ಹುಣಸಗಿ: ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ರೈತರು ವಿಪರೀತ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸದೇ ಮೊದಲು ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿ ಎಂದು ಬಿಜೆಪಿ ಬರ ಅಧ್ಯಯನ ತಂಡದ ಮುಖ್ಯಸ್ಥ ಹಾಗೂ ಶಾಸಕ ಅರವಿಂದ ಬೆಲ್ಲದ ಒತ್ತಾಯಿಸಿದರು.
ತಾಲೂಕಿನ ಕರಿಭಾವಿ ಗ್ರಾಮದಲ್ಲಿ ಬರಗಾಲದಿಂದ ಹಾನಿಗೀಡಾಗಿರುವ ಬೆಳೆಗಳನ್ನು ವೀಕ್ಷಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಬರಗಾಲ ಪರಿಹಾರಕ್ಕಾಗಿ ಯಾವುದೇ ಖರ್ಚು ಮಾಡದೇ ಎಲ್ಲದಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಅನಗತ್ಯವಾಗಿ ಗೂಬೆ ಕೂಡಿಸುತ್ತಿದ್ದಾರೆ ಎಂದು ಹರಿಹಾಯ್ದರು.
324 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ ರೈತರಿಗೆ ಪರಿಹಾರ ಹಣ ಹಾಕಲು ವಿಳಂಬ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 25 ಸಾವಿರ ಹಣ ಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಾಗಲೂ ರೈತರ ಸಮಸ್ಯೆ ಬಗ್ಗೆ ತೀವ್ರ ನಿರ್ಲಕ್ಷÂ ವಹಿಸಿದ್ದು, ರೈತರ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿಯೇ ಇಲ್ಲ. ಈ ಹಿಂದೆ ಬಿಜೆಪಿ ಅ ಧಿಕಾರದಲ್ಲಿದ್ದಾಗ ನೆರೆ ಹಾವಳಿ ಬಂದಾಗ ರಾಜ್ಯದ ಎಲ್ಲ ಕಡೆಗೂ ನೆರವಿಗೆ ಧಾವಿಸಿತ್ತು. ಆದರೆ ಇದೀಗ ಸಿಎಂ-ಡಿಸಿಎಂ ಅವರಿಗೆ ರೈತರ ಸಂಕಷ್ಟ ಬಗ್ಗೆ ಹೇಳಷ್ಟು ಕಾಳಜಿಯೇ ಇಲ್ಲದಿರುವುದು ವಿಪರ್ಯಾಸ ಸಂಗತಿ ಎಂದರು.
ರಾಜ್ಯ ಸರಕಾರ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕೆ ವಿನಃ ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮಾಡುವುದಲ್ಲ. ಆಯಾ ಜಿಲ್ಲಾ ಧಿಕಾರಿಗಳ ಖಾತೆಯಲ್ಲಿ ಎನ್‌ಡಿಆರ್‌ಎಫ್ ಅಡಿ ಕೇಂದ್ರದ ಅನುದಾನ ಇದ್ದರೂ ರೈತರಿಗೆ ವಿನಿಯೋಗಿಸುತ್ತಿಲ್ಲ. ಇದು ಕಾಂಗ್ರೆಸ್ ಸರಕಾರದ ವೈಫಲ್ಯ ಎಂದು ವ್ಯಂಗ್ಯವಾಡಿದರು.
ಸಂಸದ ರಾಜಾ ಅಮರೇಶ್ವರ ನಾಯಕ, ರಾಜಾ ಹನುಮಪ್ಪನಾಯಕ, ಸುರೇಶ ಸಜ್ಜನ್, ಬಿಜೆಪಿ ಮಂಡಳ ಅಧ್ಯಕ್ಷ ಮೇಲಪ್ಪ ಗುಳಗಿ, ಎಚ್.ಸಿ.ಪಾಟೀಲ, ಅಮೀನ್ ರೆಡ್ಡಿ, ಗುರು ಕಾಮಾ, ಸಿದ್ಧನಗೌಡ ಪಾಟೀಲ ಕರಿಭಾವಿ ಸೇರಿದಂತೆ ಇತರರಿದ್ದರು.