Advertisement
ಗೋವಾದ ಎಲ್ಲ 40 ಕ್ಷೇತ್ರಗಳಲ್ಲಿಯೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಕಳೆದ ಬಾರಿ ಸರ್ಕಾರ ಸ್ಥಾಪಿಸಲು ಬಿಜೆಪಿಗೆ ಬೆಂಬಲ ನೀಡಿದ್ದ ಗೋವಾ ಫಾರ್ವರ್ಡ್ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದೊಂದಿಗೆ ಕೈಜೋಡಿಸಿದ್ದರೆ, ಎಂಜಿಪಿ ಪಕ್ಷವು ಟಿಎಂಸಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇಷ್ಟೇ ಅಲ್ಲದೆಯೇ ಬಿಜೆಪಿಯಲ್ಲಿನ ಕೆಲ ಟಿಕೆಟ್ ಆಕಾಂಕ್ಷಿ ನಾಯಕರು ಪಕ್ಷೇತರರಾಗಿ ಬಿಜೆಪಿ ವಿರುದ್ಧವೇ ಸ್ಫರ್ಧಿಸಿದ್ದಾರೆ. ಇದರಿಂದಾಗಿ ಪ್ರಸಕ್ತ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಲಭಿಸದಿದ್ದರೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಕಷ್ಟವಾಗಿದೆ. ಬಿಜೆಪಿ ವಿರೋಧಿ ಪಕ್ಷಗಳೆಲ್ಲವೂ ಪ್ರಸಕ್ತ ಚುನಾವಣೆಯಲ್ಲಿ ಒಟ್ಟಾಗಿರುವುದರಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಪೂರ್ಣ ಬಹುಮತ ಪಡೆಯುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಗೋವಾದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.
Related Articles
Advertisement
ಪ್ರಸಕ್ತ ಬಾರಿ ಬಿಜೆಪಿ ಮನೋಹರ್ ಪರ್ರಿಕರ್ ರವರ ನೇತೃತ್ವವಿಲ್ಲದೆಯೇ ಮೊದಲ ಬಾರಿ ವಿಧಾನಸಭಾ ಚುನಾವಣೆ ಸ್ಫರ್ಧಿಸುತ್ತಿದೆ. ಬಿಜೆಪಿ ವಿರೋಧಿ ಪಕ್ಷಗಳೆಲ್ಲವೂ ಪ್ರಸಕ್ತ ಚುನಾವಣೆಯಲ್ಲಿ ಒಟ್ಟಾಗಿದ್ದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ. ಇನ್ನೊಂದು ಲೆಕ್ಕಾಚಾರದ ಪ್ರಕಾರ ಪ್ರಸಕ್ತ ಚುನಾವಣೆಯಲ್ಲಿ ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಟಿಎಂಸಿ ಪಕ್ಷಗಳು ಸ್ಪರ್ಧಿಸಿರುವುದರಿಂದ ಕಾಂಗ್ರೆಸ್ ಪಕ್ಷದ ಮತಗಳು ಒಡೆದು ಇದರ ಲಾಭ ಬಿಜೆಪಿಗೆ ಆಗುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಇದರಿಂದಾಗಿ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ನೀಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.