ಧಾರವಾಡ : ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬದುಕಿಗೆ ಉತ್ತಮ ಸಂಸ್ಕಾರ ನೀಡುವ ಕ ಅಂಶಗಳನ್ನು ಒಳಗೊಂಡ ಸಾವಿತ್ರಿಬಾಯಿ ಫುಲೆ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರಕಾರ ತೆರಿಗೆ ವಿನಾಯಿತಿ ನೀಡಬೇಕು ಎಂದು ಹಿರಿಯ ನಟಿ, ಬಿಜೆಪಿ ನಾಯಕಿ ತಾರಾ ಅನುರಾಧಾ ಮನವಿ ಮಾಡಿದ್ದಾರೆ.
ನಗರದ ಸರ್ಕಿಟ್ ಹೌಸ್ ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರಕಾರಗಳು ಕಾಲಕಾಲಕ್ಕೆ ಕನ್ನಡ ಚಿತ್ರರಂಗಕ್ಕೆ ಬೆಂಬಲ ನೀಡುತ್ತ ಬಂದಿವೆ. ಸರಕಾರ ಚಾರ್ಲಿ ಸಿನೇಮಾಕ್ಕೆ ನೀಡಿದಂತೆ ಸಾವಿತ್ರಿಬಾಯಿ ಫುಲೆ ಚಿತ್ರಕ್ಕೂ ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಅದಕ್ಕೆ ಅವರು ಸ್ಪಂದಿಸುವ ವಿಶ್ವಾಸ ಇದೆ ಎಂದರು.
ರಾಷ್ಟ್ರದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಅವರ ಜೀವನಚರಿತ್ರೆ ಆಧರಿಸಿ ಈ ಚಿತ್ರ ಸಿದ್ಧಗೊಂಡಿದೆ. ಪತಿಯಿಂದ ಶಿಕ್ಷಣ ಪಡೆದು ಒಬ್ಬ ಉತ್ತಮ ಶಿಕ್ಷಕಿಯಾಗಿ, ಸಮರ್ಥ ಹೆಣ್ಣುಮಗಳಾಗಿ ಫುಲೆ ಅವರು ಮಾದರಿ ಆಗಿದ್ದಾರೆ. ಅವರು ಹೇಗೆ ಸಾಧನೆಯ ಗೆರೆ ಮುಟ್ಟಿದರು ಎಂಬುದನ್ನು ಚಲನಚಿತ್ರ ಮೂಲಕ ತಿಳಿಸಲಾಗಿದೆ. ಇದೊಂದು ಅಪರೂಪದ ಚಲನಚಿತ್ರವಾಗಿದೆ ಎಂದು ತಾರಾ ಹೇಳಿದರು.
ಚಿತ್ರ ನಿರ್ದೇಶಕ ವಿಶಾಲರಾಜ್ ಮಾತನಾಡಿ, ಇಂತಹ ಚಿತ್ರಗಳ ನಿರ್ಮಾಣವೇ ಒಂದು ಸವಾಲು. 2018ರಲ್ಲಿ ಸಾವಿತ್ರಿಬಾಯಿ ಫುಲೆ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳೇ ಬಂದ್ ಆದವು. ಹೀಗಾಗಿ ಜು. 31ರಂದು ಚಿತ್ರವನ್ನು ರಾಜ್ಯಾದ್ಯಂತ ಪುನಃ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಚಿತ್ರ ನಿರ್ಮಾಪಕ ಬಸವರಾಜ ಭೂತಾಳಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಚಿತ್ರವನ್ನು ಮರಾಠಿ, ಹಿಂದಿ ಹಾಗೂ ತೆಲಗು ಭಾಷೆಯಲ್ಲಿ ಡಬ್ಬಿಂಗ್ ಮಾಡಿಕೊಡುವಂತೆ ಬೇಡಿಕೆ ಬಂದಿದೆ. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಜಯನಗರ ಜಿಲ್ಲೆಯ ಶಿಕ್ಷಕರಿಗೆ ಈ ಚಿತ್ರವನ್ನು ಉಚಿತವಾಗಿ ವಿಕ್ಷಿಸಲು ಸಚಿವ ಆನಂದ್ ಸಿಂಗ್ ವ್ಯವಸ್ಥೆ ಮಾಡಿದ್ದಾರೆ ಎಂದರು.
ಹು-ಧಾ ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಶಿಕ್ಷಕರು, ಬಿಇಡಿ ವಿದ್ಯಾರ್ಥಿಗಳು ಈ ಚಿತ್ರವನ್ನು ಕಡ್ಡಾಯವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿದೆ. ಅದೇ ರೀತಿ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಯವರಿಗೂ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ. ಲತಾ. ಎಸ್. ಮುಳ್ಳೂರ ಮಾತನಾಡಿ ನಮ್ಮ ಸಂಘಟನೆ ಹೆಸರನ್ನೆ ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನಲ್ಲಿದೆ. ಅವರ ಕೊಡುಗೆ ಎಲ್ಲರಿಗೂ ತಿಳಿಯಲು ಈ ಚಲನಚಿತ್ರ ನೋಡುವುದು ಅಗತ್ಯ.ಇದಕ್ಕೆ ಎಲ್ಲರೂ ಬೆನ್ನೆಲುಬಾಗಿ ನಿಂತು ಚಿತ್ರ ಪ್ರೋತ್ಸಾಹಿಸಬೇಕು ಎಂದರು.