Advertisement

ಸ್ಥಗಿತ ಭೀತಿಯಲ್ಲಿ “ಗೋಬರ್‌ಗ್ಯಾಸ್‌’ಯೋಜನೆ

10:37 AM Apr 12, 2022 | Team Udayavani |

ಮಂಗಳೂರು: ಸುಮಾರು ಮೂರು ದಶಕಗಳಿಂದ ಜಾರಿಯಲ್ಲಿರುವ “ಗೋಬರ್‌ಗ್ಯಾಸ್‌’ ಯೋಜನೆ ಬಹುತೇಕ ಸ್ಥಗಿತಗೊಳ್ಳುವ ಹಂತ ತಲುಪಿದ್ದು ನವೀಕರಿಸಬಹುದಾದ ಇಂಧನ ಬಳಕೆಯನ್ನು ಸರಕಾರವೇ ಅವಗಣಿಸಿದಂತಾಗಿದೆ.

Advertisement

“ನವ ರಾಷ್ಟ್ರೀಯ ಜೈವಾನಿಲ ಮತ್ತು ಸಾವಯವ ಗೊಬ್ಬರ’ ಹೆಸರಿನಲ್ಲಿ ಗೋಬರ್‌ ಗ್ಯಾಸ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಜಾನುವಾರು ಸಾಕಣೆ ಕಡಿಮೆಯಾಗುತ್ತಿರುವುದು, ಸರಕಾರದಿಂದ ಎಲ್‌ಪಿಜಿ ಉಚಿತ ಸಂಪರ್ಕ ಯೋಜನೆ ಮೊದಲಾದ ಬೆಳವಣಿಗೆಗಳ ನಡುವೆಯೂ ಗೋಬರ್‌ ಗ್ಯಾಸ್‌ ಘಟಕಗಳಿಗೆ ಬೇಡಿಕೆ ಇತ್ತು. ಇದೀಗ ಸರಕಾರ ಯೋಜನೆಗೆ ಸಹಾಯಧನವನ್ನು ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಹಾಗಾಗಿ ಯೋಜನೆಯನ್ನು ಸ್ಥಗಿತಗೊಳಿಸುವ ಸಂದೇಹ ಉಂಟಾಗಿದೆ.

ಘಟಕ ನಿರ್ಮಾಣಕ್ಕೆ ಫ‌ಲಾನುಭವಿಗಳಿಗೆ ಕೇಂದ್ರ ಸರಕಾರದಿಂದ 12,000 ರೂ., ರಾಜ್ಯ ಸರಕಾರದಿಂದ 6,000 ರೂ. ಸಹಾಯಧನ ನೀಡಲಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಸಹಾಯಧನ ಬಿಡುಗಡೆಯಾಗಿಲ್ಲ. 2021-22ನೇ ಸಾಲಿಗೆ ಗುರಿ ನಿಗದಿಯೂ ಆಗಿಲ್ಲ.

ವರ್ಷಕ್ಕೆ 10,000 ಘಟಕ ರಾಜ್ಯದಲ್ಲಿ ಕಳೆದೆರಡು ವರ್ಷಗಳ ಹಿಂದಿನವರೆಗೂ ವರ್ಷಕ್ಕೆ ಕನಿಷ್ಠ 10,000 ಗೋಬರ್‌ಗ್ಯಾಸ್‌ ಘಟಕಗಳು ನಿರ್ಮಾಣಗೊಳ್ಳುತ್ತಿದ್ದವು. ಇಂದಿಗೂ ಬೇಡಿಕೆ ಇದೆ.

ದ.ಕ., ಉಡುಪಿ ಜಿಲ್ಲೆಗಳಲ್ಲಿಯೂ ವರ್ಷಕ್ಕೆ ತಲಾ ಸುಮಾರು 200ರಿಂದ 300 ಘಟಕಗಳ ನಿರ್ಮಾಣವಾಗುತ್ತಿತ್ತು. 2020-21ರಲ್ಲಿ ದ.ಕ. ಜಿಲ್ಲೆಯಲ್ಲಿ 225 ಮಂದಿ ಘಟಕ ನಿರ್ಮಿಸಿದ್ದರು. ಆದರೆ ಕೇವಲ 21 ಮಂದಿಗೆ ಮಾತ್ರ ಸಹಾಯಧನ ದೊರೆತಿದೆ.

Advertisement

ಗುರಿ ನಿಗದಿಯಾಗಿಲ್ಲ
ಸರಕಾರದಿಂದ ಕಳೆದೆರಡು ವರ್ಷಗಳಿಂದ ಗೋಬರ್‌ ಗ್ಯಾಸ್‌ ಯೋಜನೆಗೆ ಗುರಿ ನಿಗದಿಯಾಗಿಲ್ಲ. ಬಾಕಿ ಇರುವ ಸಹಾಯಧನದ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ.
– ಆನಂದ್‌ ಕುಮಾರ್‌,ಉಪಕಾರ್ಯದರ್ಶಿ, ದ.ಕ. ಜಿ.ಪಂ.

ಪುನರಾರಂಭಕ್ಕೆ ಪ್ರಯತ್ನ
ಗೋಬರ್‌ ಗ್ಯಾಸ್‌ ಘಟಕಕ್ಕೆ ಇಂದಿಗೂ ಉತ್ತಮ ಬೇಡಿಕೆ ಇದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಘಟಕಕ್ಕೆ ಸಾಲಸೌಲಭ್ಯವನ್ನು ಕೂಡ ಒದಗಿಸುತ್ತಿದ್ದ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿಯೂ ಅನೇಕ ಮಂದಿ ಘಟಕ ಸ್ಥಾಪನೆಗೆ ಆಸಕ್ತಿ ತೋರಿಸುತ್ತಿದ್ದರು. ಯೋಜನೆಯ ಸಹಾಯಧನ ಬಿಡುಗಡೆಯಾಗದೇ ಸಮಸ್ಯೆಯಾಗಿರುವ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮತ್ತೆ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.
– ಸತ್ಯೇಂದ್ರ ಪೈ, ರಾಜ್ಯಾಧ್ಯಕ್ಷರು, ಕರ್ನಾಟಕ ಬಯೋಗ್ಯಾಸ್‌ ಟರ್ನ್ ಕೀ
ಏಜೆಂಟ್‌ ಅಸೋಸಿಯೇಶನ್‌

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next