ಪಣಜಿ: ಗೋವಾ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮಾರ್ಚ 10 ರಂದು ನಡೆಯಲಿದ್ದು, ಫಲಿತಾಂಶ ಪ್ರಕಟವಾಗುವ ಮುನ್ನವೇ ಬಿಜೆಪಿ ನಮ್ಮ ಅಭ್ಯರ್ಥಿಗಳನ್ನು ಸೆಳೆಯಲು ಯತ್ನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡಣಕರ್ ಪತ್ರಿಕಾಗೋಷ್ಠಿ ನಡೆಸಿ, ಚುನಾವಣೆಯಲ್ಲಿ ಸೋಲುವುದು ಖಚಿತ ವಾದ ಬಳಿಕ ಬಿಜೆಪಿಯು ಇದೀಗ ನಮ್ಮ ಅಭ್ಯರ್ಥಿಗಳನ್ನು ಸೆಳೆಯಲು ಪ್ರಯತ್ನ ಆರಂಭಿಸಿದೆ. ಒಬ್ಬ ಶಾಸಕರಿಗೆ ಕೋಟ್ಯಂಟರ ರೂ ಆಮಿಷವೊಡ್ಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗಾಳಹಾಕುತ್ತಿದ್ದಾರೆ. ಇಷ್ಟೇ ಅಲ್ಲದೆಯೇ ಬಿಜೆಪಿಯು ಅಂಚೆ ಮತದಾರರಿಗೆ 10,000 ರೂ ನೀಡುವುದಾಗಿ ಆಮಿಷವೊಡ್ಡುತ್ತಿದೆ ಎಂದು ಗಿರೀಶ್ ಚೋಡಣಕರ್ ಆರೋಪಿಸಿದ್ದಾರೆ.
ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದ್ದು, ಬಿಜೆಪಿಯ ಭ್ರಷ್ಟಾಚಾರ ಮತ್ತು ಉದ್ಯೋಗ ನೇಮಕಾತಿ ಹಗರಣಗಳಿಂದ ಜನತೆ ಹೆಚ್ಚಿನ ನಷ್ಟ ಅನುಭವಿಸಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಜನತೆಗೆ ಮೋಸ ಮಾಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ಬಿಜೆಪಿ ಅಧಿಕಾರ ಕಿತ್ತುಕೊಂಡಿದೆ. ಇದರ ಕೋಪವನ್ನು ಜನತೆ ತಮ್ಮ ಮತದಾದ ಮೂಲಕ ಹೊರಹಾಕಿದ್ದಾರೆ. ಹೀಗಿದ್ದರೂ ಸೋಲಿನಿಂದಲೇ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಜಯಗಳಿಸಿದ ನಂತರ ಯಾರೂ ಬಿಜೆಪಿ ಸೇರುವುದಿಲ್ಲ ಎಂದು ಚೋಡಣಕರ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಾಂತರ ವಿಚಾರದಲ್ಲಿ ಕೇವಲ ೪೦ ವಿಧಾನಸಭಾ ಸ್ಥಾನ ಹೊಂದಿರುವ ಗೋವಾ ದೇಶದಲ್ಲಿ ಆಗ್ರ ಸ್ಥಾನದಲ್ಲಿದೆ ಎನ್ನುವುದು ಕಳೆದ ಕೆಲ ವರ್ಷಗಳ ರಾಜಕೀಯ ವಿದ್ಯಮಾನಗಳಿಂದ ಬಹಿರಂಗ ವಾಗಿತ್ತು.