ಹುಬ್ಬಳ್ಳಿ: ರೈತರ ವಿಚಾರದಲ್ಲಿ ಕೇವಲ ಭಾಷಣ- ಹೇಳಿಕೆಗಳಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಕನಿಷ್ಠ ಬೆಂಬಲ ಬೆಲೆ(ಎಎಸ್‌ಪಿ)ಗೆ ಪ್ರಬಲ ಕಾಯ್ದೆ ರಚಿಸುವ ಮೂಲಕ ಕಾನೂನು ಬಲ ನೀಡಲು ಮುಂದಾಗಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಪಿ.ಎಚ್.ನೀರಲಕೇರಿ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರಕಾರ ಎಂಎಸ್‌ಪಿ ಘೋಷಣೆ ಮಾಡುತ್ತದೆ. ಆದರೆ ಮಾರುಕಟ್ಟೆಗಳಲ್ಲಿ ಎಂಎಸ್‌ಪಿಗಿಂತ ಕಡಿಮೆ ದರಕ್ಕೆ ಕೃಷಿ ಉತ್ಪನ್ನಗಳ ಖರೀದಿ ಮಾಡಲಾಗುತ್ತಿದ್ದರೂ, ಅದರ ವಿರುದ್ಧ ಯಾವುದೇ ಕ್ರಮ ಇಲ್ಲವಾಗಿದೆ. ಇದಕ್ಕೆ ಎಂಎಸ್‌ಪಿ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಇಲ್ಲವಾಗಿದೆ. ಎಂಎಸ್‌ಪಿ ದರ ಹೆಚ್ಚಳ, ರೈತರ ಬಗ್ಗೆ ನಾವು ದೊಡ್ಡ ಕಾಳಜಿ ಹೊಂದಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುವ ಬಿಜೆಪಿಯವರು ಕಾಳಜಿ ಇದ್ದರೆ ಮೊದಲ ಎಂಎಸ್‌ಪಿಗೆ ಕಾನೂನು ಬಲ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಕೃಷಿ ಸೇರಿದಂತೆ ಮೂರು ಮಾರಕ ಕಾಯ್ದೆಗಳನ್ನು ಸಂಸತ್ತುನಲ್ಲಿ ಯಾವುದೇ ಚರ್ಚೆ ಇಲ್ಲದೆ ಜಾರಿಗೊಳಿಸಿದ ಕೇಂದ್ರದ ವಿರುದ್ಧ, ರೈತರು ಒಂದು ವರ್ಷದವರೆಗೆ ನಿರಂತರವಾಗಿ ಹೋರಾಟದ ಫಲವಾಗಿ ಇದೀಗ ಕೇಂದ್ರ ಸರಕಾರ ಮೂರು ಕಾಯ್ದೆಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿದೆ. ಅದು ಕೂಡ ಕನಿಷ್ಠ ಚರ್ಚೆ ಇಲ್ಲದೆಯೇ ರದ್ದುಪಡಿಸಿದೆ ಎಂದರು.
ರಾಜ್ಯದಲ್ಲಿನ ಬಿಜೆಪಿ ಸರಕಾರದಲ್ಲಿ ಶೇ.40 ಕಮೀಷನ್ ನೀಡಬೇಕಾಗಿದೆ ಎಂದು ಪ್ರಧಾನಿ ಕಚೇರಿಗೆ ಗುತ್ತಿಗೆದಾರರು ಪತ್ರ ಬರೆದರೂ ಇದುವರೆಗೂ ಪ್ರಧಾನಿ ಅವರಿಂದ ಒಂದೇ ಒಂದು ಹೇಳಿಕೆ ಹೊರಬಂದಿಲ್ಲ. ಬಿಜೆಪಿ ಸರಕಾರ ಸಾವಿರಾರು ಕೋಟಿ ರೂ. ಯೋಜನೆ ಜಾರಿಗೊಳಿಸಿದ್ದಾಗಿ ಹೇಳಿಕೊಳ್ಳುತ್ತಿದೆ.
ಯಾವುದೇ ಕಾಮಗಾರಿಗೆ ಇ-ಟೆಂಡರ್ ಕರೆಯದೆ ಪಾರದರ್ಶಕ ಕಾಯ್ದೆ ಉಲ್ಲಂಘಿಸಲಾಗಿದೆ. ರಾಜ್ಯದಲ್ಲಿ ಶಾಸಕರಿಗೆ ಸಿಆರ್‌ಇ ಅನುದಾನ ಬಿಟ್ಟರೆ ಬೇರೆ ಹಣ ಬರುತ್ತಿಲ್ಲ. ಒಟ್ಟಾರೆ ಆಡಳಿತ ಯಂತ್ರವೇ ಕುಸಿದಿದೆ ಎಂದು ಆರೋಪಿಸಿದರು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತುಗೆ ನಡೆಯುತ್ತಿರುವ ಚುನಾವಣೆಗೆ ಅವಿಭಜಿತ ಧಾರವಾಡ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ಅವರು ಸ್ಪರ್ಧಿಸಿದ್ದು, ಒಬ್ಬ ಉತ್ತಮ ಸಂಸದೀಯ ಪಟು ನಮ್ಮ ಪ್ರತಿನಿಧಿ ಆಗುತ್ತಿರುವುದು ಸಂತಸ ತರಿಸಿದೆ. ಪ್ರಥಮ ಪ್ರಾಶಸ್ತ್ಯ ಮತಗಳಲ್ಲಿ ಅವರು ಗೆಲ್ಲುವುದು ಖಚಿತ ಎಂದರು.
ಇದೇ ಸಂದರ್ಭದಲ್ಲಿ ಸಲೀಂ ಅಹ್ಮದ್ ಅವರು ನಡೆದು ಬಂದ ದಾರಿ ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ಮಹಾರಾಷ್ಟ್ರದ ಮಾಜಿ ಸಚಿವ ಹನೀಸ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಅಲ್ತಾಫ್‌ಹಳ್ಳೂರ, ಸದಾನಂದ ಡಂಗನವರ, ದಾನಪ್ಪ ಕಬ್ಬೇರ, ಸತೀಶ ಮೆಹರವಾಡೆ ಇನ್ನಿತರರಿದ್ದರು.