Advertisement

ಸಾಧನೆಗೆ ಗುರಿ ಮುಖ್ಯ: ಸಿಇಒ

08:20 PM Feb 02, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಸಾಧನೆ ಮಾಡಬೇಕಾದರೆ ಮಕ್ಕಳಿಗೆ ಒಂದು ನಿರ್ದಿಷ್ಠ ಗುರಿ ಇರಬೇಕು. ಆ ಗುರಿ ತಲುಪಲು ಪೋಷಕರು ಸಹಕಾರ ನೀಡಬೇಕು. ಮಕ್ಕಳಿಗೆ ಪೋಷಕರು ಒಳ್ಳೆಯ ವಾತಾವರಣವನ್ನು ಕಲ್ಪಿಸಿದಾಗ ಅವರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆಯಲು ಸಹಾಯವಾಗುತ್ತದೆ ಎಂದು ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್‌ ತಿಳಿಸಿದರು.

Advertisement

ನಗರದ ಹೊರ ವಲಯದ ಅಗಲಗುರ್ಕಿಯ ಬಿಜಿಎಸ್‌ ಶಾಲೆಯಲ್ಲಿ ಭಾನುವಾರ ಶಾಲೆಯ ಯು.ಕೆ.ಜಿ ಮಕ್ಕಳಿಗೆ ಆಯೋಜಿಸಲಾಗಿದ್ದ ಗ್ರಾಜ್ಯುಯೇಷನ್‌ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ನಮ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ಅರಿವು ಮೂಡಿಸಿದಾಗ ಅವರು ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ ಎಂದರು.

ಪ್ರತಿಭೆ ಗುರುತಿಸಲಿ: ಆದಿಚುಂಚನಗಿರಿ ಮಠ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿ ಕೊಡುವುದು ವಿಶೇಷವಾಗಿದೆ. ಮಕ್ಕಳು ಇಂತಹ ಶಾಲೆಯಲ್ಲಿ ಓದುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಗುರಿ ನೀಡಿ ಆ ಗುರಿಯನ್ನು ತಲುಪಲು ಸಹಕಾರ, ಪ್ರೋತ್ಸಾಹ ನೀಡಬೇಕೆಂದರು. ಪ್ರತಿಯೊಂದು ಮಗುವಿನಲ್ಲಿ ಪ್ರತಿಭೆ, ಕೌಶಲ್ಯ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು ಪ್ರಾಮಾಣಿಕವಾಗಿ ಮಾಡಬೇಕೆಂದರು.

ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ತಮ್ಮ ಆಶೀರ್ವಚನದಲ್ಲಿ ಶಿಕ್ಷಕರ ಸಾಮರ್ಥಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಿಕ್ಷಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು. ಆದ್ದರಿಂದ ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವರಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಿದಾಗ ಉತ್ತಮ ವಿಚಾರಗಳನ್ನು ತಿಳಿಯುತ್ತಾರೆ. ಮನೆಯಲ್ಲಿ ಪೋಷಕರು ಮಕ್ಕಳ ಮುಂದೆ ಒಳ್ಳೆಯ ವಿಚಾರಗಳನ್ನು ಮಾತನಾಡಬೇಕು. ಮನೆಯಲ್ಲಿನ ವಾತಾವರಣವು ಮಕ್ಕಳು ಒಳ್ಳೆಯವರಾಗಲು ಹಾಗೂ ಕೆಟ್ಟವರಾಗಲು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳ ಜ್ಞಾನ ಹೆಚ್ಚಿಸುವುದರಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದದ್ದು. ಮಕ್ಕಳ ಕನಸುಗಳನ್ನು ನನಸು ಮಾಡಲು ಪೋಷಕರು ಉತ್ತಮ ವಾತಾವರಣ ಕಲ್ಪಿಸಬೇಕು. ಇಲ್ಲವಾದಲ್ಲಿ ಕನಸುಗಳು ಈಡೇರುವುದಿಲ್ಲ. ಮನೆಯಲ್ಲಿ ಪೋಷಕರು ಉತ್ತಮವಾದ ಅಭ್ಯಾಸಗಳನ್ನು ರೂಢಿಸಿಕೊಂಡಾಗ ಅವುಗಳನ್ನು ಮಕ್ಕಳು ಅನುಕರಣೆ ಮಾಡುತ್ತಾರೆ.

Advertisement

ಮಕ್ಕಳು ಮನೆಯಲ್ಲಿ ಓದುವ ಅಭ್ಯಾಸ ಮೂಡಿಸಿದರೆ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮುತ್ತಾರೆ. ಮಕ್ಕಳು ಪೋಷಕರ ಮುಂದೆ ದೊಡ್ಡ ವ್ಯಕ್ತಿಗಳಾಗುತ್ತೇವೆ ಎಂದು ಹೇಳಿದಾಗ ಅವರನ್ನು ಹುರಿದುಂಬಿಸಬೇಕೆ ಹೊರತು ಕಡೆಗಣಿಸಬಾರದು. ಮಾವಿನ ಮರಗಳನ್ನು ನೆಟ್ಟಾಗ ಅದರಲ್ಲಿ ಬರುವ ಫ‌ಲಗಳು ಅತ್ಯುತ್ತಮವಾಗಿರುತ್ತವೆ. ಅಲ್ಲಿಯವರೆಗೂ ನಾವು ಕಾಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜಿಎಸ್‌ ಶಾಲಾ ಮುಖ್ಯ ಶಿಕ್ಷಕರಾದ ಮೋಹನ್‌ ಕುಮಾರ್‌ ಡಿ.ಸಿ, ಶಿಡ್ಲಘಟ್ಟ ಬಿಜಿಎಸ್‌ ಪಿ.ಯು.ಕಾಲೇಜಿನ ಪ್ರಾಂಶುಪಾಲ ಮಹದೇವ್‌, ಬಿಜಿಎಸ್‌ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಹೆಚ್‌.ಎಂ.ರಾಜು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಪದವಿ ಪ್ರದಾನ: ಬಿಜಿಎಸ್‌ ಇಂಗ್ಲಿಷ್‌ ಶಾಲೆಯಲ್ಲಿ ಯು.ಕೆ.ಜಿ ಮಕ್ಕಳಿಗೆ ನಡೆದ ಗ್ರಾಜುಯೇಷನ್‌ ಡೇ ಕಾರ್ಯಕ್ರಮದಲ್ಲಿ ಶಾಲೆಯ 100 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಕಾರ್ಯಕ್ರಮದ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಪದವಿ ಸ್ವೀಕರಿಸಿದ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next