ರಾಮನಗರ: ತಾಲೂಕಿನ ಮೆಳೇಹಳ್ಳಿ ಗ್ರಾಮದಲ್ಲಿ ರೈತ ಮಹಿಳೆಗೆ ಸೇರಿದ ಕೃಷಿ ಭೂಮಿಯನ್ನು ಸ್ಮಶಾನಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ತಾಲೂಕು ಮತ್ತು ಜಿಲ್ಲಾಡಳಿತದ ಉದ್ದೇಶಕ್ಕೆ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಸಾರ್ವಜನಿಕ ಸ್ಮಶಾನಕ್ಕಾಗಿ ಸರ್ಕಾರಿ ಗೋಮಾಳದ ಜಾಗವನ್ನು ಗುರುತಿಸು ವಂತೆ ಅವರು ಮನವಿ ಮಾಡಿದ್ದಾರೆ.
ಭೂ ಸ್ವಾಧೀನಕ್ಕೆ ಸಂಚು
ಈ ಸಂಬಂಧ ಸುದ್ದಿಗಾರರ ಬಳಿ ಮಾತನಾಡಿದ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವ ಕುಮಾರ್, ಮೆಳೇಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 257ರಲ್ಲಿ ಸಾಕಮ್ಮ ಎಂಬ ರೈತ ಮಹಿಳೆಯ ಹೆಸರಿನಲ್ಲಿ ತುಂಡು ಕೃಷಿ ಭೂಮಿಯಿದೆ. ಇಲ್ಲಿ 60 ವರ್ಷದ ಮಾವಿನ ಮರಗಳು ಇವೆ. ಸ್ಮಶಾನದ ನೆಪವೊಡ್ಡಿ ವಶ ಪಡಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಮೆಳೇಹಳ್ಳಿ ಗ್ರಾಮದ ಸುತ್ತಮುತ್ತ ಬೇಕಾ ದಷ್ಟು ಗೋಮಾಳ ಇದೆ. ಅದನ್ನು ಸರ್ವೆ ಮಾಡಿ ಸ್ಮಶಾನಕ್ಕೆ ವಿಶಾಲವಾದ ಜಾಗವನ್ನು ಗೊತ್ತು ಪಡಿಸಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ತಮ್ಮ ಸಂಘಟನೆಯ ಮನವಿಗೆ ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ನೊಂದ ಮಹಿಳೆ ಸಾಕಮ್ಮ, ಸಂಘಟನೆ ಮುಖಂಡರಾದ ಗುರುವಯ್ಯ, ನಂಜುಂಡಯ್ಯ, ಹೆಜ್ಜಾಲಮೂರ್ತಿ, ಎಸ್.ಎಂ.ದೇವರಾಜು, ನರಸಿಂಹಮೂರ್ತಿ, ಮೂಡಲಗಿರಿ, ಕುಮಾರಿ, ಕಿರಣ್, ಮುದ್ದಯ್ಯ, ಶಿವಸ್ವಾಮಿ ಮತ್ತಿತರರು ಹಾಜರಿದ್ದರು.