ಬೆಂಗಳೂರು: “ಗೋವಾ ಸರ್ಕಾರ ಇಂದಿಗೂ ಪೋರ್ಚುಗಿಸರ ಕೈ ಕೆಳಗಿನ ಗುಲಾಮಗಿರಿಯಲ್ಲಿ ಇದ್ದೇವೆ ಎಂದೇ ಭಾವಿಸಿದ್ದು, ಭಾರತದ ಸಂವಿಧಾನದಡಿ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬುದನ್ನೇ ಮರೆತಿದೆ,’ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.
ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿರುವ ಗೋವಾ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಿ ಕನ್ನಡ ಒಕ್ಕೂಟದಿಂದ ಮಂಗಳವಾರ ರಾಜಭವನ ಮುತ್ತಿಗೆಗೆ ಯತ್ನಿಸಿದ ವೇಳೆ ಮಾತನಾಡಿದ ಅವರು, “ಕಳೆದ ಎರಡೂರು ವರ್ಷಗಳಲ್ಲಿ ಸುಮಾರು ಆರು ಬಾರಿ ಗೋವಾದಲ್ಲಿನ ಕನ್ನಡಿಗರ ವಸತಿ ಮೇಲೆ ದಾಳಿ ನಡೆಸಿ, ಬೀದಿಪಾಲು ಮಾಡಲಾಗಿದೆ.
ಆದರೆ, ಇದನ್ನು ಗಂಭೀರವಾಗಿ ಪರಿಗಣಿಸದ ಕರ್ನಾಟಕ ಸರ್ಕಾರ, ಕನ್ನಡಿಗರ ರಕ್ಷಣೆಗೆ ಮುಂದಾಗಿಲ್ಲ,’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೋವಾ ಸರ್ಕಾರಕ್ಕೆ ಪತ್ರ ಬರೆದು ಕನ್ನಡಿಗರಿಗೆ ರಕ್ಷಣೆ ಕೊಡಿ ಎಂದು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಮಂತ್ರಿಗಳನ್ನು ಕಳುಹಿಸಿ ಅಲ್ಪಸಂಖ್ಯಾತ ಗೋವಾ ಕನ್ನಡಿಗರಿಗೆ ಮೂಲಸೌಕರ್ಯ ಕಲ್ಪಿಸಿಕೊಡುವ ಪ್ರಯತ್ನ ಮಾಡಬೇಕಿತ್ತು. ಅದನ್ನು ಬಿಟ್ಟು, ಕನ್ನಡಿಗರಿಗೆ ಗೋವಾ ಸರ್ಕಾರದಿಂದ ಅನ್ಯಾಯ, ದೌರ್ಜನ್ಯ ನಡೆಯುತ್ತಿದ್ದರೂ ಮೌನವಾಗಿರುವುದು ಸರಿಯಲ್ಲ. ಕೂಡಲೇ ಗೋವಾದಲ್ಲಿ ಇರುವ ಕನ್ನಡಿಗರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ, ಕನ್ನಡ ಸೇನೆಯ ಕೆ.ಆರ್.ಕುಮಾರ್, ಗಿರೀಶ್‌ಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬಂಧನ ಬಿಡುಗಡೆ: ರಾಜಭವನ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನಚಕಮಕಿ ನಡೆಯಿತು. ಮುಂಜಾಗ್ರತೆ ಕ್ರಮವಾಗಿ ಪ್ರತಿಭಟನಾಕಾರರನ್ನು ಬಂಧಿಸಿದ ಪೊಲೀಸರು, ಮಂಗಳವಾರ ಮಧ್ಯಾಹ್ನ ಬಿಡುಗಡೆ ಮಾಡಿದರು.
ಗೋವಾ ಕನ್ನಡಿಗರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಕಾರವಾರದ ಕಡೆಯಿಂದ ಗೋವಾ ಪ್ರವೇಶಿಸಲಿರುವ ಸಾವಿರಾರು ಮಂದಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅ.14ರಂದು ಗೋವಾ ಮುತ್ತಿಗೆ ಹಾಕಲಿದ್ದಾರೆ.
-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ