Advertisement

Goa ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಿದ ಗೋವಾ ಸಿಎಂ 

04:49 PM Jul 12, 2023 | Team Udayavani |

ಪಣಜಿ: ಗೋವಾ ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರು ಮಾನ್ಸೂನ್ ಟ್ರ್ಯಾಕಿಂಗ್‍ಗಾಗಿ ವಿವಿಧೆಡೆ ಮುಗಿ ಬೀಳುತ್ತಿದ್ದಾರೆ. ಕಳೆದ 12 ದಿನಗಳಲ್ಲಿ ಗೋವಾದಲ್ಲಿ ನಡೆದ ವಿವಿಧ ಘಟನೆಗಳಲ್ಲಿ ಎಂಟು ಜನ  ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಮೈನಾಪಿ ಜಲಪಾತದಲ್ಲಿ ಇಬ್ಬರು ಹಾಗೂ ಕಸವಳ್ಳಿಯ ಚೆರೆಖಾನಿಯಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಳೆಗಾಲದಲ್ಲಿ ಸಂಭವಿಸುವ ಅಪಘಾತಗಳ ಬಗ್ಗೆ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

Advertisement

ಮಳೆಗಾಲದಲ್ಲಿ ಜಲಪಾತ ಧುಮ್ಮಿಕ್ಕುವ ಸ್ಥಳ ಎಷ್ಟು ಆಳವಾಗಿದೆ ಎಂದು ಅರ್ಥವಾಗುವುದಿಲ್ಲ. ಆದ್ದರಿಂದ ಯುವಕರು ಮದ್ಯದ ಅಮಲಿನಲ್ಲಿ ಜಲಪಾತಗಳ ಮೊರೆ ಹೋಗಬಾರದು. ಅಲ್ಲದೇ ಪ್ರವಾಸಿಗರು ಜಲಪಾತದಲ್ಲಿ ನೀರಿಗೆ ಇಳಿಯದಂತೆ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಸಲಹೆ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಸ್ನಾನಕ್ಕಾಗಿ  ಪ್ರವಾಸಿಗರು ಬೀಚ್‍ನಲ್ಲಿ ನೀರಿಗೆ ಇಳಿಯಬಾರದು ಎಂದೂ ಸಾವಂತ್ ಹೇಳಿದ್ದಾರೆ.

ಬೀಚ್‍ಗಳಲ್ಲಿ ಜನರ ಭದ್ರತಾ ದೃಷ್ಠಿಯಿಂದ ದೃಷ್ಟಿ ಜೀವರಕ್ಷಕಗಳನ್ನು ಸಹ ನಿಯೋಜಿಸಲಾಗಿದೆ. ಸರ್ಕಾರದ ಸುರಕ್ಷತಾ ಪ್ರಯತ್ನಗಳ ಹೊರತಾಗಿಯೂ, ನಾಗರಿಕರು ಅಪಾಯಕಾರಿ ಜಲಾಶಯಗಳಿಗೆ ತೆರಳಬಾರದು ಎಂದು ಮುಖ್ಯಮಂತ್ರಿ ಸಾವಂತ್ ಮನವಿ ಮಾಡಿದ್ದಾರೆ.

ಮೈನಾಪಿ ಜಲಪಾತದ ಅವಘಡದ ನಂತರ ಪ್ರವಾಸಿಗರ ಸುರಕ್ಷತೆಗಾಗಿ ಜಲಪಾತಕ್ಕೆ ಮಾರ್ಗದರ್ಶಕರನ್ನು ಒದಗಿಸುವಂತೆ ಅರಣ್ಯ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಸಮಾಜ ಕಲ್ಯಾಣ ಸಚಿವ ಸುಭಾಷ್ ಫಲ್ದೇಸಾಯಿ ಶನಿವಾರ ಮತ್ತು ಭಾನುವಾರದಂದು ಜಲಪಾತಗಳಿಗೆ ಆಗಮಿಸುವ  ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಜೀವರಕ್ಷಕ ಮತ್ತು ಪೊಲೀಸರನ್ನು ನಿಯೋಜಿಸಲು ಶಿಫಾರಸು ಮಾಡಿದರು. ಸದ್ಯ ಪ್ರವಾಸಿಗರಿಗೆ ಬಂದ್ ಆಗಿರುವ ಜಲಪಾತಗಳನ್ನು ಯಾವಾಗ ತೆರೆಯಬೇಕು ಎಂಬ ನಿರ್ಧಾರವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಅಲ್ಲದೆ, ಜಲಪಾತಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಮತ್ತು ಪ್ರವಾಸಿಗರಿಗೆ ಲೈಫ್ ಜಾಕೆಟ್ಗಳನ್ನು ಒದಗಿಸಬೇಕು ಎಂದು ಸ್ಥಳೀಯ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next