Advertisement

ಹುಡುಗಿಯರ ಫೇವರೆಟ್‌ ರಾಜಸ್ಥಾನಿ ಲಾಂಗ್‌ ಸ್ಕರ್ಟ್‌

03:18 PM Aug 10, 2018 | |

ಮೋಡಿ ಮಾಡುವ ಫ್ಯಾಶನ್‌ ಜಗತ್ತು ಕೇವಲ ನೋಡಿ ಖುಷಿ ಪಡುವುದಕ್ಕಷ್ಟೇ ಸೀಮಿತವಾಗಿಲ್ಲ. ಧರಿಸಲೇಬೇಕೆಂಬ ಬಯಕೆಯೂ ಉತ್ಕಟವಾಗಿರುತ್ತದೆ. ಆಧುನಿಕತೆಯ ದಿನಗಳಲ್ಲಿ ಸಾಂಪ್ರದಾಯಿಕವಾಗಿಯೋ, ಪ್ರಾದೇಶಿಕ ಶೈಲಿಯಲ್ಲಿಯೋ ಉಡುಗೆ ತೊಟ್ಟು ಸಂಭ್ರಮಿಸುವ ಕಾಲ ಮರೆಗೆ ಸರಿದಿದೆ. ಜಗದಗಲ ಹಬ್ಬಿರುವ ಫ್ಯಾಶನ್‌ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಬೇಕೆಂಬ ಬಯಕೆ ಪ್ರತಿ ಯುವಕ-ಯುವತಿಯರದ್ದು.

Advertisement

ಸೀರೆಯ ಕಾಲ ಹೋಗಿ ಜೀನ್ಸ್‌, ಶಾರ್ಟ್‌ ಡ್ರೆಸ್‌ ಹೀಗೆ ನಾನಾ ವೈವಿಧ್ಯದ ಉಡುಗೆಗಳನ್ನು ತೊಟ್ಟು ನೋಡಿದ್ದಾಯಿತು. ಇದರಾಚೆಗೂ ಹಲವು ಫ್ಯಾಶನ್‌ ಜಗತ್ತನ್ನು ಕಂಡಿದ್ದೇವೆ. ಅದನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲವನ್ನೂ ಪಟ್ಟಿದ್ದೇವೆ. ಹೊರ ರಾಜ್ಯದ ಸಾಂಪ್ರದಾಯಿಕ ಉಡುಗೆ ನಮಗೆ ಹೊಸದು. ಅಲ್ಲಿನ ಸಾಮಾನ್ಯ ಧಿರಿಸುಗಳು ನಮಗೆ ಫ್ಯಾಶನ್‌. ಅಂತಹದೇ ಫ್ಯಾಶನೇಬಲ್‌ ಧಿರಿಸು ರಾಜಸ್ಥಾನಿ ಲಾಂಗ್‌ ಸ್ಕರ್ಟ್‌.

ಭರ್ಜರಿ ಲಗ್ಗೆ
ನಮ್ಮಲ್ಲೂ ಲಾಂಗ್‌ ಸ್ಕರ್ಟ್‌ ಧರಿಸಿ ಓಡಾಡುವ ಕಾಲವಿತ್ತು. ಆದರದು ಸೀರೆಯನ್ನು ಕತ್ತರಿಸಿ ಹೊಲಿದ ಉದ್ದ ಲಂಗ ರವಿಕೆಯೋ ಅಥವಾ ಪ್ರತ್ಯೇಕ ಬಟ್ಟೆ ಖರೀದಿಸಿ ಹೊಲಿದಂತದ್ದಾಗಿತ್ತು. ಆದರೆ ಇದು ಹಾಗಲ್ಲ. ರಾಜಸ್ಥಾನದ ಸಾಂಪ್ರದಾಯಿಕ ಉಡುಗೆಯಾದ ಲಾಂಗ್‌ ಸ್ಕರ್ಟ್‌ ಕರ್ನಾಟಕದ ಹೆಣ್ಣು ಮಕ್ಕಳ ಫ್ಯಾಶನ್‌ ಲೋಕಕ್ಕೆ ಭರ್ಜರಿಯಾಗಿಯೇ ಲಗ್ಗೆ ಇಟ್ಟಿದೆ. ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ ಧರಿಸುವುದಕ್ಕೂ ಕಂಫರ್ಟ್‌. ಹೆಚ್ಚಾಗಿ ಕಾಟನ್‌ ಬಟ್ಟೆಗಳಿಂದಲೇ ತಯಾರಾದ ಈ ಸ್ಕರ್ಟ್‌ಗಳು ಕಲರ್‌ಫುಲ್‌ ಆಗಿರುತ್ತವೆ. ಅಂದರೆ ಒಂದೇ ಬಟ್ಟೆಯಲ್ಲಿ ನಾನಾ ರೀತಿಯ ಬಣ್ಣಗಳ ಹೂರಣ ಮಾಡಲಾಗುತ್ತದೆ. ಈ ಬಣ್ಣಗಳಲ್ಲಿಯೇ ವಿವಿಧ ಹೂವು, ಎಲೆ, ಬಳ್ಳಿಗಳು, ನವಿಲು ಮುಂತಾದವುಗಳ ಚಿತ್ರವನ್ನು ರಚಿಸಲಾಗುತ್ತದೆ. ಇದು ನೋಡುವುದಕ್ಕೂ ಹೆಚ್ಚು ಆಕರ್ಷಕವಾಗಿದ್ದು, ಕೊಳ್ಳುವ ಮನಸ್ಸಾಗದೆ ಇರದು. ಹಾಗಂತ ಈ ಬಣ್ಣಗಳ ಹೂರಣ ನಶಿಸಿ ಹೋಗುವುದಿಲ್ಲ. ಏಕೆಂದರೆ ಇದು ವಿವಿಧ ಬಣ್ಣಗಳಲ್ಲಿ ಪ್ರಿಂಟೆಡ್‌ ಚಿತ್ರಗಳಾಗಿರುವುದರಿಂದ ದೀರ್ಘ‌ಕಾಲ ಬಾಳಿಕೆಯೂ ಬರುತ್ತದೆ.

ಮಂಗಳೂರಿನಲ್ಲಿ ರಾಜಸ್ಥಾನಿ ಟ್ರೆಂಡ್‌
ಮಂಗಳೂರಿನಲ್ಲಿ ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ ಟ್ರೆಂಡ್‌ ಸೃಷ್ಟಿಸಿದೆ. ಸದ್ಯ ಮಂಗಳೂರು ಬೆಡಗಿಯರ ಧಿರಿಸಿನ ಆಯ್ಕೆಯಲ್ಲಿ ಈ ಮಾದರಿಯ ಸ್ಕರ್ಟ್‌ಗೂ ಸ್ಥಾನವಿದೆ. ಇಲ್ಲಿನ ಮಾಲ್‌ಗ‌ಳು, ಬಟ್ಟೆ ಅಂಗಡಿಯಲ್ಲದೆ, ದೂರದೂರುಗಳಿಂದ ಬಂದು ಬಟ್ಟೆ ಮಾರಾಟದಲ್ಲಿ ತೊಡಗಿರುವವರ ಬಳಿಯಲ್ಲಿಯೂ ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ನ ಸಂಗ್ರಹ ತುಸು ಹೆಚ್ಚೇ ಇದೆ.

ಬೆಲೆ ನೋಡದೆ ಖರೀದಿ
ಈ ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ಗಳು ಜನರನ್ನು ಎಷ್ಟು ಮೋಡಿಗೊಳಪಡಿಸಿವೆಯೆಂದರೆ, ಕೆಲವು ಸ್ಕರ್ಟ್‌ಗಳ ಬೆಲೆ ಸಾವಿರ ರೂ.ಗಳಿಗೂ ಮೇಲೆ ಇರುತ್ತದೆ. ಆದರೆ ಜನ ಬೆಲೆ ನೋಡದೆ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಪ್ಲೈನ್‌ ಲಾಂಗ್‌ ರ್ಟ್ಗಳು ಕಾಟನ್‌ ಬಟ್ಟೆಯಲ್ಲೇ ಸ್ಟಿಚ್‌ ಆಗಿ ಮಾರಾಟಕ್ಕಿದ್ದರೂ, ಜನ ಕಲರ್‌ಫುಲ್‌ ಮತ್ತು ಹೆಚ್ಚು ಬಣ್ಣಗಳನ್ನು ಒಳಗೊಂಡಿರುವ ಸ್ಕರ್ಟ್ಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ ಎನ್ನುವುದು ರಾಜಸ್ಥಾನಿ ವಸ್ತ್ರ ಮೇಳದ ಮಾರಾಟಗಾರರ ಅಭಿಪ್ರಾಯ. ಈಗ ಯುವತಿಯರು ಹೆಚ್ಚು ಇಷ್ಟ ಪಡುವುದು ಲಾಂಗ್‌ ಸ್ಕರ್ಟ್‌ಗಳನ್ನು ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ ಸಹಿತ ಎಲ್ಲ ಮಾದರಿಯ ಸ್ಕರ್ಟ್‌ಗಳಿಗೂ ನಮ್ಮಲ್ಲಿ ಬೇಡಿಕೆ ಇದೆ ಎನ್ನುತ್ತಾರೆ ಸಿಟಿ ಸೆಂಟರ್‌ನ ಸ್ಪಾರ್‌ ಮಳಿಗೆಯ ಸಿಬಂದಿ.

Advertisement

ಎಲ್ಲಿಯ ರಾಜಸ್ಥಾನ; ಎಲ್ಲಿಯ ಮಂಗಳೂರು! ಆದರೆ ಫ್ಯಾಶನ್‌ ಲೋಕದಲ್ಲಿ ಕಿಲೋ ಮೀಟರ್‌ಗಟ್ಟಲೆ ದೂರಕ್ಕೆ ಕ್ರಮಿಸುವ ಪರಿಪಾಠವಿಲ್ಲ. ಎಲ್ಲೋ ಹುಟ್ಟಿದ ಫ್ಯಾಶನ್‌ ದಿನ ಬೆಳಗಾಗುವುದರೊಳಗೆ ಇನ್ನೊಂದು ಊರಿನಲ್ಲಿ ಸದ್ದು ಮಾಡುತ್ತದೆ. ಅಂತೆಯೇ ರಾಜಸ್ಥಾನಿ ಸ್ಕರ್ಟ್‌ ಕೂಡ.

ಯಾವುದೇ ಶರ್ಟ್‌ಗೂ ಓಕೆ
ವಿಶೇಷವೆಂದರೆ ಈ ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ನಲ್ಲಿ ವಿವಿಧ ಬಣ್ಣಗಳಿರುವುದರಿಂದ ಯಾವುದೇ ಬಣ್ಣದ ಟೀಶರ್ಟ್‌ ಅಥವಾ ಜೀನ್ಸ್‌ ಟಾಪ್‌ ಗಳಿಗೂ ಇದು ಆಕರ್ಷಕವಾಗಿ ಕಾಣುತ್ತದೆ. ಹಲವು ಬಣ್ಣಗಳ ಮಿಶ್ರಣವಿರುವುದರಿಂದ ಪ್ಲೈನ್‌ ಟೀ ಶರ್ಟ್‌ ಧರಿಸುವಾಗ ಅಂದವೂ ಹೆಚ್ಚು. ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ ನೊಂದಿಗೆ ಟೀ ಶರ್ಟ್‌ ಧರಿಸಿ ಸ್ಕಾರ್ಪ್‌ ಮಾದರಿಯಲ್ಲಿ ಶಾಲು ಧರಿಸುವುದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. 

ವಸ್ತ್ರ ಮಾರಾಟ ಮೇಳಕ್ಕೂ ಪ್ರತಿಕ್ರಿಯೆ
ವಿಶೇಷವೆಂದರೆ ಮಂಗಳೂರಿನಲ್ಲಿ ರಾಜಸ್ಥಾನಿ ಲಾಂಗ್‌ ಸ್ಕರ್ಟ್‌ಗೆ ಬೇಡಿಕೆ ಹೆಚ್ಚಿದೆ ಎಂಬುದು ಇಲ್ಲಿ ವರ್ಷಕ್ಕೆ ಹಲವು ಬಾರಿ ಆಯೋಜನೆಗೊಳ್ಳುತ್ತಿರುವ ರಾಜಸ್ಥಾನಿ ವಸ್ತ್ರ ಮಾರಾಟ ಮೇಳದಲ್ಲಿ ಮಾರಾಟಗಾರರ ಪ್ರತಿಕ್ರಿಯೆ ಆಗಿದೆ. ಈ ಮೂಲಕ ರಾಜಸ್ಥಾನದ ಈ ವಸ್ತ್ರಗಳು ಮಂಗಳೂರಿಗರನ್ನು ಮೋಡಿ ಮಾಡಿರುವುದಂತೂ ಸುಳ್ಳಲ್ಲ. 

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next