“ಮೊದಲು ನಟನಾಗಬೇಕೆಂದು ಇಲ್ಲಿಗೆ ಬಂದೆ. ಅವಕಾಶಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆ. ಒಂದು ಪಾತ್ರ ಕೊಡುತ್ತೇನೆ. ಪಾತ್ರಕ್ಕಾಗಿ ಗಡ್ಡ ಬಿಡುವಂತೆ ದೊಡ್ಡ ನಿರ್ದೇಶಕರೊಬ್ಬರು ಹೇಳಿದ್ದರು. ಅದರಂತೆ ನಾನು ಕೂಡ ಗಡ್ಡ ಬಿಟ್ಟೆ. ಮೂರು ವರ್ಷವಾದರೂ ಆ ಪಾತ್ರ ನನಗೆ ಸಿಗಲೇ ಇಲ್ಲ. ಗಡ್ಡ ಬೆಳೆಯಿತೇ ವಿನಃ ನಾನಂತೂ ಚಿತ್ರರಂಗದಲ್ಲಿ ಬೆಳೆಯಲಿಲ್ಲ. ಕೊನೆಗೆ ನಾನೇ ಒಂದಷ್ಟು ಪ್ರಯತ್ನ ಮಾಡಿ, ಸ್ವಲ್ಪ ಸಮಯ ತೆಗೆದುಕೊಂಡು, ಸ್ನೇಹಿತರ ಜೊತೆಗೆ ಒಂದು ಚಿತ್ರ ಮಾಡುವ ನಿರ್ಧಾರಕ್ಕೆ ಬಂದೆ. ಆಗ ಶುರುವಾಗಿದ್ದೆ ಗಿಣಿ ಹೇಳಿದ ಕಥೆ ಚಿತ್ರ. ಅಂತೂ, ನಾವಂದುಕೊಂಡಂತೆ ಚಿತ್ರ ಮಾಡಿ ಮುಗಿಸಿದ್ದೇವೆ. ಚಿತ್ರ ಬಹುತೇಕ ರೆಡಿಯಾಗಿದ್ದು, ಪ್ರೇಕ್ಷಕರ ಮುಂದೆ ತರೋದಷ್ಟೇ ಬಾಕಿ’ ಎನ್ನುತ್ತ ಮಾತಿಗಿಳಿದವರು ನಟ ಕಂ ನಿರ್ಮಾಪಕ ವಿ. ದೇವರಾಜ್ ಉರೂಫ್ ದೇವ್. ಇವರ ಈ ಮಾತುಗಳಿಗೆ ವೇದಿಕೆ ಮತ್ತು ಅವಕಾಶ ಕಲ್ಪಿಸಿದ್ದು, “ಗಿಣಿ ಹೇಳಿದ ಕಥೆ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಸಮಾರಂಭ.
ಚಿತ್ರರಂಗದಲ್ಲಿ ನಟನಾಗಬೇಕು ಎಂಬ ಕನಸನ್ನು ಹೊತ್ತು ಬಂದ ದೇವ್ ಆ ಕನಸನ್ನು ನನಸು ಮಾಡಿಕೊಳ್ಳಲು ಹತ್ತು ವರ್ಷಗಳ ಕಾಲ ತೆಗೆದಿರಿಸಬೇಕಾಯಿತು. ಇದರ ನಡುವೆಯೇ ಒಂದಷ್ಟು ಹವ್ಯಾಸಿ ರಂಗತಂಡಗಳಲ್ಲಿ ಗುರುತಿಸಿಕೊಂಡು ರಂಗಭೂಮಿಯಲ್ಲಿ ಸಕ್ರಿಯವಾದ ದೇವ್, ಅಲ್ಲಿ ಅಭಿನಯವನ್ನು ಕಲಿತುಕೊಂಡರು. ಜತೆಗೆ ಕಿರುತೆರೆಯ ಕೆಲ ಧಾರಾವಾಹಿಗಳಿಗೆ ಬರಹಗಾರನಾಗಿಯೂ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳನ್ನು ಬೆನ್ನಿಗಿಟ್ಟುಕೊಂಡು ದೇವ್, ಈಗ “ಗಿಣಿ ಹೇಳಿದ ಕಥೆ’ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಚಿತ್ರದಲ್ಲಿ ನಾಯಕ ನಟನಾಗಿಯೂ ಅಭಿನಯಿಸಿದ್ದಾರೆ.
ಇತ್ತೀಚೆಗೆ “ಗಿಣಿ ಹೇಳಿದ ಕಥೆ’ ಚಿತ್ರದ ಹಾಡುಗಳು ಬಿಡುಗಡೆ ಹೊರಬಂದಿದ್ದು, ಈ ವೇಳೆ ಮಾತನಾಡಿದ ದೇವ್ ಮತ್ತು ಚಿತ್ರತಂಡ, ಚಿತ್ರರಂಗದಲ್ಲಿ ತಮ್ಮ ಪ್ರಯಾಣ ಮತ್ತು ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿತು. “ಬುದ್ಧ ಚಿತ್ರಾಲಯ’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ದೇವ್ ಅವರಿಗೆ ನಾಯಕಿಯಾಗಿ ಗೀತಾಂಜಲಿ ಜೋಡಿಯಾಗಿದ್ದಾರೆ. ಉಳಿದಂತೆ ಮಾಲತೇಶ್, ನೀತೂ ರಾಯ್ ಮೊದಲಾದ ಕಲಾವಿದರ ತಾರಾಗಣವಿದೆ. ಸುಮಾರು ಇಪ್ಪತ್ತು ವರ್ಷಗಳಿಂದ ಕಿರುತೆರೆ ಛಾಯಾಗ್ರಾಹಕನಾಗಿ, ನಿರ್ದೇಶಕನಾಗಿ ಅನುಭವವಿರುವ ನಾಗರಾಜ ಉಪ್ಪುಂದ “ಗಿಣಿ ಹೇಳಿದ ಕಥೆ’ ಚಿತ್ರದ ದೃಶ್ಯಗಳಿಗೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿದ್ದಾರೆ.
ಇನ್ನು ಬಿಡುಗಡೆಯಾಗಿರುವ “ಗಿಣಿ ಹೇಳಿದ ಕಥೆ’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಪ್ರೀತ್ ಹಾಸನ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಹರ್ಷಪ್ರಿಯ, ಪ್ರದ್ಯುಮ್ನ, ರಾಜನೇಸರ ಹಾಡುಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಮಡಿಕೇರಿ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಹಾಡುಗಳ ಬಿಡುಗಡೆ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ “ಗಿಣಿ ಹೇಳಿದ ಕಥೆ’ಯನ್ನು ಪ್ರೇಕ್ಷಕರ ಮುಂದೆ ಹೇಳುವ ಯೋಜನೆಯಲ್ಲಿದೆ.