ಬೆಂಗಳೂರು: ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಸವಲತ್ತು ನೀಡುವುದನ್ನು ತಪ್ಪಿಸಲು ನಡೆಯುತ್ತಿರುವ ಹುನ್ನಾರವನ್ನು ಖಂಡಿಸಿ ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೇಡ ಜಂಗಮ ಸಮುದಾಯ ವೀರಶೈವ ಲಿಂಗಾಯತದ ಒಂದು ಭಾಗವಾಗಿದೆ. ಹಿಂದಿನಿಂದಲೂ ಬೇಡ ಜಂಗಮ ಸಮುದಾಯವನ್ನು ಪರಿಶಿಷ್ಟ ಜಾತಿ ಅಡಿಯಲ್ಲಿ ಪರಿಗಣಿಸಲಾಗುತ್ತಿದ್ದು, ಅದಕ್ಕೆ ತಕ್ಕಂತೆ ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇಡ ಜಂಗಮ ಸಮುದಾಯದವರನ್ನು ಪರಿಶಿಷ್ಟ ವರ್ಗ ಅಥವಾ ಮೇಲ್ವರ್ಗದವರೆಂದು ಪರಿಗಣಿಸಿ ಪರಿಶಿಷ್ಟ ಜಾತಿ ಅಡಿಯಲ್ಲಿ ನೀಡಲಾಗುವ ಸವಲತ್ತುಗಳನ್ನು ತಡೆ ಹಿಡಿಯಲಾಗುತ್ತಿದೆ. ಇದು ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು. ಜತೆಗೆ ಬೇಡಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಎಂ ಆಗಮನಕ್ಕೆ ಪಟ್ಟು: ಪ್ರತಿಭಟನೆಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಬೇಡ ಜಂಗಮ ಸಮುದಾಯದವರು ಆಗಮಿಸಿದ್ದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ 3.30ರವರೆಗೆ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಲಾಯಿತು. ಸಿಎಂ ಬರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಸ್ಥಳಕ್ಕಾಗಮಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಸ್ವೀಕರಿಸಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಗೆ ರಾಜ್ಯದ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿದ್ದರು. 40ಕ್ಕೂ ಹೆಚ್ಚಿನ ಮಠಾಧೀಶರು ಭಾಗಿಯಾಗಿ ಬೇಡಜಂಗಮರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿದರು. ವಾಹನ ತಡೆದಿದ್ದಕ್ಕೆ ಆಕ್ರೋಶ, ಸಂಚಾರ ದಟ್ಟಣೆ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಪ್ರತಿಭಟನೆಗೆ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವಾಹನಗಳನ್ನು ಪೊಲೀಸರು ನೆಲಮಂಗಲ ಸೇರಿ ಇನ್ನಿತರ ಕಡೆಗಳಲ್ಲಿ ತಡೆದರು. ಇದರಿಂದ ಆಕ್ರೋಶಗೊಂಡ ಸ್ವಾತಂತ್ರ್ಯ ಉದ್ಯಾನದಲ್ಲಿದ್ದ ಪ್ರತಿಭಟನಕಾರರು ವಾಹನಗಳನ್ನು ಕೂಡಲೆ ಬಿಡಬೇಕು. ನಮ್ಮವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿಗಳ ಪರವಾಗಿ ಪ್ರತಿ ಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ್ದೇನೆ. ಶುಕ್ರವಾರ ಸಂಜೆಯೊಳಗೆ ಬೇಡ ಜಂಗಮ ಸಮುದಾಯದ ಬೇಡಿಕೆ ಈಡೇರಿಕೆ ಕುರಿತು ಆದೇಶಿಸಲಾಗುವುದು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಆದೇಶಿಸಲಾಗುತ್ತದೆ. ಅದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಲಾಗುತ್ತದೆ.
● ಕೋಟ ಶ್ರೀನಿವಾಸ ಪೂಜಾರಿ,
ಸಮಾಜ ಕಲ್ಯಾಣ ಇಲಾಖೆ ಸಚಿವ
ಬೇಡಜಂಗಮ ಸಮುದಾಯಕ್ಕೆ ಸಿಗುತ್ತಿರುವ ಸವಲತ್ತುಗಳನ್ನು ತಡೆಯಲು ಹುನ್ನಾರ ನಡೆಸಲಾಗಿದೆ. ಅದನ್ನು ನಿವಾರಿಸಲು ಸರ್ಕಾರ ಭರವಸೆ ನೀಡಿದೆ. ಆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದೆ. ಒಂದು ವೇಳೆ ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು.
●ಬಿ.ಡಿ.ಹಿರೇಮಠ, ಅಖಿಲ ಕರ್ನಾಟಕ
ಬೇಡಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ