೂ ಎದುರು ನಿಲ್ಲಿಸಿಕೊಂಡು “ಮಾಮ ಹೇಳಿದಂತೆ ಕೇಳಬೇಕು. ಇಲ್ಲಾ ಅಂದ್ರೆ ನಿಮ್ಮನ್ನು ಎಲ್ಲಿಗೂ ಕಳಿಸೋದಿಲ್ಲ ಅನ್ನುತ್ತಿದ್ದಳು. ಈ ಸೋದರ ಮಾವ, ಕೆಲವೊಮ್ಮೆ ನನ್ನನ್ನೇ ತಿಂದು ಬಿಡುವಂತೆ ನೋಡುತ್ತಿದ್ದ. ನಾನೊಬ್ಬಳೇ ಇದ್ದೀನಿ ಅಂತ ಗ್ಯಾರಂಟಿ ಮಾಡಿಕೊಂಡು ಎದೆಯ ಮೇಲೆ ಕೈ ಹಾಕಿಬಿಡುತ್ತಿದ್ದ. ಕೆಲಮೊಮ್ಮೆ, ಬೆನ್ನಿನ ತುಂಬಾ ಕೈಯಾಡಿಸುತ್ತಿದ್ದ. ಈ ವರ್ತನೆ ನನಗಂತೂ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಆನಂತರದಲ್ಲಿ, ಏನಾದರೂ ಕಾರಣ ಹೇಳಿ, ಅವನೊಂದಿಗೆ ಹೊರಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದೆ.

ಅಪ್ಪನಿಗೆ ಒಬ್ಬ ಗೆಳೆಯರಿದ್ದರು. ಅವರಿಗೆ ನಾನೆಂದರೆ ಅಕ್ಕರೆ. ಮನೆಗೆ ಬಂದಾಗ, ಕೆನ್ನೆ ತಟ್ಟಿ ಮಾತಾಡಿಸುತ್ತಿದ್ದರು. “ಗೊಂಬೆ ಥರ ಇದೀಯ’ ಅನ್ನುತ್ತಿದ್ದರು. ಅಂಥ ಮನುಷ್ಯನಿಗೆ, ಅದೊಂದು ಸಂಜೆ, ಶಾಲೆಯಿಂದ ಬರುವಾಗ ಒಂಟಿಯಾಗಿ ಸಿಕ್ಕಿಬಿಟ್ಟೆ. ಅಪ್ಪನ ಆ ಗೆಳೆಯ, ಅವತ್ತು ಥೇಟ್‌ ನನ್ನ ಸೋದರಮಾವನಂತೆಯೇ ಕಿರುಕುಳ ನೀಡಿದ. ಅವತ್ತೇ ರಾತ್ರಿ, ನಡೆದುದೆಲ್ಲವನ್ನೂ ಅಕ್ಕನೊಂದಿಗೆ ಹೇಳಿಕೊಂಡೆ. ಅವಳು ಕೂಡಲೇ “ಶ್‌! ಇದನ್ನು ಯಾರಿಗೂ ಹೇಳಬೇಡ. ಯಾರಿಗಾದ್ರೂ ಗೊತ್ತಾದ್ರೆ “ಇದೊಂದು ಕೊಳಕು ಹುಡ್ಗಿ, ಸಖತ್‌ ಚೆಂಗು’ ಅಂದುಬಿಡ್ತಾರೆ’ ಎಂದು ಎಚ್ಚರಿಸಿದಳು.

ಈ ಥರದ ಕಿರುಕುಳಗಳು ಒಂದೆರಡಲ್ಲ ಸಾರ್‌.. ಸ್ಕೂಲ್‌ಗೆ ಆಟೋದಲ್ಲಿ ಹೋಗ್ತಿದ್ನ? ಆಟೋ ಡ್ರೈವರ್‌, ಹತ್ತಿಸಿಕೊಳ್ಳುವಾಗ, ಇಳಿಸುವಾಗ ಬೇಕ್‌ಬೇಕು ಅಂತಲೇ ನನ್ನ ಮೈ ಸವರುತ್ತಿದ್ದ. ಬ್ಯಾಗ್‌ ಕೊಡುವ ನೆಪದಲ್ಲಿ ಹೊಟ್ಟೆಯನ್ನೋ, ಸೊಂಟವನ್ನೋ, ತೋಳನ್ನೋ ಮುಟ್ಟಿ ಬಿಡುತ್ತಿದ್ದ. ಶಾಲೆಯಲ್ಲಿ ಒಂದಿಬ್ಬರು ಮೇಸೂó ಅದೇ ಥರ ಮಾಡ್ತಿದ್ರು. ಇಂಥದೇ ಕಿರಿಕಿರಿಯ ಕಾರಣಕ್ಕೆ ಓದಿನಲ್ಲಿ ಆಸಕ್ತಿ ಹೋಗಿಬಿಡು¤. ಒಂದು ದಿನ ಮನಸ್ಸು ಗಟ್ಟಿ ಮಾಡಿಕೊಂಡು, ಅಮ್ಮನೊಂದಿಗೆ ಎಲ್ಲವನ್ನೂ ಹೇಳಿಕೊಂಡೆ. “ಈ ಹಾಳು ಗಂಡಸರ ಬಾಯಿಗೆ ಮಣ್ಣು ಬೀಳಲಿ. ಅವರಿಗೆ ಬರಬಾರದ್ದು ಬರಲಿ’ ಎಂದೆಲ್ಲಾ ಅಮ್ಮ ಶಾಪ ಹಾಕಿದಳು. ನಂತರ “ಈ ಸುದ್ದೀನ ಎಲ್ಲಾದ್ರೂ ಬಾಯಿಬಿಟ್ರೆ ನನ್ಮೆàಲೆ ಆಣೆ. ಇದನ್ನೆಲ್ಲ ಯಾರಿಗೂ ಹೇಳ್ಬೇಡ. ಹೇಳಿದ್ರೆ ತೊಂದ್ರೆ ಆಗೋದು ನಮಗೇನೇ’ ಅಂದಳು. ಸ್ಪಲ್ಪ ಹೊತ್ತು ಸುಮ್ಮನಿದ್ದು “ನಾಳೆಯಿಂದ ನೀನು ಸ್ಕೂಲಿಗೆ ಹೋಗುವುದು ಬೇಡ, ಗಿಡುಗಗಳ ಕೈಗೆ ಪಾರಿವಾಳ ಒಪ್ಪಿಸೋಕೆ ನನಗೆ ಮನಸ್ಸಿಲ್ಲ’ ಅಂದಳು.

ಮೇಲಿಂದ ಮೇಲೆ ಗಂಡಸರಿಂದ ದೈಹಿಕ ದಾಳಿ ಆದ ಕುರಿತು ನಾನು ತಂದೆಯ ಬಳಿ ಹೇಳಿಕೊಳ್ಳಲಿಲ್ಲ. ಅದನ್ನೆಲ್ಲ ಅಪ್ಪನ ಎದುರು ಹೇಗೆ, ಯಾವ ಪದ ಬಳಸಿ ಹೇಳಬೇಕೆಂದೇ ಗೊತ್ತಾಗುತ್ತಿರಲಿಲ್ಲ. ಈ ನಡುವೆ, ಯಾವುದೋ ಕಾಯಿಲೆಯ ಕಾರಣಕ್ಕೆ ಆಸ್ಪತ್ರೆ ಸೇರಿದ ಅಪ್ಪ, ನಂತರದ ಐದೇ ದಿನದಲ್ಲಿ ಕಣ್ಮರೆಯಾದರು. ಆನಂತರದಲ್ಲಿ ನಮ್ಮ ಒಳಿತಿಗಾಗಿ ಬದುಕಿಡೀ ಶ್ರಮಿಸಿದ ಅಮ್ಮ, ಅಕ್ಕನನ್ನೂ, ನನ್ನನ್ನೂ ಮದುವೆ ಮಾಡಿಕೊಟ್ಟು ಅದೊಂದು ದಿನ ತಾನೂ ಈ ಲೋಕಕ್ಕೆ ವಿದಾಯ ಹೇಳಿಬಿಟ್ಟಳು. 

ಬಾಲ್ಯದಿಂದಲೂ ಕಷ್ಟಗಳನ್ನೇ ನೋಡಿದವರಿಗೆ, ಮದುವೆಯ ನಂತರ ಒಳಿತಾಗುವುದಂತೆ. ಹಾಗಂತ ಅವರಿವರು ಹೇಳುವುದನ್ನು ಕೇಳಿದ್ದೆ. ಚಿಕ್ಕಂದಿನಿಂದಲೂ ಸಂಕಟಗಳೊಂದಿಗೇ ಬದುಕಿದ್ದೆನಲ್ಲ; ಹಾಗಾಗಿ, ಮುಂದಿನದೆಲ್ಲಾ ಸಂಭ್ರಮದ ಹಾಡಾಗಿರ್ತದೆ ಎಂದುಕೊಂಡೇ ಗಂಡನ ಮನೆಗೆ ಬಂದೆ. 

ಮದುವೆಯ ಕುರಿತು, ಸಂಸಾರದ ಕುರಿತು, ಗಂಡನ ಕುರಿತು ನನಗೆ ನೂರೆಂಟು ಕಲ್ಪನೆಗಳಿದ್ದವು. ಟಿವಿಯಲ್ಲಿ, ಸಿನಿಮಾದಲ್ಲಿ ಇರುತ್ತಾರಲ್ಲ; ಅದೇ ಥರ ನಮ್ಮ ಸಂಸಾರವೂ ಇರುತ್ತೆ ಅಂದುಕೊಂಡಿದ್ದೆ. ಆದರೆ, ಹೊಸ ಬದುಕು ಆರಂಭಿಸಿದ ಮೊದಲ ವಾರವೇ ನನ್ನ ಆಶಾಸೌಧ ಕುಸಿದುಬಿತ್ತು. ನನ್ನ ಗಂಡ ಪರಮ ಸೋಮಾರಿಯಾಗಿದ್ದ.  ಮಹಾನ್‌ ಕುಡುಕನಾಗಿದ್ದ. ಪರಿಚಯದವರಲ್ಲಿ ನಾಚಿಕೆಯಿಲ್ಲದೆ ಸಾಲ ಕೇಳುತ್ತಿದ್ದ. ಒಮ್ಮೆಯಂತೂ- “ನನ್ನ ಫ್ರೆಂಡ್‌ಗೆ ನಿನ್ಮೆàಲೆ ಮನಸ್ಸಾಗಿದೆಯಂತೆ. ಒಂದ್ಸಲ ಅವನ ಜೊತೆ ಇದ್ದು ಬಾ. ಕೈ ತುಂಬಾ ಕಾಸು ಕೊಟ್ಟಿದಾನೆ’ ಅಂದ! ನಾನಾಗ ಉಗ್ರವಾಗಿ ಪ್ರತಿಭಟಿಸಿದೆ. “ಬೇಕಾದ್ರೆ ನೇಣು ಹಾಕ್ಕೊಳ್ತೀನಿ. ಅಂಥಾ ಕೆಲಸ ಮಾತ್ರ ಮಾಡಲ್ಲ’ ಅಂದೆ. ಆಗ ಇವನೇನು ಮಾಡಿದ ಗೊತ್ತೆ? ಎಂಥಧ್ದೋ ಸಿಹಿ ತಿನ್ನಿಸಿ ಎಚ್ಚರ ತಪ್ಪುವಂತೆ ಮಾಡಿ, ಕಡೆಗೂ ನನ್ನನ್ನು ಗೆಳೆಯನಿಗೆ ಒಪ್ಪಿಸಿಬಿಟ್ಟ. ನಡೆದಿದ್ದೆಲ್ಲ ಅರ್ಥವಾದಾಗ, ಅವನಿಗೆ ಪೊರಕೆಯಿಂದ ಹೊಡೆದೆ. ಮೌನವಾಗಿ ಒದೆ ತಿಂದ. “ಇಂಥಾ ನೀಚನ ಜೊತೆ ಬಾಳುವ ಬದಲು ಸಾಯುವುದೇ ವಾಸಿ’ ಅನ್ನಿಸಿತು. ಸಾಯುವ ಮಾತಾಡಿದೆನಲ್ಲ, ಸೀದಾ ಬಂದು ಕಾಲು ಹಿಡಿದ. ಇಡೀ ರಾತ್ರಿ ಗೋಳ್ಳೋ ಎಂದು ಅತ್ತ. “ನನ್ನನ್ನು ಒಂಟಿ ಮಾಡಿ ಹೋಗಬೇಡ’ ಎಂದು ಬೇಡಿಕೊಂಡ. “ಓಹ್‌, ಕಾಲಿಗೆ ಬಿದ್ದ ಎಂದ ಮೇಲೆ, ಇವನಿಗೆ ಆಗಿರುವ ತಪ್ಪಿನ ಅರಿವಿರಬೇಕು’ ಅಂದುಕೊಂಡು ಉಳಿದುಕೊಂಡೆ. 

ಮುಂದೊಂದು ದಿನ, ಗರ್ಭಿಣಿ ಎಂದು ಗೊತ್ತಾದಾಗ, ಖುಷಿಯ ಬದಲಿಗೆ ಸಂಕಟವೇ ಆಯಿತು. ಅಕಸ್ಮಾತ್‌, ನನಗೂ ಹೆಣ್ಣು ಮಗು ಆದರೆ, ಬಾಲ್ಯದಲ್ಲಿ ನನಗೆ ಆಗಿದೆಯಲ್ಲ; ಅಂಥವೇ ಕಿರಿಕಿರಿಗಳು, ದೌರ್ಜನ್ಯಗಳು ಅವಳಿಗೂ ಆಗಿಯೇ ತೀರುತ್ತವೆ ಅನ್ನಿಸಿದಾಗ ಕುಳಿತಲ್ಲೇ ನಡುಗಿ ಹೋದೆ. “ದೇವರೇ, ಕೊಡುವುದಾದ್ರೆ ನನಗೆ ಗಂಡು ಮಗು ಕೊಡು, ಇಲ್ಲವಾದರೆ ಹೊಟ್ಟೆಯೊಳಗೇ ಅದನ್ನು ಸಾಯಿಸಿಬಿಡು. ಯಾವುದೇ ಕಾರಣಕ್ಕೂ ನನಗೆ ಹೆಣ್ಣು ಮಗು ಕೊಡಬೇಡ’ ಎಂದು ದಿನವೂ ಪ್ರಾರ್ಥಿಸಿದೆ. ಪೂಜೆ ಮಾಡಿದೆ. ಹರಕೆ ಕಟ್ಟಿಕೊಂಡೆ. ಬಡವರ ಪ್ರಾರ್ಥನೆಗೆ ದೇವರೂ ಕಿವುಡಾಗಿರ್ತಾನೆ ಸಾರ್‌. ಕಡೆಗೂ ನನಗೆ ಹೆಣ್ಣು ಮಗುವೇ ಹುಟ್ಟಿತು.

ಉಹೂಂ, ಕಾಮುಕರ ಕಣ್ಣಿಗೆ ನನ್ನ ಮಗಳು ಬೀಳಬಾರದು. ನನಗೆ ಆಗಿರುವಂಥ ಗಾಯಗಳು ಅವಳಿಗೆ ಆಗಬಾರದು ಅಂತ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆ. ಅವಳಿಗಷ್ಟೇ ಅರ್ಥವಾಗುವಂತೆ ಒಂದಷ್ಟು ವಿಷಯ ಹೇಳಿದೆ. “ನೀನು ಹೇಳಿದಂತೆ ಕೇಳ್ತೀನಿ ಅಮ್ಮ. ತಪ್ಪು ಮಾಡಲ್ಲ’ ಅಂತಿದ್ದಳು ಮಗಳು. ಅವಳಿಗೆ ಮೊನ್ನೆಯಷ್ಟೇ 12 ವರ್ಷ ತುಂಬಿದೆ. ನಿನ್ನೆ ಇದ್ದಕ್ಕಿದ್ದಂತೆಯೇ, 40 ವರ್ಷದ ಯಾರೋ ಗಡವನನ್ನು ಕರ್ಕೊಂಡ್‌ ಬಂದು- “ಇವರಿಗೆ ಮಗಳನ್ನು ಕೊಟ್ಟು ಮದ್ವೆ ಮಾಡುವಾ, ನಾನಾಗ್ಲೆ ಮಾತಾಡಿ ಆಗಿದೆ. ಹುಡ್ಗಿàನ ತೋರಿಸು ಇವರಿಗೆ’ ಅಂದ ನನ್ನ ಗಂಡ!

ಓಹ್‌, ಇವನು ನನ್ನ ಲೈಫ್ನ ಹಾಳು ಮಾಡಿದ್ದು ಮಾತ್ರವಲ್ಲ; ಮಗಳ ಬದುಕಿಗೂ ಬೆಂಕಿ ಹಚಾ¤ನೆ ಅನಿಸಿದ್ದೇ ಆಗ. ನನಗಾಗ ಬೇರೇನೂ ತೋಚಲಿಲ್ಲ ಸಾರ್‌. ಅದೆಲ್ಲಿತ್ತೋ ಆ ಶಕ್ತಿ. ಅಡುಗೆ ಮನೇಲಿದ್ದ ಚಾಕು ತಗೊಂಡು ಇಬ್ಬರನ್ನೂ ಅಟ್ಟಿಸಿಕೊಂಡು ಹೋದೆ. ಅವನು ಓಡಿ ಹೋದ. ಇವನು ಸಿಕ್ಕಿಬಿದ್ದ. ಮುಲಾಜಿಲ್ಲದೆ ಚಾಕು ಹಾಕಿದೆ’.. ಇಷ್ಟೇ ಸ್ವಾಮಿ ನಡೆದಿದ್ದು. ನಂಗೆ ಶಿಕ್ಷೆ ಕೊಡಿ. ಮನೇಲಿ ನನ್ನ ಮಗಳಿದಾಳೆ ಸ್ವಾಮಿ.. ಅವಳಿಗೊಂದು ದಾರಿ ಆಗಬೇಕು…

ಐದು ನಿಮಿಷ ಮೌನ. ಆಮೇಲೆ, ಒಮ್ಮೆ ನಿಟ್ಟುಸಿರಿಟ್ಟು, ಒಮ್ಮೆ ಕಣ್ಣೊರೆಸಿಕೊಂಡು, ಯಾರಿಗೋ ಫೋನ್‌ ಮಾಡಿದ ಇನ್ಸ್‌ಪೆಕ್ಟರ್‌ ಹೇಳಿದರು: ನಾಳೆಯಿಂದ ನನ್ನ ಕಡೆಯವರೊಬ್ರು ಕೆಲಸಕ್ಕೆ ಬರ್ತಾರೆ. ಅವರಿಗೆ ಊಟ-ವಸತಿಗೂ ವ್ಯವಸ್ಥೆ ಆಗಬೇಕು. ಅಮ್ಮ- ಮಗಳು ಇರ್ತಾರೆ. ಪಾಪ, ಕಷ್ಟದಲ್ಲಿದ್ದಾರೆ. ಒಳ್ಳೆ ಸಂಬಳ ಕೊಡಿ. ಒಂದ್ಸಾವ್ರ ಜಾಸ್ತಿ ಕೊಟ್ರೂ ಖುಷಿ.. ಆ ಹೆಂಗಸು ಕೈ ಮುಗಿದು ಬಿಕ್ಕಳಿಸತೊಡಗಿದಳು… 

ಎ.ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next