Advertisement

ಭೂಗತ ಪುಟಗಳಲ್ಲಿ ಹುಡುಗಿಯರು

06:00 AM Jun 08, 2018 | |

“ಭೂಗತ ಪುಟಗಳಲ್ಲಿ ಹುಡುಗಿಯರಿದ್ದಾರೆ ಎಚ್ಚರಿಕೆ…’
ಹೀಗೊಂದು ಅಡಿಬರಹ ಮುಸ್ಸಂಜೆ ಮಹೇಶ್‌ ನಿರ್ದೇಶನದ “ಎಂಎಂಸಿಎಚ್‌’ ಚಿತ್ರದಲ್ಲಿದೆ. ಅಲ್ಲಿಗೆ ಇದೊಂದು ನಾಯಕಿಯರ ಸುತ್ತ ತಿರುಗುವ ಕಥೆ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ಆಡಿಯೋ ಸಿಡಿ ಬಿಡುಗಡೆಯೂ ಆಗಿದೆ. ಅಂದು ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಜನಜಾತ್ರೆ ನಡುವೆ ನಡೆಯಿತು. ಪಾಲಿಕೆ ಮೇಯರ್‌ ಸಂಪತ್‌ರಾಜ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗು ಮಂಡಳಿ ಪದಾಧಿಕಾರಿಗಳು, ಚಿತ್ರರಂಗದ ಗಣ್ಯರು ಇತರರು ಆ ಆಡಿಯೋ ಸಿಡಿ ಬಿಡುಗಡೆಗೆ ಸಾಕ್ಷಿಯಾದರು.

Advertisement

ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಮೊದಲನೆಯದು ನಾಲ್ವರು ನಾಯಕಿಯರ ಮೇಲೆ ಸಾಗುವ ಚಿತ್ರ, ಎರಡನೆಯದು ಹಿರಿಯ ಕಲಾವಿದೆಯರ ಮಕ್ಕಳೇ ಇಲ್ಲಿ ನಾಯಕಿಯರು ಎಂಬುದು, ಆ ನಾಯಕಿಯರ ಅಮ್ಮಂದಿರೂ ಇಲ್ಲಿ ನಟಿಸಿದ್ದಾರೆಂಬುದು … ಇನ್ನೂ ಹಲವು ವಿಶೇಷತೆಗಳು ಚಿತ್ರದಲ್ಲಿವೆ. ಅಂದಹಾಗೆ, ಅಂದು ಆ ನಾಲ್ವರು ನಾಯಕಿಯರ ಅಮ್ಮಂದಿರು ವೇದಿಕೆಗೆ ಬಂದು ಒಂದೊಂದು ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದ್ದು ವಿಶೇಷ. ಅಂದು ಹಿರಿಯ ಕಲಾವಿದೆ ಸುಮಿತ್ರ, ವಿನಯಾ ಪ್ರಸಾದ್‌, ಪ್ರಮೀಳಾ ಜೋಷಾಯ್‌, ಸುಧಾ ಬೆಳವಾಡಿ ತಮ್ಮ ಪುತ್ರಿಯರ ಜೊತೆಗೆ ವೇದಿಕೆ ಮೇಲೇರಿ ಒಂದೊಂದು ಹಾಡು ಬಿಡುಗಡೆ ಮಾಡಿದರಲ್ಲದೆ, ಮಕ್ಕಳಿಗೆ ಅವಕಾಶ ಕೊಟ್ಟ ನಿರ್ದೇಶಕ ಮಹೇಶ್‌ ಅವರನ್ನು ಅಭಿನಂದಿಸಿದರು. ಮೇಘನಾ ರಾಜ್‌, ಸಂಯುಕ್ತಾ ಬೆಳವಾಡಿ, ದೀಪ್ತಿ, ಪ್ರಥಮ ಇವರೆಲ್ಲರೂ ತಮ್ಮ ಪಾತ್ರ ಹಾಗೂ ಚಿತ್ರ ಮೂಡಿಬಂದ ಬಗೆ ಹೇಳಿಕೊಂಡರಲ್ಲದೆ, ಇಡೀ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಅವುಗಳನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ಮೂಲಕ ಸಣ್ಣದ್ದೊಂದು ಕುತೂಹಲ ಮೂಡಿಸಿದರು.

ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿರುವ ರಾಗಿಣಿ ಕೂಡ ಮೈಕ್‌ ಹಿಡಿದು ವೇದಿಕೆಗೆ ಬಂದರು. “ನನಗೆ ಈ ಚಿತ್ರ ಹೊಸ ಅನುಭವ ತಂದುಕೊಟ್ಟಿದೆ. ಪ್ರತಿ ಪಾತ್ರಕ್ಕೂ ಇಲ್ಲಿ ಆದ್ಯತೆ ಇದೆ. ನಾನೊಬ್ಬ ತನಿಖಾಧಿಕಾರಿ ಪಾತ್ರ ಮಾಡಿದ್ದೇನೆ’ ಎಂದಷ್ಟೇ ಹೇಳಿ ಸುಮ್ಮನಾದರು.

ಇಷ್ಟಕ್ಕೂ “ಎಂಎಂಸಿಎಚ್‌’ ಅಂದರೇನು? ಅದರ ಅರ್ಥಕ್ಕೆ ಆ ವೇದಿಕೆ ಮೇಲೆ ಕೆಲವರು ವ್ಯಾಖ್ಯಾನ ಮಾಡಿದರಾದರೂ, ಸಿನಿಮಾದಲ್ಲೇ ತಿಳಿದುಕೊಳ್ಳಬೇಕು ಎಂಬುದು ನಿರ್ದೇಶಕ ಮುಸ್ಸಂಜೆ ಮಹೇಶ್‌ ಮಾತು. “ಶೀರ್ಷಿಕೆ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಿನಿಮಾ ನೋಡಿದ ಮೇಲೆ, ತುಂಬಾ ಸರಳ ಎನಿಸುವ ಅರ್ಥವದು. ಆದರೆ, ಸರಳ ಶೀರ್ಷಿಕೆಯಾದರೂ, ಮಜ ಎನಿಸುವ ಸಿನಿಮಾವಿದು. ಇಲ್ಲಿ ನಾಲ್ವರು ನಾಯಕಿಯರಷ್ಟೇ ಮುಖ್ಯ ಅಲ್ಲ, “ಅಸ್ತಿತ್ವ’ ಮೂಲಕ ಹೀರೋ ಆದ ಯುವರಾಜ್‌ ಮತ್ತು “ಸರ್ವಸ್ವ’ ಚಿತ್ರದ ಮೂಲಕ ನಾಯಕರಾದ ರಘು ಭಟ್‌ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಮೈಸೂರಿನ ಪ್ರತಿಷ್ಠಿತ ಕಾಲೇಜ್‌ ಒಂದರಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರ. ನಾನು ಕಾಲೇಜು ಓದುವ ಸಂದರ್ಭದಲ್ಲಿ ನಡೆದಂತಹ ಘಟನೆ ಎನ್ನಬಹುದು. ಆಗ ಅಲ್ಲಿ ನಡೆದ ಆ ಘಟನೆಯ ವಿಷಯ ಎಲ್ಲೂ ಹೊರಬರಲಿಲ್ಲ. ಆಗಿನ ಹಿರಿಯ ಪೊಲೀಸ್‌ ಅಧಿಕಾರಿಗಳು ಸುದ್ದಿ ಹೊರಬರದಂತೆ ನೋಡಿಕೊಂಡಿದ್ದರು. ಆಗ ನಡೆದ ಘಟನೆ ಇಟ್ಟುಕೊಂಡು “ಎಂಎಂಸಿಎಚ್‌’ ಚಿತ್ರ ಮಾಡಿದ್ದೇನೆ’ ಉಳಿದದ್ದು ಚಿತ್ರದಲ್ಲಿ ನೋಡಿ ಎನ್ನುತ್ತಾರೆ ಮಹೇಶ್‌.

ಎಸ್‌.ಪುರುಷೋತ್ತಮ್‌, ಜಾನಕಿರಾಮ್‌, ಅರವಿಂದ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀಧರ್‌ ವಿ. ಸಂಭ್ರಮ್‌ ಸಂಗೀತವಿದೆ. ನಾಗೇಶ್‌ ಆಚಾರ್ಯ ಅವರ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next