Advertisement

ಕಳಸಾ ಪ್ರದೇಶಕ್ಕೆ ಗೋವಾ ಸಚಿವರ ಭೇಟಿ

06:10 AM Jan 14, 2018 | Team Udayavani |

ಪಣಜಿ/ಖಾನಾಪುರ/ಬೆಳಗಾವಿ: ಗೋವಾ ನೀರಾವರಿ ಸಚಿವ ವಿನೋದ ಪಾಳೇಕರ ಅವರು ಶನಿವಾರ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಇರುವ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

Advertisement

ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ, ಕಳಸಾ ನೀರು ಬಿಡುವ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶ ಅಲ್ಲ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ಅದು ನಮಗೆ ಸಂಬಂಧಿಸಿದ್ದಲ್ಲ. ಮಹದಾಯಿ ವಿವಾದ ಪ್ರಕರಣ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗುವರೆಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು. ಕರ್ನಾಟಕ ಸರ್ಕಾರ ಕಳಸಾ ನಾಲಾ ಪ್ರದೇಶದಲ್ಲಿ ಕಾಮಗಾರಿ ನಡೆಸಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿ ಇಲ್ಲಿ ಕಾಮಗಾರಿ ನಡೆಸುತ್ತಿದ್ದು, ಇದನ್ನು ಖಂಡಿಸುವುದಾಗಿ ಅವರು ಹೇಳಿದರು. ಸಚಿವರೊಂದಿಗೆ ಗೋವಾ ರಾಜ್ಯದ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ ಸಂದೀಪ ನಾಡಕರ್ಣಿ ಮತ್ತಿತರ ಆಧಿಕಾರಿಗಳು ಹಾಜರಿದ್ದರು. ಆದರೆ, ಅವರ ಭೇಟಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಖಾನಾಪುರ ತಹಶೀಲ್ದಾರ  ಎಸ್‌.ಬಿ.ಉಳ್ಳೇಗಡ್ಡಿ ಉದಯವಾಣಿಗೆ ತಿಳಿಸಿದರು.

ಸಾಲಿಸಿಟರ್‌ ಜನರಲ್‌ ಆತ್ಮಾರಾಮ ನಾಡಕರ್ಣಿ ಮಾತನಾಡಿ, ಫೆ.6ರಿಂದ ನ್ಯಾಯಾಧಿಕರಣದಲ್ಲಿ ಆರಂಭಗೊಳ್ಳಲಿರುವ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಕಳಸಾ ನಾಲಾ ನಿರ್ಮಾಣ ಸಂಬಂಧದ ಬಗ್ಗೆ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ರಾಜ್ಯಕ್ಕೆ ಪತ್ರ:
ಈ ಮಧ್ಯೆ, ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರು ನಾಲೆ ನಿರ್ಮಾಣಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯುವಂತೆ ಗೋವಾ ರಾಜ್ಯದ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಶರ್ಮಾಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next