ಬೆಂಗಳೂರು: ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದವರಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಸೋಮವಾರ ಅಚ್ಚರಿ ಕಾದಿತ್ತು! ಕಾನೂನು ಉಲ್ಲಂ ಸಿದ ತಪ್ಪಿಗೆ ಬೈಕ್ ಸವಾರರ ಬಳಿ 100 ರೂ. ದಂಡ ಪಡೆದರೂ ಐಎಸ್‌ಐ ದೃಢೀಕೃತ ಹೆಲ್ಮೆಟ್‌ಅನ್ನು ಉಚಿತವಾಗಿ ನೀಡಿದ ಪೊಲೀಸರು ಹೆಲ್ಮೆಟ್ ಧರಿಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಿದರು.
ಈ ಅಭಿಯಾನಕ್ಕೆ ಪೋರ್ಟಿಸ್ ಆಸ್ಪತ್ರೆ ಸಾಥ್ ನೀಡಿತ್ತು. ವಿಶ್ವತಲೆಗಾಯ ದಿನದ ಅಂಗವಾಗಿ ಹೆಲ್ಮೆಟ್ ಧರಿಸಿ ಸುರಕ್ಷಿತ ಪ್ರಯಾಣದ ಅರಿವು ಮೂಡಿಸುವ ಸಲುವಾಗಿ ಪೋರ್ಟಿಸ್ ಆಸ್ಪತ್ರೆ ಉಚಿತವಾಗಿ ಹೆಲ್ಮೆಟ್ ನೀಡುವ ಅಭಿಯಾನ ಹಮ್ಮಿಕೊಂಡಿತ್ತು.
ಇದರ ಅಂಗವಾಗಿ ಕನ್ನಿಂಗ್ ಹ್ಯಾಮ್ ರಸ್ತೆ, ಪೋರ್ಟಿಸ್ ಆಸ್ಪತ್ರೆ ಮುಂಭಾಗ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು, ಹೆಲ್ಮೆಟ್ ಧರಿಸದ ಬೈಕ್, ದ್ವಿಚಕ್ರ ವಾಹನ ಸವಾರರನ್ನು ತಡೆದು ದಂಡ ಕಟ್ಟಿಸಿಕೊಂಡರು. ಜೊತೆಗೆ ಪ್ರಮಾಣೀಕೃತ ಐಎಸ್‌ಐ ಮುದ್ರೆ ಹೊಂದಿದ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿ, ಸಂಚಾರ ನಿಯಮ ಪಾಲಿಸುವಂತೆ ಸಲಹೆ ನೀಡಿದರು.
ಎಎಸ್‌ಐ ಗವಿಸಿದ್ದೇಗೌಡ ನೇತೃತ್ವದಲ್ಲಿ ನಡೆದ ಈ ವಿಶೇಷ ಅಭಿಯಾನದಲ್ಲಿ ಹೆಲ್ಮೆಟ್ ಧರಿಸದೆ ಸಿಕ್ಕಿಬಿದ್ದ ಕೆಲವರು, ದಂಡ ಪಾವತಿಸಿದ ಬಳಿಕ ಮುಜುಗರದ ಭಾವದಿಂದಲೇ ಹೆಲ್ಮೆಟ್ ಸ್ವೀಕರಿಸಿದರು ಅವರಿಗೆ ಪೊಲೀಸರು ಜಾಗೃತಿ ಮೂಡಿಸಿದರು. ಅಭಿಯಾನದ ಅಂಗವಾಗಿ ಕನ್ನಿಂಗ್‌ಹ್ಯಾಮ್ ರಸ್ತೆ, ಬನ್ನೇರುಘಟ್ಟ ರಸ್ತೆಗಳಲ್ಲಿ ಸಂಚಾರ ಪೊಲೀಸರ ಸಹಕಾರದೊಂದಿಗೆ ಸುಮಾರು 200ಕ್ಕೂ ಹೆಚ್ಚು ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
ಗುಲಾಬಿ ಹೂ ನಿಂದ ಉಚಿತ ಹೆಲ್ಮೆಟ್‌ವರೆಗೆ!: ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಅರಿವು ಮೂಡಿಸಲು ಈ ಹಿಂದೆ ಗುಲಾಬಿ, ಲಾಡು ವಿತರಣೆ ಸೇರಿದಂತೆ ಹಲವು ರೀತಿ ಪೊಲೀಸರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಈ ಬಾರಿ ಜಾಗೃತಿ ಕಾಳಜಿಯಿಂದ ಉಚಿತ ಹೆಲ್ಮೆಟ್ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ವಿಶ್ವ ತಲೆ ಅಪಘಾತ ಜಾಗೃತಿ ದಿನ: ಬ್ರೈನ್ ಆಸ್ಪತ್ರೆ ಹಾಗೂ ಗೋಲ್ಡನ್ ಅವರ್ ಸಂಸ್ಥೆ ವಿಶ್ವತಲೆ ಅಪಘಾತ ಜಾಗೃತಿ ದಿನಾಚರಣೆಯ ಅಂಗವಾಗಿ ಮಂಗಳವಾರ ನಗರದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರೈನ್ ಸಂಸ್ಥೆಯ ಸಂಸ್ಥಾಪಕ ಡಾ.ವೆಂಕಟರಮಣ, ರಸ್ತೆ ಅಪಘಾತದಲ್ಲಿ ರಾಜ್ಯವು ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ಸರಾಸರಿ ಇಬ್ಬರು ಸಾವಿಗೀಡಾಗುತ್ತಾರೆ. ಹೀಗಾಗಿ ಜಾಗೃತಿ ಅವಶ್ಯಕ ಎಂದು ಹೇಳಿದರು.