ಮಕ್ಕಳು ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತವಲ್ಲ, ಹಾಗೇ ದೊಡ್ಡವರ ಮನಸ್ಸೂ ಆಫೀಸಿಗೆ ಹೊರಟು ನಿಂತಾಗ ಹಠ ಮಾಡುತ್ತೆ. ಅದೂ, ಒಂದೆರಡು ತಿಂಗಳು ಕೆಲಸದಿಂದ ಬ್ರೇಕ್ ತಗೊಂಡು, ಪುನಃ ಕೆಲಸಕ್ಕೆ ಹೋಗುವುದಿದೆಯಲ್ಲ, ಅದು ಬಹಳ ಕಷ್ಟ. ಆ ಕಷ್ಟ ಇತ್ತೀಚೆಗೆ ನನಗೆ ಅನುಭವಕ್ಕೆ ಬಂತು. ಮದುವೆಯ ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಎರಡು ತಿಂಗಳ ನಂತರ ಬೇರೊಂದೆಡೆ ಕೆಲಸಕ್ಕೆ ಹೊರಟು ನಿಂತಾಗ, ಅಳುವೇ ಬಂದುಬಿಟ್ಟಿತ್ತು.
ನನ್ನ ಅಳು ಮೋರೆ ನೋಡಿದ ಯಜಮಾನರು, ಮಗುವನ್ನು ಶಾಲೆಗೆ ಕಳಿಸುವಂತೆ ನನ್ನನ್ನು ಆಫೀಸ್‌ಗೆ ರೆಡಿ ಮಾಡತೊಡಗಿದರು. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿ ಇರೋದ್ರಿಂದ, 8 ಗಂಟೆಗೂ ಮುಂಚೆ ಏಳುವ ಪರಿಪಾಟ ಇರಲಿಲ್ಲ. ಹೀಗಾಗಿ, ಮೊದಲ ದಿನ ಕೆಲಸಕ್ಕೆ ಹೊರಡುವಾಗ ಬೆಳಗ್ಗೆ 6ಕ್ಕೆ ಏಳಬೇಕಿದ್ದರೂ, ನಿದ್ರಾದೇವಿ ಇನ್ನೂ ಕಣ್ರೆಪ್ಪೆಯ ಮೇಲೇ ಇದ್ದಳು. ಕಷ್ಟಪಟ್ಟು ಆರೂವರೆಗೆ ಹಾಸಿಗೆ ಬಿಟ್ಟಿದ್ದೆ.
ಅಷ್ಟೊತ್ತಿಗೆ ಯಜಮಾನರೂ ಎದ್ದು ಬಂದು, ಮನೆಕೆಲಸದಲ್ಲಿ ನೆರವಾಗತೊಡಗಿದರು. ಸ್ನಾನಕ್ಕೆ ಬಿಸಿ ನೀರು ಕಾಯಲಿಟ್ಟು, ಕಾಫಿ ಮಾಡಿ, ಕರ್ಚೀಫ್, ಛತ್ರಿ, ಮೊಬೈಲ್ ಚಾರ್ಜರ್, ಪುಸ್ತಕ, ಪೆನ್ನು, ನೀರಿನ ಬಾಟಲಿ ಮುಂತಾದ ಅಗತ್ಯ ವಸ್ತುಗಳನ್ನು ವ್ಯಾನಿಟಿ ಬ್ಯಾಗೊಳಗೆ ತುಂಬಿದರು. ಇಷ್ಟರ ಮಧ್ಯೆ ಅವರೂ ಸ್ನಾನ, ಪೂಜೆ, ತಿಂಡಿ ಅಂತೆಲ್ಲಾ ಕೆಲಸ ಮುಗಿಸಿ ಆಫೀಸ್‌ಗೆ ಹೊರಡಲು ಅಣಿಯಾಗಬೇಕಿತ್ತು.
ಅವರ ಅವಸ್ಥೆಯನ್ನು ಕಂಡು ನನಗೆ ನಗು ಮತ್ತು ಪ್ರೀತಿ ಎರಡು ಒಟ್ಟೊಟ್ಟಿಗೇ ಬಂದವು. ಮಗಳಿಗೆ ಬಟ್ಟೆ ಇಸ್ತ್ರಿ ಮಾಡಿ ಶಾಲೆಗೆ ಸಿದ್ಧಗೊಳಿಸುವ ಅಪ್ಪನಂತೆ, ಶಾಲೆಗೆ ಹೊರಡುವ ಮಗಳಿಗೆ ತಿಂಡಿ ತಿನ್ನಿಸುವ ಅಮ್ಮನಂತೆ, ತಂಗಿಗೆ ಬೈಕ್‌ನಲ್ಲಿ ಡ್ರಾಪ್ ಕೊಡಲು ಆತುರಪಡುವ ಅಣ್ಣನಂತೆ… ಹೀಗೆ ಹಲವು ಬಂಧನಗಳ ಭಾವ ಗಂಡನಲ್ಲಿ ಕಾಣಿಸುತ್ತಿತ್ತು. “ಥ್ಯಾಂಕ್ಯೂ, ಯಜಮಾನ್ರೇ’… ಅಂತ ಹೇಳಿ ಆಫೀಸ್‌ಗೆ ಹೊರಟವಳ ಕಣ್ಣಲ್ಲಿ ನೀರಿತ್ತು.
ಅದು ಆನಂದಭಾಷ್ಪವಾ ಅಥವಾ ಆಫೀಸಿಗೆ ಹೋಗಬೇಕಲ್ಲಾ ಅನ್ನುವ ಸಂಕಟವಾ ಗೊತ್ತಾಗಲಿಲ್ಲ. ಸಂಜೆ ಶಾಲೆಯ ಬೆಲ್ ಹೊಡೆಯುವುದನ್ನೇ ಕಾಯುವ ಸ್ಕೂಲು ಹುಡುಗಿಯಂತೆ, ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದೆ. ಅಂತೂ ಇಂತೂ ಕಚೇರಿ ಮುಗಿಸಿ ಮನೆಗೆ ಬಂದಾಗ, ಕಾಫಿ ಲೋಟ ಹಿಡಿದು ಕಾಯುತ್ತಿದ್ದ ಯಜಮಾನರನ್ನು ನೋಡಿ, ದಿನದ ಆಯಾಸವೆಲ್ಲಾ ದೂರವಾಯ್ತು.
* ಗೋಪಿಕಾ