ಬೆಂಗಳೂರು: 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಿಟ್ಟು ವಿಮಾನ ಆಕಾಶಕ್ಕೆ ಜಿಗಿದ ಘಟನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಗೋ ಫಸ್ಟ್ ವಿಮಾನ ಯಾನ ಸಂಸ್ಥೆಯ ವಿಮಾನ ಇದಾಗಿದ್ದು, ಇದೀಗ ಡಿಜಿಸಿಎ ವರದಿ ಕೇಳಿದೆ.
ಬೆಂಗಳೂರಿನಿಂದ ದೆಹಲಿಗೆ ಜಿ8 116 ವಿಮಾನವು ಸೋಮವಾರ ಬೆಳಿಗ್ಗೆ 6.30 ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು.
ವಿಮಾನ ಹತ್ತಲು ನಾಲ್ಕು ಬಸ್ ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಯಿತು. ಗೋ ಫಸ್ಟ್ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಸುಮಾರು 55 ಪ್ರಯಾಣಿಕರಿದ್ದ ಒಂದು ಬಸ್ ಕಾಯುತ್ತಲೇ ಇತ್ತು ಎಂದು ಟ್ವಿಟರ್ ನಲ್ಲಿ ವಿಮಾನಯಾನ ಸಂಸ್ಥೆ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯನ್ನು ಟ್ಯಾಗ್ ಮಾಡಿದ ಒಬ್ಬರು ದೂರಿದ್ದಾರೆ.
ಈ ಘಟನೆಯನ್ನು ಅತ್ಯಂತ ಭಯಾನಕ ಘಟನೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಬಣ್ಣಿಸಿದ್ದಾರೆ.
ಇದನ್ನೂ ಓದಿ:ಸಾಗರ ಹಲ್ಲೆ ಯತ್ನ ಪ್ರಕರಣದಲ್ಲಿ ಮೂವರು ವಶಕ್ಕೆ; ತಂಗಿಯನ್ನು ಚುಡಾಯಿಸಿದ್ದಕ್ಕೆ ಮಚ್ಚು ಬೀಸಿದೆ ಎಂದ ಆರೋಪಿ
ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಗೋ ಫಸ್ಟ್ ಏರ್‌ವೇಸ್, “ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ” ಎಂದು ಹೇಳಿದೆ. ನಾಲ್ಕು ಗಂಟೆಗಳ ನಂತರ ಅಂದರೆ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹೊರಟಿದ್ದ ವಿಮಾನದಲ್ಲಿ ಆ ಪ್ರಯಾಣಿಕರನ್ನು ಕಳುಹಿಸಲಾಗಿದೆ ಎಂದು ವರದಿಯಾಗಿದೆ.
“ನಾವು ಏರ್‌ಲೈನ್‌ನಿಂದ ವರದಿಯನ್ನು ಕೇಳಿದ್ದೇವೆ ಮತ್ತು ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.