ಹಾರೂಗೇರಿ: ಪಟ್ಟಣದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಥಣಿ-ಗೋಕಾಕ ಮುಖ್ಯರಸ್ತೆಯ ಚರಂಡಿ ಪಕ್ಕದಲ್ಲಿಯೇ ಚೆನ್ನದಾಸರ ಸಮುದಾಯದವರು ಶವ ದಹನ ಮಾಡುತ್ತಿರುವುದರಿಂದ ಆವೇಳೆ ನಾಲ್ಕೈದು ತಾಸು ಹೆದ್ದಾರಿ ತುಂಬ ದಟ್ಟವಾದ ಹೊಗೆ ಆವರಿಸುವುದರಿಂದ ತೊಂದರೆಯಾಗುತ್ತಿದೆಯೆಂದು ಸಾರ್ವಜನಿಕರು ದೂರಿದ್ದಾರೆ.
ಪಕ್ಕದಲ್ಲಿಯೇ ಶಾಲಾ-ಕಾಲೇಜುಗಳಿರುವುದರಿಂದ ಶಾಲಾ ಕೊಠಡಿಗಳಲ್ಲಿ ದಟ್ಟವಾದ ಹೊಗೆ ಆವರಿಸುತ್ತಿದೆ. ಇದರಿಂದ ವಿದ್ಯಾರ್ಥಿಗಳ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತಿದೆ. ಅಲ್ಲದೇ ರಸ್ತೆ ಆಚೆಗೆ ವಿದ್ಯಾನಗರದಲ್ಲಿ ಇನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು, ಶವ ದಹನದ ಹೊಗೆ ಮನೆಗಳಲ್ಲಿ ದುರ್ನಾತ ಬೀರುತ್ತಿದೆ.
ಇಲ್ಲಿಯ ಚೆನ್ನದಾಸರ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಜನಸಂಖ್ಯೆ ಸುಮಾರು ಒಂದುವರೆ ಸಾವಿರವಿದೆ. ಬಡಾವಣೆಯಲ್ಲಿ ನಾಗರಿಕ ಸೌಲಭ್ಯಗಳೇ ಇಲ್ಲ. ಯಾರಾದರೂ ತೀರಿಕೊಂಡರೆ ಶವಸಂಸ್ಕಾರಕ್ಕೆ ಸ್ಥಳವೇ ಇಲ್ಲ. ಸಮುದಾಯದ ಮುಕ್ಕಾಲು ಪಾಲು ಜನ ಜಮೀನು ಇಲ್ಲದ ಕೃಷಿ ಕೂಲಿಗಳು. ಮೊದಮೊದಲು ಯಾರಾದರು ತೀರಿಕೊಂಡರೆ ಹೆಸ್ಕಾಂ ಕಚೇರಿಯ ರಸ್ತೆ ಪಕ್ಕದ ಚರಂಡಿಯ ದಿಬ್ಬದಲ್ಲಿ ಶವ ಹೂಳುತ್ತಿದ್ದರು. ಈಗ ಹೆದ್ದಾರಿ ರಸ್ತೆ ವಿಸ್ತಾರವಾಗಿದ್ದರಿಂದ ಚರಂಡಿ ಮಗ್ಗುಲಲ್ಲೇ ದಹನ ಮಾಡಲಾಗುತ್ತಿದೆ. ಇದರಿಂದ ಶಾಲಾ ಮಕ್ಕಳು ಹೆದರುವಂತಾಗಿದೆ. ಆದ್ದರಿಂದ ಸರಕಾರ ಅವರಿಗೊಂದು ಸ್ಮಶಾನ ಜಾಗಾ ನಿರ್ಮಿಸಿಕೊಡುವುದು ತುರ್ತು ಅಗತ್ಯವಾಗಿದೆ.
ಚನ್ನದಾಸರ ಸಮಾಜಕ್ಕೆ ಸ್ವಂತ ಸ್ಮಶಾನವಿಲ್ಲ. ಜಾಗ ನೀಡುವಂತೆ ಕಳೆದೆರಡು ದಶಕಗಳಿಂದ ಗ್ರಾಮ ಪಂಚಾಯ್ತಿ, ಪುರಸಭೆ, ಶಾಸಕರು ಹಾಗೂ ಸರ್ಕಾರಕ್ಕೂ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ಸ್ಮಶಾನಕ್ಕಾಗಿ ಸಮಾಜದವರು ಪ್ರತಿಭಟನೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಚನ್ನದಾಸರ ಬಡಾವಣೆ ನಿವಾಸಿಯಾದ ಪುರಸಭೆ ಸದಸ್ಯ ಹನಮಂತ ಸಣ್ಣಕ್ಕಿನವರ.
ಶಾಲಾ ಪಕ್ಕದಲ್ಲೇ ಶವ ದಹನ ಮಾಡುವುದರಿಂದ ದಟ್ಟ ಹೊಗೆ ಶಾಲಾ ಕೊಠಡಿಯೊಳಗೆ ಆವರಿಸಿ, ಉಸಿರುಗಟ್ಟಿಸುತ್ತಿದೆ. ಪ್ರಾಥಮಿಕ ಶಾಲೆ ಮಕ್ಕಳು ಇದನ್ನು ಕಂಡು ಹೆದರುತ್ತಿದ್ದಾರೆ ಎನ್ನುವುದು ಶಾಲೆಯ ಮುಖ್ಯೋಪಾಧ್ಯಾಯ ಟಿ.ಬಿ. ಸಾಜನೆ ಅಳಲು.