ಪಣಜಿ: ಗೋವಾದಲ್ಲಿ ಕನ್ನಡಿಗರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ ಸೋಮಶೇಖರ್ ಹೇಳಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕ, ಕನ್ನಡ ಸಾಹಿತ್ಯ ಪರಿಷತ್ತು ಪಣಜಿ ತಾಲೂಕ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಪಣಜಿಯ ಮೆನೇಜಿಸ್ ಬ್ರಗಾಂಜಾ ಸಭಾಗ್ರಹದಲ್ಲಿ ನ1 ರಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೋವಾ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸಿ ಕೊಡಬೇಕು. ಅಂತೆಯೇ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಬೇಕು. ಕಳೆದ ಬಾರಿ ಗೋವಾ ಕನ್ನಡ ಭವನ ನಿರ್ಮಾಣಕ್ಕೆ ಹಣ ಮಂಜೂರಾದರೂ ಕೂಡ ಇನ್ನು ಜಾಗ ಖರೀದಿ ಆಗದ ಕಾರಣ ಕನ್ನಡ ಭವನ ನಿರ್ಮಾಣವಾಗಿಲ್ಲ. ಮುಂಬರುವ ದಿನಗಳಲ್ಲಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣವಾಗಲಿ ಎಂದರು.
1973 ನ. 1 ರಂದು ಮೈಸೂರು ಎಂಬ ಹೆಸರಿಗೆ ಕರ್ನಾಟಕ ಎಂದು ಮರು ನಾಮಕರಣವಾದ ಒಂದು ಸುವರ್ಣ ಸಂಭ್ರಮದ ದಿನವನ್ನು ನಾವು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಶರಣ ಸಂಸ್ಕೃತಿ ಕನ್ನಡ ಸಾಹಿತ್ಯದ ಕೀರ್ತಿ ಕಳಶವಿದ್ದಂತೆ. ಇಡೀ ವಿಶ್ವಕ್ಕೆ ವಚನಕಾರರು ಒಂದು ಮಾನವ ಸಂವಿಧಾನವನ್ನು ಕೊಟ್ಟಿದ್ದಾರೆ ಎಂದ ಡಾ.ಸಿ.ಸೋಮಶೇಖರ್, ಕರ್ನಾಟಕದಲ್ಲಿ ಕೊಂಕಣಿ ಅಕಾಡಮಿಯನ್ನು ಮಾಡಿದ್ದೇವೆ. ನಾಲ್ಕೈದು ಕೋಟಿ ಖರ್ಚು ಮಾಡಿ ಕರ್ನಾಟಕದಲ್ಲಿ ಕೊಂಕಣಿ ಅಕಾಡಮಿ ನಿರ್ಮಾಣ ಮಾಡುತ್ತಿದ್ದೇವೆ. ಗೋವಾದಲ್ಲಿಯೂ ಕೂಡ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಅಕಾಡಮಿಯನ್ನು ನಿರ್ಮಾಣ ಮಾಡಬೇಕು. ಗೋವಾದಲ್ಲಿರುವ ಕನ್ನಡಿಗರು ತಮ್ಮ ಮಕ್ಕಳಿಗೆ ಕನ್ನಡವನ್ನು ಖಡ್ಡಾಯವಾಗಿ ಕಲಿಸಬೇಕು ಎಂದು ಕರೆ ನೀಡಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಗೋಕಾಕದ ಶೂನ್ಯ ಸಂಪಾದನಾ ಮಠದ ಶ್ರೀ ಮುರುಗರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಗೋವಾ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರೆಲ್ಲರೂ ಪ್ರತಿದಿನ ಒಂದು ರೂಪಾಯಿ ತೆಗೆದು ಇಟ್ಟರೆ ಕರ್ನಾಟಕದಲ್ಲಿ ನಿರ್ಮಾಣವಾಗದಂತಹ ದೊಡ್ಡ ಕನ್ನಡ ಭಾವ ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಧ್ಯಕ್ಷ ಡಾ. ಸಿದ್ದಣ್ಣ ಮೇಟಿ ,ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನೀಲಮ್ಮ ಮೇಟಿ, ಅಖಿಲ ಗೋವಾ ವೀರಶೈವ ಲಿಂಗಾಯತ ಅಧ್ಯಕ್ಷ ಪಡೆದಯ್ಯ ಹಿರೇಮಠ, ಕಸಾಪ ಪಣಜಿ ತಾಲೂಕ ಅಧ್ಯಕ್ಷ ಹನುಮಂತ ಗೊರವರ, ಕರವೇ ಗೋಕಾಕ ತಾಲೂಕಾ ಅಧ್ಯಕ್ಷಾದ ಬಸವರಾಜ ಖಾನಪ್ಪನವರ, ಗೋವಾ ರಾಜ್ಯ ಘಟಕದ ಮಹಿಳಾ ಪ್ರತಿನಿಧಿ ರೇಣುಕಾ ದಿನ್ನಿ ಮತ್ತಿತರರು ಉಪಸ್ಥಿತರಿದ್ದರು.
ಕಸಾಪ ಗೋವಾ ರಾಜ್ಯದ್ಯಕ್ಷ ಡಾ. ಸಿದ್ದಣ್ಣ ಮೇಟಿ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು, ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗೋವಾ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲರಿಗೆ ಕರ್ನಾಟಕದಿಂದಲೂ ಕೂಡ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.