ದೇವನಹಳ್ಳಿ: ನಗರದ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂ.134ರಲ್ಲಿ ಕಳೆದ 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರೈತರ ಜಮೀನನ್ನು ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ನೀಡಿರುವುದರಿಂದ ನಮಗೆ ಜಾಗವಿಲ್ಲದಂತಾಗಿದೆ. ಕೂಡಲೇ ನಮಗೆ ಪರ್ಯಾಯ ಜಾಗ ಮತ್ತು ಪರಿಹಾರ ನೀಡಬೇಕೆಂದು ರೈತರು ಕಪ್ಪು ಪಟ್ಟಿ ಧರಿಸಿ ಶಂಕುಸ್ಥಾಪನಾ ಸ್ಥಳದ ಬಳಿ ಪ್ರತಿಭಟನೆ ನಡೆಸಿದರು.
ಕೃಷಿ ಜಮೀನು ಕಳೆದುಕೊಂಡ ನಾವು ಸುಮಾರು 50 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಆದರೆ, ಇಂದು ನಮಗೆ ಮೋಸ ಮಾಡಿ ಕೋರ್ಟ್ ಕಟ್ಟಲು ಹೊರಟಿದ್ದಾರೆ. ನಾವು ಎಲ್ಲಿಗೆ ಹೋಗಬೇಕು. ನಮ್ಮ ಜಾಗವನ್ನು ಈ ರೀತಿ ಮಾಡಿದರೆ ನಮ್ಮ ಮಕ್ಕಳ ಗತಿಯೇನು ಎಂದು ಕಣ್ಣಿರಿಟ್ಟು ಗೋಳಾಡುತ್ತಿದ್ದ ದೃಶ್ಯಗಳು ಜನಸಾಮಾನ್ಯರ ಕಣ್ಣಲ್ಲಿ ನೀರು ಬರುವಂತೆ ಮಾಡಿದವು. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನೊಂದ ರೈತರಿಗೆ ಪರಿಹಾರ ನೀಡುವಂತಾಗಬೇಕೆಂದು ರೈತರು ಆಗ್ರಹಿಸಿದರು.
ರೈತ ನಾಯಕಿ ಪ್ರಭಾವತಿ ಮಾತನಾಡಿ, ಕಳೆದ 50 ವರ್ಷಗಳಿಂದ ಈ ಜಾಗದಲ್ಲಿ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ವ್ಯವಸಾಯ ಮಾಡುತ್ತ ಜೀವನ ಸಾಗಿಸುತ್ತಿದ್ದೇವೆ. ಇದೀಗ ದಿಢೀರ್ ಎಂದು ತರಾತುರಿಯಲ್ಲಿ ನ್ಯಾಯಾಲಯಕ್ಕಾಗಿ ಜಾಗವನ್ನು ವಶಪಡಿಸಿಕೊಂಡಿರುವುದು ನಮಗೆ ತುಂಬಲಾರದ ನಷ್ಟ ಉಂಟಾಗಿದೆ. ಸರ್ವೆ ನಂ.134ರಲ್ಲಿ 120 ಎಕರೆಯಲ್ಲಿ ಈಗ 82 ಎಕರೆ ಜಾಗವಿದ್ದು, ಅದರಲ್ಲಿ 64 ಜನರು ರೈತದ್ದಾಗಿದೆ. ಅವರ ಮಂಜೂರಾತಿ ಜಮೀನುಗಳನ್ನು ವಜಾಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮಹಿಳೆ ಪಿಳ್ಳಮ್ಮ ಮಾತನಾಡಿ, 1964ರಿಂದ ಅನುಭೋಗದಲ್ಲಿದ್ದೇವೆ. 1983ರಲ್ಲಿ ಹಕ್ಕುಪತ್ರವನ್ನು ನೀಡಿದ್ದಾರೆ. ಏಕಾಏಕಿ ವಜಾಗೊಳಿಸಿರುವುದರಿಂದ ನಮ್ಮ ಪರಿಸ್ಥಿತಿ ಸಂಕಷ್ಟದಲ್ಲಿದೆ ಎಂದು ಅಳಲು ತೋಡಿಕೊಂಡರು. ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ ಪೊಲೀಸರು, ನೀವು ಪ್ರವಾಸಿ ಮಂದಿರಕ್ಕೆ ಬನ್ನಿ. ನಿಮ್ಮ ಸಮಸ್ಯೆ ಬಗ್ಗೆ ಉಪವಿಭಾಗಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿ ಕಳುಹಿಸಿಕೊಟ್ಟರು. ಇದೇ ಸಂದರ್ಭದಲ್ಲಿ ಸರ್ವೆ ನಂಬರ್ 134ರ ಜಮೀನು ಕಳೆದುಕೊಂಡ ರೈತರು ಮತ್ತಿತರರು ಇದ್ದರು.