Advertisement
ಹೆಣ್ಣು ಮಗುವೊಂದು ಮನೆಯೊಳಗಿದ್ದರೆ ಆ ಮನೆಯಲ್ಲೊಂದು ಧನಾತ್ಮಕ ಶಕ್ತಿ ಇದ್ದೇ ಇರು ತ್ತದೆ. ತಾನಿರುವಲ್ಲೆಲ್ಲ ನಗುವಿರಲಿ, ಮಾತಿನ ಸೌಹಾರ್ದತೆಯಿರಲಿ, ಒಪ್ಪ ಓರಣವಾಗಿರಲಿ ಎನ್ನುವ ಸದಭಿರುಚಿಯನ್ನು ಹೆಣ್ಣು ಮಗು ನೈಸರ್ಗಿಕ ವಾಗಿಯೇ ಪಡೆದುಕೊಂಡು ಬಂದಿದೆ. ಇಂದು ಈಕೆ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಾ ಇದ್ದಾಳೆ ಎಂದರೆ ಅದಕ್ಕೆ ಹಲವಾರು ವರ್ಷಗಳ ಸಂಘರ್ಷವೇ ಕಾರಣ. ಪ್ರಸ್ತುತ ನಮ್ಮ ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದರೆ ಸಾಕು ಆಕೆಗಿರುವ ಶಕ್ತಿ ಹಾಗೂ ಯುಕ್ತಿಯ ಅರಿವಾಗುತ್ತದೆ. ಹಾಗಿದ್ದರೆ ಈಗ ಹೆಣ್ಣು ಮಕ್ಕಳೆಲ್ಲ ಸುರಕ್ಷಿತರಾಗಿದ್ದಾರೆ, ಶೋಷಣೆಯಿಂದ ಮುಕ್ತರಾಗಿದ್ದಾರೆ, ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿ ದ್ದಾರೆ ಎಂದೆನ್ನಬಹುದೇ?. ಬಹುಶಃ ಇಲ್ಲ.ಸದ್ಯ ಹೆಣ್ಣುಮಗುವಿಗೆ ಸಿಗಬೇಕಾದ ಮೂಲ ಭೂತ ಶಿಕ್ಷಣ ಸಿಗುತ್ತಿದೆ, ಶಾಲಾಕಾಲೇಜುಗಳಲ್ಲಿ ಹಾಜರಾತಿ ಪುಸ್ತಕ ತೆರೆದು ನೋಡಿದರೆ ಹೆಣ್ಣುಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹೆಣ್ಣು ಮಗುವಿನ ಶೋಷಣೆ ತಡೆ ಕುರಿತು ಕಾನೂನಾತ್ಮಕ ರಕ್ಷಣೆ ಸಿಕ್ಕಿದೆ. ಹಲವಾರು ಸೌಲಭ್ಯಗಳನ್ನು ಸರಕಾರ ನೀಡಿದೆ. ಹೆಣ್ಣು ಮಗುವಿನ ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧವೆನಿಸಿಕೊಂಡಿದೆ. ಸಾಮಾನ್ಯವಾಗಿ ಹೆಣ್ಣು ಮಗುವಿನ ರಕ್ಷಣೆಗೆ ಸಿಗಬೇಕಾದ ಎಲ್ಲ ರೀತಿಯ ಭದ್ರತೆ ಸಿಗುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ನಮ್ಮ ಮನೆಗಳಲ್ಲಿ ಯಾವುದೇ ಲಿಂಗತಾರತಮ್ಯ ಇಲ್ಲವೇ?, ದೌರ್ಜನ್ಯಗಳು ನಡೆಯುತ್ತಿಲ್ಲವೇ? ಎಂದು ಪ್ರಶ್ನಿಸಿಕೊಂಡರೆ, ಖಂಡಿತಾ ಇದೆ ಎನ್ನುತ್ತವೆ ಹಲವಾರು ಅಂಕಿಅಂಶಗಳು. ನಮ್ಮ ಹೆಣ್ಣುಮಕ್ಕಳು ಎಲ್ಲ ರೀತಿಯಲ್ಲೂ ಸುರಕ್ಷಿತರಾಗಿದ್ದಾರೆ ಎನ್ನುವ ಕಾಲಮಾನ ಬರಬೇಕಾದರೆ ಇನ್ನೆಷ್ಟು ವರ್ಷಗಳು ಬೇಕೋ ಎನ್ನುವ ಆತಂಕವೂ ಎದುರಾಗುತ್ತದೆ.
Related Articles
Advertisement
ಮನೆಯಿಂದಲೇ ಬದಲಾಗಲಿ ಮನಃಸ್ಥಿತಿ: ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾನೂನಿಗಾಗಿಯೋ ಸಾಮಾಜಿಕ ಬದಲಾವಣೆಗಾಗಿಯೋ ಕಾಯುವು ದರಲ್ಲಿ ಅರ್ಥವಿಲ್ಲ. ಮನೆಗಳಲ್ಲೇ ಅವರಿಗೊಂದು ಭದ್ರತೆ, ಗಂಡು ಮತ್ತು ಹೆಣ್ಣುಮಗುವಿನ ಪಾಲನೆ, ಪೋಷಣೆ, ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಮಾಡದಿರುವುದು. ಮುಖ್ಯವಾಗಿ ಆಕೆಗೆ ಅಶಕ್ತೆ ಎನ್ನುವ ಮನಃಸ್ಥಿತಿಯನ್ನು ಉಣಬಡಿಸದಿರುವುದೇ ಅವಳನ್ನು ಸಶಕ್ತಳನ್ನಾಗಿಸುವ ವಿಧಾನ. ಸಮಸ್ಯೆಗಳು, ಶೋಷಣೆ ಎದುರಿಸಬೇಕಾಗಿ ಬಂದಾಗ ಅದನ್ನು ದಿಟ್ಟವಾಗಿ ಎದುರಿಸಲು ತಯಾರು ಮಾಡುವುದು ಅತ್ಯಂತ ಆವಶ್ಯಕ.
ಅವಳ ದೈಹಿಕ ಸಂರಚನೆಯ ನೆಪದಲ್ಲಿ ಹೆಣ್ಣು ಅಶಕ್ತೆ ಎಂದು ಬಹಳ ಹಿಂದೆಯೇ ವ್ಯಾಖ್ಯಾನಿಸಲಾಗಿತ್ತು. ಆದರೆ ಇಂದಿಗೂ ಈ ವ್ಯಾಖ್ಯಾನದ ಬಳಕೆ ಅವಳ ಇಡೀ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಿರುವುದಂತೂ ನಿಜ. ಹೆಣ್ಣನ್ನು ಅಶಕ್ತೆ ಎಂದು ಪರಿಗಣಿಸುವ ಮೊದಲು ನಮ್ಮ ಮನೆಯಲ್ಲಿಯೇ ಇರುವ ಹೆಣ್ಣುಮಕ್ಕಳ ಮಾನಸಿಕ ಸದೃಢತೆಯನ್ನು, ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ಲೀಲಾಜಾಲವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಗಮನಿಸಿದರೆ ಇಂಥದ್ದೊಂದು ವ್ಯಾಖ್ಯಾನ ಅಪ್ರಸ್ತುತ ಎನಿಸುತ್ತದೆ. ಎಲ್ಲವೂ ಸ್ಮಾರ್ಟ್ ಎನ್ನುವ ಈ ಕಾಲಘಟ್ಟದಲ್ಲಂತೂ ದೈಹಿಕ ಶಕ್ತಿಯ ಆಧಾರದಲ್ಲಿ ವ್ಯಕ್ತಿಯ ಸಾಮರ್ಥ್ಯವನ್ನು ಅಳೆಯು ವುದು ಎಲ್ಲ ಸಂದರ್ಭದಲ್ಲಿಯೂ ಸರಿಯಲ್ಲ.ಇಂದಿನ ಕಾಲಮಾನಕ್ಕೆ ಬೇಕಾಗಿರುವುದು ಸಮಯ, ಸಂದರ್ಭಕ್ಕೆ ತಕ್ಕುದಾಗಿ ತಾರ್ಕಿಕ ನಿರ್ಧಾರಗಳನ್ನು ತಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯೆಗಳಿಗೆ ಕ್ಷಣ ದಲ್ಲಿ ಪರಿಹಾರ ಕಂಡುಕೊಳ್ಳುವ ಬುದ್ಧಿವಂತಿಕೆ, ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ನಿಭಾ ಯಿಸುವ ಚತುರತೆ, ಕೆಲಸದಲ್ಲಿನ ಜಾಣ್ಮೆ ಮತ್ತು ಅಚ್ಚುಕಟ್ಟುತನ ಜತೆಗೆ ತಮ್ಮ ಸುತ್ತಲಿನ ಜನರೊಂದಿಗಿನ ಸ್ನೇಹಪರ ನಡವಳಿಕೆ. ಬಹುಶಃ ಈ ಎಲ್ಲ ಗುಣಗಳು ಸ್ವಾಭಾವಿಕವಾಗಿಯೇ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಕಂಡುಬರುವ ಕಾರಣ ಹೆಣ್ಣನ್ನು ಸಶಕ್ತೆ ಎನ್ನುವುದೇ ಸರಿ. ಹಾಗಾಗಿ ಪ್ರಸ್ತುತ ಬೇಕಾಗಿರುವುದು ಅವಳ ಸಾಮರ್ಥ್ಯಕ್ಕೆ ಸರಿಯಾದ ಅವಕಾಶಗಳನ್ನು ನೀಡುವುದು. ದೈಹಿಕ ಶಕ್ತಿಯ ಆಧಾರದಲ್ಲಿಯೇ ಅವಳ ಸಾಮರ್ಥ್ಯವನ್ನು ಅಳೆಯ ದಿರುವುದು. ಮುಖ್ಯವಾಗಿ ಜೀವಕ್ಕೆ ಮತ್ತು ಜೀವನಕ್ಕೆ ಬೇಕಾಗಿರುವ ಹೆಣ್ಣು ಜೀವವನ್ನು ಗೌರವದಿಂದ ಕಾಣುವುದು. – ಗೀತಾ ವಸಂತ್ ಇಜಿಮಾನ್, ಉಜಿರೆ