ಹುಬ್ಬಳ್ಳಿ: ಭಾರತ ಕೃಷಿ ಪ್ರಧಾನ ದೇಶವಾದರೂ ಇಂದು ಸಿಮೆಂಟ್ ಪ್ರಧಾನವಾಗುತ್ತಿದೆ. ರಾಜಕಾರಣಿಗಳು ಸೇರಿದಂತೆ ಎಲ್ಲರೂ ಕೃಷಿಗೆ ಹೆಚ್ಚಿನ ಮಹತ್ವ ಕೊಡಬೇಕಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಇಂದಿರಾ ಗಾಜಿನ ಮನೆ ಬಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಉಡುಪಿಯ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಡುಪಿ ಕೇದಾರ ಕಜೆ ಅಕ್ಕಿ ಮಾರುಕಟ್ಟೆಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಯುವ ಜನಾಂಗದಲ್ಲಿರುವ ಕೃಷಿ ಬಗ್ಗೆಯಿರುವ ಅಸಡ್ಡೆ ಭಾವನೆ ಹೋಗಲಾಡಿಸಬೇಕಿದೆ ಎಂದು ಹೇಳಿದರು.
ರಾಜಕಾರಣಿಗಳ ಬಗ್ಗೆ ಹಲವರು ಟೀಕೆ-ಟಿಪ್ಪಣಿ ಮಾಡುವುದು ಹೆಚ್ಚು. ಬೆರಳೆಣಿಕೆಯಷ್ಟು ಜನರು ಉತ್ತಮ ಕೆಲಸ ಮಾಡುತ್ತಾರೆ. ಅದು ಹೆಚ್ಚು ಬೆಳಕಿಗೆ ಬರಲ್ಲ. ಶಾಸಕ ರಘುಪತಿ ಭಟ್ ಅವರು ಉಡುಪಿ ಜಿಲ್ಲೆಯಲ್ಲಿ 1500 ಎಕರೆ ಹಡಿಲು ಭೂಮಿ ಹದ ಮಾಡಿ ಆರೋಗ್ಯಕರವಾದ ಸಾವಯವ ಕಜೆ ಅಕ್ಕಿ (ಕುಚಲಕ್ಕಿ) ಬೆಳೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ನಾನು 50 ಎಕರೆ ಪ್ರದೇಶದಲ್ಲಿ ಎಲ್ಲ ಬಗೆಯ ಕೃಷಿ ಪದ್ಧತಿ ಮಾಡುತ್ತಿದ್ದೇನೆ. ಆದರೆ ರಘುಪತಿ ಅವರು ರಾಜ್ಯದ ಎಲ್ಲ ಜನರಿಗೆ ಬೇಕಾದ ಶ್ರೇಷ್ಠ ಕೆಲಸ ಮಾಡಿದ್ದಾರೆ ಎಂದರು.
ಕೇದಾರ ಕಜೆ ಅಕ್ಕಿ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ದೇಶದಲ್ಲಿ ಬಹುತೇಕರು ಕೃಷಿ ಬೇಡ. ಚಿಕ್ಕದಾದರೂ ನೌಕರಿ ದೊರೆತರೆ ಸಾಕೆಂಬ ಭಾವನೆ ಹೊಂದಿದ್ದಾರೆ. ಆದರೆ ಶಾಸಕ ರಘುಪತಿ ಭಟ್ ಅವರು ಹಡಿಲು ಭೂಮಿಯಲ್ಲಿ ಸಾಮೂಹಿಕ ಕೃಷಿಗೆ ಒತ್ತು ಕೊಡುವ ಮುಖಾಂತರ ರಚನಾತ್ಮಕವಾದ ಸಾಮಾಜಿಕ ಮಾದರಿ ಕೃಷಿ ಪದ್ಧತಿ ಕೆಲಸ ಮಾಡಿದ್ದಾರೆ. ಕೃಷಿಗೆ ಒಳ್ಳೆಯ ರೀತಿಯ ನೆರವು ಮಾಡಿದ್ದಾರೆ. ಆ ಮೂಲಕ ಆದರ್ಶ ಶಾಸಕರಾಗಿದ್ದಾರೆ. ಇದು ಉಡುಪಿ ಜಿಲ್ಲೆಗೆ ಸೀಮಿತವಾಗದೆ ರಾಜ್ಯದ ಎಲ್ಲ ಭಾಗಕ್ಕೆ ವ್ಯಾಪಿಸಬೇಕಿದೆ ಎಂದರು.
ಸರಕಾರ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ)ಯನ್ನು ಸರಿಯಾದ ಸಮಯಕ್ಕೆ ಘೋಷಣೆ ಮಾಡಿದಾಗ ಮಾತ್ರ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲು ಸಾಧ್ಯ. ಅಂದಾಗ ಅವರಿಗೆ ಅನುಕೂಲವಾಗುತ್ತದೆ ಎಂದರು.
ಕೇದಾರೋತ್ಥಾನ ಟ್ರಸ್ಟ್‌ನ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಾತನಾಡಿ, 1500 ಎಕರೆ ಭೂಮಿಯಲ್ಲಿ ಕೃಷಿ ಕ್ರಾಂತಿ ಮಾಡಲಾಯಿತು. ಅದಕ್ಕಾಗಿ 4 ಕೋಟಿ ರೂ. ಖರ್ಚು ಮಾಡಲಾಯಿತು. 1ಕೋಟಿ ರೂ. ಜನರಿಂದ ಸ್ವಯಂ ಆಗಿ ಡೊನೇಷನ್ ಬಂತು. ಕಳೆನಾಶಕ, ಕೀಟನಾಶಕ ಬಳಸದೆ ಸಾವಯವ ಕಜೆ ಅಕ್ಕಿ ಬೆಳೆಯಲಾಯಿತು. 800 ಟನ್ ಫಸಲು ಬಂದಿದೆ. ಮುಂದಿನ ವರ್ಷ ಅಮೆಜಾನ್, μÉಪ್ ಕಾರ್ಟ್‌ನಲ್ಲಿ ಕಜೆ ಅಕ್ಕಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದರು.
ಸುಭಾಷಚಂದ್ರ ಶೆಟ್ಟಿ, ಶ್ರೀಕಾಂತ ಕೆಮೂ¤ರ, ವಿಜಯ ಪೂಜಾರ, ಸುಗ್ಗಿ ಸುಧಾಕರ ಶೆಟ್ಟಿ, ರಮೇಶ ಶೆಟ್ಟಿ, ಸತೀಶಚಂದ್ರ ಶೆಟ್ಟಿ ಮೊದಲಾದವರಿದ್ದರು. ಚರಣ ಶೆಟ್ಟಿ ಪ್ರಾರ್ಥಿಸಿದರು. ಮಹೇಶ ಶೆಟ್ಟಿ ಸ್ವಾಗತಿಸಿದರು.