Advertisement

ಹೆಣ್ಮಕ್ಕಳಿಗೆ ಸಿಗುತ್ತಿಲ್ಲ “ಶುಚಿ ಯೋಜನೆ’ಯ ನ್ಯಾಪ್ಕಿನ್‌

12:13 AM Dec 12, 2022 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲಾ- ಕಾಲೇಜುಗಳ ಹದಿಹರೆಯದ ವಿದ್ಯಾರ್ಥಿನಿಯರಿಗೆ “ಶುಚಿ ಯೋಜನೆ’ ಯಡಿ ನೀಡಲಾಗುತ್ತಿರುವ ಸ್ಯಾನಿಟರಿ ನ್ಯಾಪ್ಕಿನ್‌ (ಪ್ಯಾಡ್‌) 1.5 ವರ್ಷದಿಂದ ಸಿಗುತ್ತಿಲ್ಲ. ಟೆಂಡರ್‌ ಅಂತಿಮ ವಾಗದಿರುವುದು ಇದಕ್ಕೆ ಕಾರಣ.

Advertisement

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತವು (ಕೆಎಸ್‌ಎಂಸ್‌ಸಿಎಲ್) ಶುಚಿ ಯೋಜನೆಯಡಿ ನ್ಯಾಪ್ಕಿನ್‌ ಖರೀದಿಸಿ ವಿತರಿಸುವ ಜವಾಬ್ದಾರಿ ಹೊತ್ತಿತ್ತು.

ಟೆಂಡರ್‌ನಲ್ಲಿ ಕಳ್ಳಾಟ?
ನಿಗಮದ ಅಧಿಕಾರಿಗಳು ಪದೇಪದೆ ಟೆಂಡರ್‌ ಕರೆದು “ಸೂಕ್ತ ಬೆಲೆಗೆ ಸಿಕ್ಕಿಲ್ಲ’ ಎಂಬ ನೆಪವೊಡ್ಡಿ ಟೆಂಡರ್‌ ರದ್ದು ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆಯಡಿ ನ್ಯಾಪ್ಕಿನ್‌ ಖರೀದಿಸುವ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಈ ಹಿಂದೆ ಸರಕಾರಿ ಸ್ವಾಮ್ಯದ ಹಿಂದುಸ್ಥಾನ್‌ ಲೈಫ್ ಕೇರ್‌ ಲಿ. ಸಂಸ್ಥೆಯು 5 ವರ್ಷಗಳಿಂದ ಟೆಂಡರ್‌ ಪಡೆದು ಪ್ಯಾಡ್‌ ವಿತರಿಸುತ್ತಿತ್ತು. ಈಗ ಖಾಸಗಿ ಕಂಪೆನಿಗಳಿಗೆ ಟೆಂಡರ್‌ ಕೊಡಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ .

ಬೇರೆ ರಾಜ್ಯಕ್ಕಿಂತ ಹೆಚ್ಚಿನ ದರ
ಮಹಾರಾಷ್ಟ್ರ ಸರಕಾರ ಪ್ರತಿ ಯೂನಿಟ್‌ಗೆ (10 ಪ್ಯಾಡ್‌) 18.9 ರೂ., ಮಧ್ಯಪ್ರದೇಶದ ಸರಕಾರ ಪ್ರತಿ ಯೂನಿಟ್‌ಗೆ 20.82 ರೂ. ನೀಡಿ ಪ್ಯಾಡ್‌ ಖರೀದಿಸುತ್ತಿದೆ. ಮಹಾರಾಷ್ಟ್ರದಲ್ಲಿ ಶ್ರೀರಾಧೆ ಹೈಜೀನ್‌ ಪ್ರಾಡಕ್ಟ್ ಸಂಸ್ಥೆಯು ಪ್ಯಾಡ್‌ ಸರಬರಾಜು ಮಾಡಿದೆ. ಆದರೆ ಕೆಎಸ್‌ಎಂಎಸ್‌ಸಿಎಲ್‌ನಲ್ಲಿ ಇದೇ ಪ್ಯಾಡ್‌ಗೆ ಬೆಂಗಳೂರು ವಿಭಾಗದಲ್ಲಿ 28.70 ರೂ., ಮೈಸೂರು ಮತ್ತು ಕಲಬುರಗಿ ವಿಭಾಗಕ್ಕೆ ತಲಾ 25.50 ರೂ.ದರ ನಮೂದಿಸಿ ಟೆಂಡರ್‌ ಪಡೆಯಲು ಈ ಸಂಸ್ಥೆಯು ಸಿದ್ಧತೆ ನಡೆಸಿತ್ತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇದು ದುಬಾರಿಯಾಗಿದ್ದು, ಸರಕಾರಕ್ಕೆ 10 ಕೋಟಿ ರೂ.ನಷ್ಟ ಉಂಟಾಗಲಿದೆ.

ಈಗಾಗಲೇ 2 ಟೆಂಡರ್‌ಗಳನ್ನು ರದ್ದು ಮಾಡಲಾಗಿದೆ. 3ನೇ ಟೆಂಡರ್‌ನಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗವೆಂದು ವಿಂಗಡಿಸಿ ಪ್ರತ್ಯೇಕ ದರಕ್ಕೆ ಟೆಂಡರ್‌ ನೀಡಲು ಚಿಂತಿಸಿರುವುದು ಅನುಮಾನ ಮೂಡಿಸಿದೆ.

Advertisement

ನಿಗದಿತ ಬೆಲೆಗೆ ಟೆಂಡರ್‌ ಪಡೆದಿಲ್ಲ
2018-19 ಹಾಗೂ 2020-21ರ ಟೆಂಡರ್‌ ಪ್ರಕ್ರಿಯೆಗಳು ಮುಗಿದಿವೆ. ಈಗ 2021-22ನೇ ಸಾಲಿನಲ್ಲಿ ಹಲವು ಬಾರಿ ಟೆಂಡರ್‌ ಪ್ರಕ್ರಿಯೆಗಳು ನಡೆದರೂ ನಾವು ನಿಗದಿಪಡಿಸಿರುವ ದರಕ್ಕೆ ಬಿಡ್‌ ಮಾಡಲಿಲ್ಲ. ಹೀಗಾಗಿ 1 ವರ್ಷಗಳಿಂದ ಪ್ಯಾಡ್‌ ವಿತರಣೆಯಲ್ಲಿ ಅಡಚಣೆ ಉಂಟಾಗಿದೆ. ಈ ಹಿಂದೆ ಟೆಂಡರ್‌ನಲ್ಲಿ ಯೂನಿಟ್‌ ಪ್ಯಾಡ್‌ಗೆ 23 ರೂ. ನಿಗದಿಪಡಿಸಲಾಗಿತ್ತು. ಆದರೆ 2021-22ರಲ್ಲಿ 26 ರೂ.ಗೆ ಏರಿಸಲಾಗಿದೆ. ಈ ಮೊತ್ತಕ್ಕೆ ಟೆಂಡರ್‌ ಪಡೆಯಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈಗ ಅಂತಿಮವಾಗಿ 25 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್‌ಎಂಎಸ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ರಾಜೇಂದ್ರ ಚೋಳನ್‌ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

2021-22ನೇ ಸಾಲಿನ ಟೆಂಡರ್‌ ಪ್ರಕ್ರಿಯೆ ಮುಗಿದ ಬಳಿಕ ಪ್ಯಾಡ್‌ ವಿತರಣೆ ಮುಂದುವರಿಯಲಿದೆ. ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ.
-ಪಿ.ರಾಜೇಂದ್ರ ಚೋಳನ್‌,
ಎಂಡಿ, ಕೆಎಸ್‌ಎಂಎಸ್‌ಸಿಎಲ್‌

Advertisement

Udayavani is now on Telegram. Click here to join our channel and stay updated with the latest news.

Next