Advertisement

ಜೂ. 23ರ ಒಳಗೆ ಗೋಶಾಲೆ ಯೋಜನೆ ಅನುಷ್ಠಾನಗೊಳ್ಳದಿದ್ದರೆ ಅಧಿಕಾರಿಗಳ ತಲೆದಂಡ ಖಚಿತ :ಚವ್ಹಾಣ್

08:40 PM Apr 05, 2022 | Team Udayavani |

ಬೆಂಗಳೂರು : ಜೂನ್ 23ರ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲೆಗೊಂದು ಗೋಶಾಲೆ ಯೋಜನೆ ಅನುಷ್ಠಾನವಾಗದಿದ್ದರೆ ಅಧಿಕಾರಿಗಳ ತಲೆದಂಡ ಖಚಿತ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಇಂದು ನಡೆದ ಇಲಾಖಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಗುಡುಗಿದ್ದಾರೆ.

Advertisement

ಇಂದು ವಿಕಾಸಸೌಧದಲ್ಲಿ ಪಶುಸಂಗೋಪನೆ ಇಲಾಖೆ ಆಯುಕ್ತರು ನಿರ್ದೇಶಕರು ಮತ್ತು ಉಪನಿರ್ದೇಶಕರ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಪ್ರತಿ ಜಿಲ್ಲೆಯಲ್ಲಿ ಜಿಲ್ಲೆಗೊಂದು ಗೋಶಾಲೆ ಅನುಷ್ಠಾನ ಯಾವ ಹಂತದಲ್ಲಿದೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು ಯೋಜನೆ ಅನುಷ್ಠಾನದಲ್ಲಿ ತೊಡಕುಗಳಿದ್ದರೂ ತಕ್ಷಣಕ್ಕೆ ಗಮನಕ್ಕೆ ತರಲು ಅವರು ತಿಳಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಆದಾಗಿನಿಂದ ರಾಜ್ಯದಲ್ಲಿ ಗೋಶಾಲೆಗಳು ಕ್ರಮೇಣ ಭರ್ತಿಯಾಗುತ್ತಿವೆ. ಹೀಗಾಗಿ ಆದ್ಯತೆಯ ಮೇಲೆ ಗೋಶಾಲೆಗಳ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ : ನಗರಸಭೆಯಲ್ಲಿದ್ದ ಫೋಟೋ ಒಂದೇ ದಿನದಲ್ಲಿ ಬದಲಾವಣೆ ; ಬಿಎಸ್‌ವೈಗೆ ಕೊಕ್, ಬೊಮ್ಮಾಯಿಗೆ ಸ್ಥಾನ!

Advertisement

ಅಧಿಕಾರಿಗಳು ಜಿಲ್ಲೆಗೊಂದು ಗೋಶಾಲೆ ತೆರೆಯುವಲ್ಲಿ ಮಾಡುತ್ತಿರುವ ವಿಳಂಬ ಇನ್ನು ಸಹಿಸುವುದಿಲ್ಲ ಎಂದು ಅವರು ಹಿರಿಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳು ತೋರುತ್ತಿರುವ ದಿವ್ಯ ನಿರ್ಲಕ್ಷ ಹಾಗೂ ಮೈಗಳ್ಳತನ ಜಿಲ್ಲೆಗೊಂದು ಗೋಶಾಲೆ ಯೋಜನೆ ಅನುಷ್ಠಾನದಲ್ಲಿ ಸಮಸ್ಯೆ ತಂದೊಡ್ಡುತ್ತಿದೆ. ಸೂಚನೆಯನ್ನು ಅರ್ಥಮಾಡಿಕೊಳ್ಳದ ಅಧಿಕಾರಿಗಳ ಮೇಲೆ ಸಚಿವರು ಹರಿಹಾಯ್ದರು.

ಬೇಸಿಗೆಯ ಧಗೆ ಹೆಚ್ಚಾಗುತ್ತಿರುವುದರಿಂದ ಗೋಶಾಲೆಗಳಲ್ಲಿ ಮೇವು, ನೀರು ಹಾಗೂ ಔಷಧಿಗಳ ಕೊರತೆಯ ಬಗ್ಗೆ ಸಚಿವರು ವಿಚಾರಿಸಿದರು ಹಾಗೂ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಜಿಲ್ಲಾ ಉಪನಿರ್ದೇಶಕರು ಗಳಿಗೆ ಸೂಚನೆ ನೀಡಿದ್ದಾರೆ.

ದೇಸಿ ತಳಿಗಳ ಸಂರಕ್ಷಣೆ ಹಾಗೂ ಗೋಹತ್ಯೆಯ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಕ್ರಮಕೈಗೊಳ್ಳಲು ಸಚಿವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಾಣಿ ಕಲ್ಯಾಣ ಸಹಾಯವಾಣಿ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು ಮಾತುಬಾರದ ಪ್ರಾಣಿಗಳಿಗೆ ಧ್ವನಿಯಾಗಿದೆ ಎಂದು ಅವರು ಹೇಳಿದರು. ಕೇಂದ್ರಕ್ಕೆ ಬರುವ ಕರೆಗಳು ತಕ್ಷಣದಲ್ಲಿ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ರವಾನೆ ಅಗುತ್ತಿದ್ದು ಸಕಾಲದಲ್ಲಿ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ದೊರೆಯುತ್ತಿರುವುದರಿಂದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಲ್ಮ ಫಹಿಂ, ಆಯುಕ್ತರಾದ ಬಸವರಾಜೇಂದ್ರ, ನಿರ್ದೇಶಕರಾದ ಮಂಜುನಾಥ್ ಪಾಳೇಗಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next