Advertisement
ಬದುಕು ಎಂದಾಕ್ಷಣ ಆದಕ್ಕೆ ಅಂದ ನೀಡಲು ಒಂದೊಳ್ಳೆಯ ಗುರಿ ಇರಬೇಕು ಎನ್ನುವುದು ಸಹಜ.
Related Articles
Advertisement
ನಾನು ನಾಲ್ಕನೇ ತರಗತಿಯಲ್ಲಿರುವಾಗ ತಾತನೊಂದಿಗೆ ಅವರ ಆ ಕನಸೂ ಕಣ್ಣು ಮುಚ್ಚಿತ್ತು. ಎಂಜಿನಿಯರ್ ಆಗಬೇಕು ಎಂದು ಅಮ್ಮ ಹೇಳಿದ್ರೂ ನಾನು ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿದ್ದು ಇಲ್ಲ. ಈ ನಡುವೆ ಗಣಿತದ ಶಿಕ್ಷಕಿಯಾಗಬೇಕು ಎಂಬ ಕನಸು ಮನದ ಮೂಲೆಯಲ್ಲಿ ಇಣುಕಿದ್ದೂ ಇದೆ.
ಹತ್ತನೇ ತರಗತಿಯ ಅಂಕಗಳು ಎಂಬತ್ತರ ಮೇಲೆ ಕಾಣಿಸಿಕೊಂಡ ಕಾರಣ, ನಾನು ಪಿಯುಸಿಯಲ್ಲಿ ಆರ್ಟ್ಸ್ ಆರಿಸಿಕೊಂಡದ್ದು ಸಹಪಾಠಿ ಗಳ ಪಾಲಿಗೆ ಅಚ್ಚರಿಯ ಸಂಗತಿಯೇ ಆಗಿತ್ತು. ಸಾಹಿತ್ಯ, ಪುಸ್ತಕ ಓದುವುದರ ಬಗ್ಗೆ ಸ್ವಲ್ಪ ಹಚ್ಚೇ ಆಸಕ್ತಿಯಿದ್ದ ನನಗೆ ಉಪನ್ಯಾಸಕರ ಮಾರ್ಗದರ್ಶನವೂ ಚೆನ್ನಾಗಿ ಲಭಿಸಿತ್ತು.
ಪ್ರೌಢಶಾಲೆಯಲ್ಲಿ ಬರವಣಿಗೆ ವಿಷಯಗಳಲ್ಲಿ ಸಕ್ರಿಯಳಾಗಿದ್ದ ನನಗೆ, ಪಿಯುಸಿಯಲ್ಲಿ ಕಾಲೇಜಿನ ಭಿತ್ತಿ ಪತ್ರಿಕೆಯ ನೇತೃತ್ವ ವಹಿಸಿಕೊಂಡಾಗ ಬರವಣಿಗೆಯ ಕಡೆಗಿನ ಒಲವು ಮತ್ತಷ್ಟು ಬೆಳೆಯಿತು. ಆಗಲೇ ಉಪನ್ಯಾಸಕರ ಮೂಲಕ ಪತ್ರಿಕೋದ್ಯಮ ಎಂಬ ವಿಷಯದಲ್ಲಿ ಪದವಿ ಮಾಡುವ ಅವಕಾಶದ ಕುರಿತು ತಿಳಿಯಿತು. ಅಲ್ಲಿಂದ ಶುರುವಾಗಿತ್ತು ಮಗದೊಂದು ಕನಸು ಸಾಕಾರಗೊಳಿಸುವ ಕಡೆಗಿನ ಹೆಜ್ಜೆ.
ನಾನೂ ಪತ್ರಿಕೋದ್ಯಮದಲ್ಲಿ ಪದವಿ ಮಾಡಿ ಕೊಳ್ಳಬೇಕು. ಹಾಗೆಯೇ ಕನ್ನಡದಲ್ಲಿ ಒಂದು ಸ್ನಾತಕೋತ್ತರ ಪದವಿಯೂ ಹೆಸರಿನೊಂದಿಗೆ ನಂಟಾದರೆ ಸೊಗಸಾಗಿರುತ್ತದೆ ಎಂಬ ಬಯಕೆಯೂ ಕಾಡಿತು. ಕನ್ನಡ ಸಾಹಿತ್ಯ ಹಾಗೂ ಪತ್ರಿಕೋದ್ಯಮವನ್ನು ಅರಸಿಕೊಂಡು ಹೋಗಿದ್ದ ನನಗೆ, ಪಿಯುಸಿ ಅಂಕಗಳ ಆಧಾರದಲ್ಲಿ ಐಚ್ಛಿಕ ಇಂಗ್ಲಿಷ್ ದೊರೆತಿತ್ತು. ಪಿಯುಸಿವರೆಗೂ ಇಂಗ್ಲಿಷ್ ಒಂದನ್ನು ಬಿಟ್ಟು ಬೇರೆಲ್ಲವನ್ನೂ ಕನ್ನಡದಲ್ಲೇ ಬರೆದಿದ್ದವಳಿಗೆ ಇಂಗ್ಲಿಷ್ ಪಠ್ಯ ಮಾಧ್ಯಮ ಹೊಸತು.
ಮೊದಲ ಒಂದಷ್ಟು ತರಗತಿಗಳಲ್ಲಿ ಉಪನ್ಯಾಸಕರ ಮುಖವನ್ನು ಹಾಗೂ ಪುಸ್ತಕವನ್ನು ನೋಡಿದ್ದು ಬಿಟ್ಟರೆ ತಲೆಗೆ ಹೋದದ್ದು ಅಷ್ಟರಲ್ಲೇ ಇತ್ತು. ಮೊದಲ ಕಿರುಪರೀಕ್ಷೆಯಲ್ಲಿ ಅಲ್ಲಿಂದಲ್ಲಿಗೆ ಪಾಸಾಗಿದ್ದೆ, ಇದನ್ನು ನೆನೆದು ತರಗತಿಯಲ್ಲಿ ಕಣ್ಣೀರಿಟ್ಟಿದ್ದೂ ಇದೆ. ಆಗಲೇ ಸಹಪಾಠಿಯೊಬ್ಬಳು ಅಂಕಗಳ ಕುರಿತಾಗಿ ಅವಮಾನಕರ ಮಾತೊಂದನ್ನು ಆಡಿಯೇ ಬಿಟ್ಟಿದ್ದಳು. ಮನಸ್ಸಿಗೆ ಸಹಜವಾಗಿಯೇ ನಾಟಿತ್ತು.
‘ಭಾಷೆ ಆಸಕ್ತಿಗೆ ಎಂದೂ ತೊಡರಲ್ಲ’ ಎಂದು ಅಂದೇ ನಿರ್ಧರಿಸಿಬಿಟ್ಟಿದ್ದೆ. ಹಠಕ್ಕೆ ಬಿದ್ದು ಕಾಲೇಜಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡೆ. ಲಿಟರರಿ ಕ್ಲಬ್‌ನ ಪ್ರತಿ ಕಾರ್ಯಕ್ರಮದಲ್ಲೂ ಹೋಗಿ ಭಾಗವಹಿಸಿದಾಗ ಹೊಸದೊಂದು ಸಾಹಿತ್ಯ ಲೋಕದ ಪರಿಚಯವಾಗಿತ್ತು.
ಒಂದೋ ಪತ್ರಿಕೋದ್ಯಮ ವೃತ್ತಿ ಮಾಡಬೇಕು, ಇಲ್ಲ ಪತ್ರಕರ್ತರನ್ನು ತಯಾರು ಮಾಡುವ ಉಪನ್ಯಾಸಕಿಯಾಗಬೇಕೆಂಬ ಕನಸಿನೊಂದಿಗೆ ಈಗ ಸ್ನಾತಕೋತ್ತರದಲ್ಲಿ ಬೆಸೆದುಕೊಂಡಿದೆ. ಈ ನಡುವೆ ಅರಿಯದೇ ಹುಟ್ಟಿದ ಪ್ರೀತಿ ಇಂಗ್ಲಿಷ್ ಸಾಹಿತ್ಯದ ಕುರಿತಾಗಿ. ಅದರಲ್ಲೂ ಉನ್ನತ ಶಿಕ್ಷಣ ಮಾಡುವ ಆಸೆಯಿದೆ. ಆದರೆ ಅದಕ್ಕಾಗಿ ನನ್ನ ಇಂಗ್ಲಿಷ್ ಭಾಷೆ ಇನ್ನೂ ಮಾಗಬೇಕು. ಕಾಯಲೇಬೇಕು.
ಎಲ್ಲದಕ್ಕೂ ಮುಖ್ಯವಾಗಿ ಒಂದು ಉತ್ತಮ ಉದ್ಯೋಗ ಜೀವನವನ್ನು ಕಟ್ಟಿಕೊಂಡು ನನಗಾಗಿ ಮಿಡಿಯುವ-ದುಡಿಯುವ ಕುಟುಂಬಕ್ಕೆ ಸುಂದರ ವಿಶ್ರಾಂತ ಜೀವನವನ್ನು ಕಲ್ಪಿಸಿಕೊಡಬೇಕು. ಕೆರಿಯರ್ ಎಂದು ಎಷ್ಟೇ ತಲೆಕೆಡಿಸಿಕೊಂಡರೂ, ಬಿಟ್ಟರೂ ಕೊನೆಗೆ ಮನ ಹಂಬಲಿಸುವುದು ಸುಂದರವಾದ ನೆಮ್ಮದಿ ತುಂಬಿ ತುಳುಕುವ ಸುಖೀ ಕುಟುಂಬ ಅಲ್ವಾ .– ಸೀಮಾ ಪೋನಡ್ಕ , ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು