ಪಣಜಿ: ಇತ್ತೀಚಿನ ದಿನಗಳಲ್ಲಿ ಗೋವಾ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮಕ್ಕಳು, ವೃದ್ಧರು ಜಲಕ್ರೀಡೆಗಾಗಿ ನದಿ, ತೊರೆಗಳ ಮೊರೆ ಹೋಗುತ್ತಿದ್ದಾರೆ. ಗೋವಾದ ಸತ್ತರಿ ತಾಲೂಕಿನಲ್ಲಿ ಮಹದಾಯಿ, ವೇಳುಸ್, ರಗಾಡಾ, ವಾಳವಂಟಿ ನದಿ ಜಲಾನಯನ ಪ್ರದೇಶದಲ್ಲಿ ನಿರ್ಮಿಸಿರುವ ಪುಟ್ಟ ಪುಟ್ಟ ಬಾಂದಾರಾಗಳಿಗೆ ತೆರಳಿ ಪ್ರವಾಸಿಗರು ಮತ್ತು ಸ್ಥಳೀಯರು ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿ ಬಿಸಿಲ ಬೇಗೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿರುವ ದೃಶ್ಯ ಕಂಡುಬರುತ್ತಿದೆ.
ನೀರಾವರಿ ಇಲಾಖೆ ನದಿಗಳಿಗೆ ನಿರ್ಮಿಸಿರುವ ಬಾಂದಾರಾಗಳಲ್ಲಿ ವಿಶೇಷವಾಗಿ ಭಾನುವಾರ ಮತ್ತು ರಜಾದಿನಗಳಲ್ಲಿ, ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರು ಜಲಕ್ರೀಡೆಯಾಡುತ್ತಿರುವುದು ಕಂಡುಬರುತ್ತದೆ.
ಗೋವಾದ ಸತ್ತರಿ ತಾಲೂಕಿನಲ್ಲಿ ಹಲವು ಪ್ರವಾಸಿ ತಾಣಗಳಿವೆ. ಈ ಸ್ಥಳದಲ್ಲಿ ಇತ್ತೀಚೆಗೆ ನಿರ್ಮಿಸಲಾದ ಅಣೆಕಟ್ಟು (ಬಾಂದಾರಾ) ಪ್ರೇಕ್ಷಣೀಯ ಸ್ಥಳಗಳಾಗಿ ಮಾರ್ಪಟ್ಟಿದೆ. ಈ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ, ಭಾನುವಾರದಂದು 1,500 ರಿಂದ 2,000 ಕ್ಕೂ ಹೆಚ್ಚು ಜನರು ಇಲ್ಲಿ ಜಲಕ್ರೀಡೆಗಾಗಿ ಆಗಮಿಸುವ ದೃಶ್ಯ ಕಂಡುಬರುತ್ತಿದೆ.
ರಾಜ್ಯ ಸರ್ಕಾರವು 120 ಕೋಟಿ ವೆಚ್ಚದಲ್ಲಿ ಸತ್ತಾರಿ ತಾಲೂಕಿನ ಮಹದಾಯಿ, ವೇಳುಸ್, ರಗಾಡಾ, ವಾಳವಂಟಿ ಹಲವಾರು ನದಿಗಳಿಗೆ ಸರಣಿ ಅಣೆಕಟ್ಟುಗಳನ್ನು ನಿರ್ಮಿಸಿದೆ. ಇದರಿಂದ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಮಹಾದಾಯಿ ನದಿಯ ನೀರು ಮಾಲಿನ್ಯ ಮುಕ್ತವಾಗಿದೆ. ಸತ್ತರಿ ತಾಲೂಕಿನಲ್ಲಿ ಮಾನ್ಸೂನ್ ಪ್ರವಾಸೋದ್ಯಮದಲ್ಲಿ ಹೆಚ್ಚಳ ಕಾಣುತ್ತಿದ್ದು, ಬೇಸಿಗೆಯಲ್ಲೂ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ. ನಗರಗಾಂವ ಪಂಚಾಯಿತಿಯವರು ಶೌಚಾಲಯ ಹಾಗೂ ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಒದಗಿಸಬೇಕು. ಅಗತ್ಯ ಶುಲ್ಕ ವಿಧಿಸಿ ಪಂಚಾಯಿತಿ ಆದಾಯವನ್ನೂ ಪಡೆಯಬಹುದು. ಈ ಪ್ರದೇಶವನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಪಡಿಸಿದರೆ ಜನರಿಗೂ ಅನುಕೂಲವಾಗಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.