ಬೆಳಗಾವಿ: ಪ್ರಮೋದ್ ಸಾವಂತ್ ಅವರು ಗೋವಾ ಮುಖ್ಯಮಂತ್ರಿ ಆಗಿ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾರ ಬೆಳಗಾವಿಗೆ ಭೇಟಿ ನೀಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿಗೆ ಬಂದು ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದರು.
ಇಲ್ಲಿಯ ಶಾಸ್ತ್ರಿ ನಗರದ ಆರೆಸ್ಸೆಸ್ ಕಚೇರಿಗೆ ಬಂದು ಕೆಲ ಹೊತ್ತು ಉಳಿದುಕೊಂಡು ಆರೆಸ್ಸೆಸ್ ನ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪ್ರಮೋದ ಸಾವಂತ್ ಬೆಳಗಾವಿಗೆ ಆಗಮಿಸಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ , ನಾನು ಯಾವುದೇ ಊರಿಗೆ ಹೋದರೂ ಸಾಮಾನ್ಯವಾಗಿ ಅಲ್ಲಿಯ ಆರೆಸ್ಸೆಸ್ ಕಚೇರಿಗೆ ಭೇಟಿ ನೀಡುವುದು ವಾಡಿಕೆ. ಇದನ್ನು ನಾನು ಮೊದಲಿನಿಂದಲೂ ಮುಂದುವರಿಸಿಕೊಂಡು ಬಂದಿದ್ದೇನೆ. ಅದರಂತೆ ಬೆಳಗಾವಿಯ ಕಚೇರಿಗೆ ಬಂದಿದ್ದೇನೆ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಅದರಂತೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಬೆಳಗಾವಿ ಕಾರ್ಯಕ್ರಮ ಮುಗಿಸಿ ಮಹಾರಾಷ್ಟ್ರದ ಶ್ರೀ ಕೊಲ್ಲಾಪುರ ಶ್ರೀ ಮಹಾಲಕ್ಷ್ಮೀ ದೇವಿ ದರ್ಶನ ಪಡೆಯುತ್ತೇನೆ. ಅಲ್ಲಿ ನನ್ನ ಸ್ನೇಹಿತರು ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.
ಗೋವಾದಲ್ಲಿ ಇನ್ನು ಮುಂದೆಯೂ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡುತ್ತೇನೆ ಎಂದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್, ಹಲಾಲ್ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.