ಸಿಡ್ನಿ: ನ್ಯೂಜಿಲ್ಯಾಂಡ್ ತಂಡದ ಆಲ್ ರೌಂಡ್ ಪ್ರದರ್ಶನದ ಎದುರು ಕಂಗಾಲಾದ ಶ್ರೀಲಂಕಾ ತಂಡವು ಸೂಪರ್ 12 ಹಂತದ ಇಂದಿನ ಪಂದ್ಯದಲ್ಲಿ ಹೀನಾಯ ಮುಖಭಂಗ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡವು ಗ್ಲೆನ್ ಫಿಲಿಪ್ ಶತಕದ ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದರೆ, ಚೇಸಿಂಗ್ ವೇಳೆ ಸತತ ವಿಕೆಟ್ ಕಳೆದುಕೊಂಡ ಲಂಕಾ ತಂಡವು 19.2 ಓವರ್ ಗಳಲ್ಲಿ 102 ರನ್ ಗೆ ಆಲೌಟಾಗಿ 65 ರನ್ ಅಂತರದ ಸೋಲನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಕಿವೀಸ್ ಆರಂಭದಲ್ಲೇ ಸಂಕಷ್ಟ ಎದುರಿಸಿತು. ತಂಡದ ಮೊತ್ತ 15 ರನ್ ಆಗುವಷ್ಟರಲ್ಲಿ ಮೂವರು ಔಟಾಗಿದ್ದರು. ನಂತರ ಜೊತೆಯಾದ ಗ್ಲೆನ್ ಫಿಲಿಪ್ಸ್ ಮತ್ತು ಡ್ಯಾರೆಲ್ ಮಿಚೆಲ್ ನಾಲ್ಕನೇ ವಿಕೆಟ್ ಗೆ 84 ರನ್ ಜೊತೆಯಾಟವಾಡಿದರು. ಮಿಚೆಲ್ 22 ರನ್ ಗಳಿಸಿದರೆ, ಅದ್ಭುತ ಇನ್ನಿಂಗ್ಸ್ ಆಡಿದ ಫಿಲಿಪ್ಸ್ ಶತಕ ಪೂರೈಸಿದರು. 64 ಬಾಲ್ ಎದುರಿಸಿದ ಫಿಲಿಪ್ಸ್ ನಾಲ್ಕು ಸಿಕ್ಸರ್ ನೆರವಿನಿಂದ 104 ರನ್ ಗಳಿಸಿದರು.
ಇದನ್ನೂ ಓದಿ:ಜನ ಅವಕಾಶ ಕೊಟ್ಟರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಇದೆ; ನಟಿ ಕಂಗನಾ
ಗುರಿ ಬೆನ್ನತ್ತಿದ ಶ್ರೀಲಂಕಾ ಮೊದಲ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. ತಂಡದ ಸ್ಕೋರ್ 8 ರನ್ ಆಗುವ ವೇಳೆ ನಾಲ್ಕು ಮಂದಿ ಬ್ಯಾಟರ್ ಗಳು ಪೆವಿಲಿಯನ್ ಸೇರಿಯಾಗಿತ್ತು. ಬಳಿಕ ಸಂಪೂರ್ಣ ಕುಸಿತದಿಂದ ತಪ್ಪಿಸಿದ ಭಾನುಕ ರಾಜಪಕ್ಸ 34 ರನ್ ಗಳನ್ನು ಗಳಿಸಿದರೆ, ನಾಯಕ ದಾಸುನ ಶನಕ 35 ರನ್ ಗಳಿಸಿದರು. ಕೊನೆಗೆ ತಂಡವು 102 ರನ್ ಗಳಿಗೆ ಆಲೌಟಾಯಿತು.
ಕಿವೀಸ್ ಬಿಗು ದಾಳಿ ಸಂಘಟಿಸಿದ ಟ್ರೆಂಡ್ ಬೌಲ್ಟ್ ಅವರು 13 ರನ್ ನೀಡಿದ ನಾಲ್ಕು ವಿಕೆಟ್ ಕಿತ್ತರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.