Advertisement

Sullia: ಪ್ಲಾಟ್‌ಫಾರ್ಮ್ ಎತ್ತರಿಸುವ ಕಾರ್ಯ ಪೂರ್ಣ

01:05 PM Dec 28, 2024 | Team Udayavani |

ಸುಳ್ಯ: ಮಂಗಳೂರು- ಬೆಂಗಳೂರು ನಡುವಿನ ರೈಲು ಮಾರ್ಗದಲ್ಲಿ ಬರುವ ಕಡಬ ತಾಲೂಕಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಎತ್ತರಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನು ಶೆಲ್ಟರ್‌ ಕಾಮಗಾರಿ ಆಗಬೇಕಾಗಿದೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Advertisement

ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಮೀಟರ್‌ಗೆàಜ್‌ನಿಂದ ಬ್ರಾಡ್‌ ಗೇಜ್‌ಗೆ ಹಳಿ ಪರಿವರ್ತನೆಯಾದ ಬಳಿಕ ಗ್ರಾಮೀಣ ಭಾಗದ ಕೆಲವು ರೈಲು ನಿಲ್ದಾಣಗಳಲ್ಲಿ ಪ್ಲಾರ್ಟ್‌ಫಾರ್ಮ್ ಹಳಿಗೆ ಸಮಾನಾಂತರವಾಗಿತ್ತು. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಸರಿಪಡಿಸಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಪ್ಲಾಟ್‌ಫಾರ್ಮ್ ಎತ್ತರಿಸುವ ಕಾಮಗಾರಿ ವರ್ಷದ ಹಿಂದೆ ಆರಂಭಗೊಂಡಿತ್ತು.

ಯಾವ ಐದು ರೈಲು ನಿಲ್ದಾಣ?
ಕಡಬ ತಾಲೂಕಿನ ಕಡಬ ಸಮೀಪದ ಕೋಡಿಂಬಾಳ, ಬಜಕೆರೆ, ಎಡಮಂಗಲ, ಕಾಣಿಯೂರು, ನರಿಮೊಗರು ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್ ಅನ್ನು ಎತ್ತರಿಸುವ ಕಾಮಗಾರಿ ನಡೆಸಲಾಗಿದೆ. ಪ್ಲಾಟ್‌ಫಾರ್ಮ್ಗಳನ್ನು ಸುಮಾರು 250 ಮೀಟರ್‌ ಉದ್ದಕ್ಕೆ ವಿಸ್ತರಿಸಲಾಗಿದೆ ಮತ್ತು ನಿಯಮಿತ ಎತ್ತರಕ್ಕೆ ಏರಿಸಲಾಗಿದೆ.

ಶೀಘ್ರವೇ ರೈಲು ವಿಸ್ತರಣೆ
ಶೀಘ್ರದಲ್ಲಿ ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಣೆಯಾಗುವ ನಿರೀಕ್ಷೆಯಲ್ಲಿದ್ದು, ಬಳಿಕ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೊತ್ತು ಮಂಗಳೂರು-ಸುಬ್ರಹ್ಮಣ್ಯ ರೋಡ್‌ ನಡುವೆ ಲೋಕಲ್‌ ಪ್ಯಾಸೆಂಜರ್‌ ರೈಲು ಓಡಾಟ ನಡೆಸಲಿದೆ. ಈ ಮೂಲಕ ಈ ಭಾಗದ ಹಲವು ವರ್ಷಗಳ ಬೇಡಿಕೆ ಈಡೇರಲಿದೆ.

Advertisement

ಇನ್ನು ಆಗಬೇಕಿರುವ ಕೆಲಸಗಳು
ಪ್ಲಾಟ್‌ಫಾರ್ಮ್ ಎತ್ತರಿಸುವ ಕಾಮಗಾರಿ ಮುಗಿದಿದ್ದು, ಇನ್ನು ಹಲವು ಕೆಲಸಗಳು ಬಾಕಿ ಇವೆ. ಪ್ರಯಾಣಿಕರಿಗೆ ಕುಡಿಯುವ ನೀರು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಶೆಲ್ಟರ್‌ ವ್ಯವಸ್ಥೆಯ ಕಾಮಗಾರಿ ನಡೆಯಬೇಕಿದೆ. ಕೆಲವೆಡೆ ಶೆಲ್ಟರ್‌ ನಿರ್ಮಾಣಕ್ಕೆ ಪಿಲ್ಲರ್‌ ಅಳವಡಿಕೆಗೆ ಸಿದ್ಧತೆಗಳನ್ನು ಆರಂಭಿಸಲಾಗಿದೆ. ನಿಲ್ದಾಣಗಳಲ್ಲಿ 60 ಮೀಟರ್‌ ಉದ್ದದ ಶೆಲ್ಟರ್‌ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸನ, ನೀರು, ಶೆಲ್ಟರ್‌ ಕಾಮಗಾರಿ ಒಟ್ಟು 4.50 ಕೋಟಿ ವೆಚ್ಚದಲ್ಲಿ ನಡೆಯಲಿದೆ.

ಶೆಲ್ಟರ್‌ ಮಾರ್ಚ್‌ಗೆ ಪೂರ್ಣ
ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣ ಸಮೀಪದ ದಕ್ಷಿಣ ಕನ್ನಡ ಜಿಲ್ಲೆಯ ಐದು ಸ್ಥಳೀಯ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಎತ್ತರಿಸು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉಳಿದಂತೆ ಶೆಲ್ಟರ್‌ ಕಾಮಗಾರಿಯನ್ನು ಮಾರ್ಚ್‌ ಅಂತ್ಯದೊಳಗೆ ಮುಗಿಸಲಾಗುತ್ತದೆ.
-ಕಿಲ್ಜಿ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೈಸೂರು ರೈಲ್ವೇ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next