Advertisement
ಪಾಕಿಸ್ಥಾನ ವಶಪಡಿಸಿಕೊಂಡಿದ್ದ ಭಾರತದ ಫಿಶಿಂಗ್ ಟ್ರಾಲರ್‌ವೊಂದು ದೇಶಕ್ಕೆ ವಾಪಸಾಗುತ್ತಿದ್ದು, ಅದರಲ್ಲಿ ಉಗ್ರರು ಆಗಮಿಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗೋವಾ ಸರಕಾರವು ತನ್ನ ಕರಾವಳಿಯಾಚೆ ಇರುವ ಎಲ್ಲ ನೌಕೆಗಳು, ಕ್ಯಾಸಿನೋಗಳು, ಜಲ ಕ್ರೀಡಾ ಆಪರೇಟರ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅಲರ್ಟ್ ಆಗಿರುವಂತೆ ಸೂಚಿಸಿದೆ. ಗುಪ್ತಚರ ಇಲಾಖೆಯ ಎಚ್ಚರಿಕೆಯು ನಿರ್ದಿಷ್ಟವಾಗಿ ಗೋವಾವನ್ನು ಕೇಂದ್ರೀಕರಿಸಿಲ್ಲ. ಅದು ಮುಂಬಯಿ, ಗುಜರಾತ್ ಸೇರಿದಂತೆ ಪಶ್ಚಿಮ ಕರಾವಳಿಯನ್ನು ಉದ್ದೇಶಿಸಿದೆ ಎಂದು ಗೋವಾ ಬಂದರು ಸಚಿವ ಜಯೇಶ್ ಸಲಗಾಂವ್ಕರ್ ತಿಳಿಸಿದ್ದಾರೆ.
ಇಡೀ ದೇಶವನ್ನೇ ಬೆಚ್ಚಿಬೀಳಿಸಿದಂಥ 26/11ರ ಮುಂಬಯಿ ದಾಳಿ ನಡೆದಿದ್ದೂ ಸಮುದ್ರದ ಮೂಲಕ ಆಗಮಿಸಿದ ಉಗ್ರರಿಂದಲೇ. ಅಂದು ಸಣ್ಣ ಮೋಟಾರು ಹೊಂದಿರುವ, ಹಗುರವಾಗಿದ್ದರೂ ವೇಗವಾಗಿ ಸಂಚರಿಸುವ ಜೆಮಿನಿ ಬೋಟ್‌ಗಳ ಮೂಲಕವೇ ಪಾಕಿಸ್ಥಾನದ ಲಷ್ಕರ್ ಉಗ್ರರು ಮುಂಬಯಿ ಕರಾವಳಿಯನ್ನು ತಲುಪಿದ್ದರು. ಎಕೆ47 ರೈಫಲ್‌ಗಳು, ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿದ್ದ ಪಾಪಿಗಳ ತಂಡ, ನಂತರ ಅಲ್ಲಿಂದ ತಾಜ್, ಒಬೆರಾಯ್ ಹೋಟೆಲ್, ನಾರಿಮನ್ ಹೌಸ್, ಸಿಎಸ್‌ಟಿ ರೈಲು ನಿಲ್ದಾಣ ಸೇರಿದಂತೆ ಹಲವು ಕಡೆಗೆ ತೆರಳಿ ಗುಂಡಿನ ಮಳೆಗೆರೆದವು. ಈ ಬೀಭತ್ಸ ದಾಳಿಗೆ 159 ಮಂದಿ ಬಲಿಯಾಗಿ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದು ಭಾರತದ ಇತಿಹಾಸದಲ್ಲೇ ನಡೆದ ಅತ್ಯಂತ ಭೀಕರ ಉಗ್ರರ ದಾಳಿಯಾಗಿತ್ತು.
Related Articles
ಆ ಭಯಾನಕ ದಾಳಿ ನಡೆದು 10 ವರ್ಷಗಳು ತುಂಬುತ್ತಿವೆ. ಉಗ್ರರ ದಾಳಿಯಿಂದ ಎಚ್ಚೆತ್ತ ಸರಕಾರ ಕರಾವಳಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಅನೇಕ ಕ್ರಮಗಳನ್ನೂ ಕೈಗೊಂಡಿವೆ. ನೌಕಾ ವಲಯಗಳ ರಕ್ಷಣೆಗಾಗಿ 3 ಹಂತದ ಭದ್ರತೆ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಕಾರ್ಯನಿರ್ವಹಿಸುವ ಸಾಗರ್ ಪ್ರಹರಿ ಬಲಕ್ಕೆ ಹೈಸ್ಪೀಡ್ ಪ್ರತಿಬಂಧಕ ವಾಹನ, ಕಾಪ್ಟರ್‌ಗಳನ್ನು ಒದಗಿಸಲಾಗಿದೆ. 2ನೇ ಹಂತದ ಭದ್ರತೆಯನ್ನು ಕರಾವಳಿ ರಕ್ಷಕ ಪಡೆ ನೋಡಿ ಕೊಂಡರೆ, 3ನೇ ಹಂತದ ಹೊಣೆಯನ್ನು ನೌಕಾ ಪೊಲೀಸರಿಗೆ ವಹಿಸಲಾಗಿದೆ. ಇವರಿಗೂ ಹೆಚ್ಚುವರಿ ಮಾನವ ಸಂಪನ್ಮೂಲ, ನಿಗಾ ವ್ಯವಸ್ಥೆ, ಸ್ಪೀಡ್ ಬೋಟ್ ಖರೀದಿಗೆ ಹಣಕಾಸು ನೆರವು ನೀಡಲಾಗಿದೆ. ಇದಲ್ಲದೆ, ಮೀನುಗಾರರಿಗೆ ಗುರುತಿನ ಕಾರ್ಡ್ ವಿತರಿಸಲಾಗಿದೆ.
Advertisement