ನರಿ, “ನನ್ನ ಗಂಟಲಲ್ಲಿ ಮೂಳೆ ಸಿಕ್ಕಿಕೊಂಡಿದೆ. ಅದನ್ನು ಹೊರತೆಗೆದವರಿಗೆ ವಿಶೇಷ ಬಹುಮಾನವನ್ನು ಕೊಡುತ್ತೇನೆ. ಯಾರಾದರೂ ಸಹಾಯ ಮಾಡಿ’ ಎಂದು ಕೂಗಲು ಶುರು ಮಾಡಿತು. ಅದರ ಅರಚಾಟವನ್ನು ಎಲ್ಲ ಪ್ರಾಣಿಗಳು ಕೇಳಿಸಿಕೊಂಡರೂ, ಹಿಂದೆ ಅದರ ಕುಟಿಲ ತಂತ್ರವನ್ನು ಕಂಡಿದ್ದರಿಂದ ಆ ಕಡೆ ಸುಳಿಯದೇ ಸುಮ್ಮನಿದ್ದವು. ಆದರೆ ಬಾತುಕೋಳಿಯೊಂದರ ಮನಸ್ಸು ಕರಗಿತು.
ಒಂದು ಕಾಡಿನಲ್ಲಿ ನರಿ ಇತ್ತು. ಒಂದು ದಿನ ಮಾಂಸ ತಿನ್ನುವ ಹುರುಪಿನಲ್ಲಿ ಕಾಣದೇ ತಿಂದ ಮೂಳೆಯೊಂದು ಅದರ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. ಇದರಿಂದ ಪ್ರಾಣ ಹೋಗುವಷ್ಟು ನೋವನ್ನು ಅದು ಅನುಭವಿಸಬೇಕಾಯಿತು. ಈ ನಡುವೆ ಅದಕ್ಕೆ ಮಾತನಾಡಲೂ ಸಾಧ್ಯವಾಗವಿಲಿಲ್ಲ. ನೋವನ್ನು ಸಹಿಸಲಾರದೇ ಜೋರಾಗಿ ಕೂಗತೊಡಗಿತು.
ಅದರ ಕೂಗನ್ನು ಯಾವ ಪ್ರಾಣಿಗಳೂ ಕೇಳಿಸಿಕೊಳ್ಳಲಿಲ್ಲ. ಆದರೂ ಅದು ಬಿಡದೇ ಇನ್ನೂ ಜೋರಾಗಿ “ನನ್ನ ಗಂಟಲಲ್ಲಿ ಮೂಳೆ ಸಿಕ್ಕಿಕೊಂಡಿದೆ. ಅದನ್ನು ಹೊರತೆಗೆದವರಿಗೆ ವಿಶೇಷ ಬಹುಮಾನವನ್ನು ಕೊಡುತ್ತೇನೆ. ಯಾರಾದರೂ ಸಹಾಯ ಮಾಡಿ’ ಎಂದು ಕೂಗಲು ಶುರು ಹಚ್ಚಿತು.
ಅದರ ಅರಚಾಟವನ್ನು ಎಲ್ಲ ಪ್ರಾಣಿಗಳು ಕೇಳಿಸಿಕೊಂಡರೂ, ಹಿಂದೆ ಅದರ ಕುಟಿಲ ತಂತ್ರವನ್ನು ಕಂಡಿದ್ದರಿಂದ ಆ ಕಡೆ ಸುಳಿಯದೇ ಸುಮ್ಮನಿದ್ದವು. ಇದನ್ನು ಕಂಡ ನರಿ ಅಳಲು ಶುರುಮಾಡಿತು. ಅದನ್ನು ನೋಡಿ ಮನಕರಗಿದ ಬಾತುಕೋಳಿಯು ಅದರ ಬಳಿ ತೆರಳಿತು. ಅದರ ಗೆಳೆಯರು ಬೇಡವೆಂದು ಎಷ್ಟು ಸಲ ಹೇಳಿದರೂ ಬಾತುಕೋಳಿ ಕೇಳಲಿಲ್ಲ. ಅದು ನರಿಯ ಬಳಿ ಹೋಗಿ ಅದರ ಬಾಯನ್ನು ಅಗಲವಾಗಿ ತೆಗೆಯಲು ಹೇಳಿತು. ನಂತರ ಚೂಪಾದ ತನ್ನ ಕೊಕ್ಕನ್ನು ಅದರ ಗಂಟಲೊಳಗೆ ತೂರಿಸಿ ಸಿಕ್ಕಿಕೊಂಡಿದ್ದ ಮೂಳೆಯನ್ನು ಹೊರಗೆ ತೆಗೆದು ಹಾಕಿತು.
ನೋವು ಶಮನವಾದ ತಕ್ಷಣ ನರಿ ಚುರುಕುಗೊಂಡು “ಬಾತುಕೋಳಿಯೇ ನಿನಗೆ ಧನ್ಯವಾದಗಳು’ ಎಂದು ಹೇಳಿ ಹೊರಡಲು ಮುಂದಾಯಿತು. ಅದನ್ನು ತಡೆದ ಬಾತುಕೋಳಿ “ನರಿರಾಯ ನೀನು ಹೇಳಿದಂತೆ ನಾನು ಮೂಳೆಯನ್ನು ಹೊರಕ್ಕೆ ತೆಗೆದಿದ್ದೇನೆ. ನನಗೆ ನೀಡಬೇಕಾದ ವಿಶೇಷ ಉಡುಗೊರೆಯನ್ನು ಕೊಡು’ ಎಂದಿತು. ನಗುತ್ತಾ ನಿಂತ ನರಿರಾಯ “ಓ ಉಡುಗೊರೆಯಾ? ಆಗಲೇ ಕೊಟ್ಟುಬಿಟ್ಟೆನಲ್ಲಾ…’ ಎಂದಿತು. ಗಾಬರಿಗೊಂಡ ಬಾತುಕೋಳಿ “ಯಾವ ಉಡುಗೊರೆ? ನೀನು ಯಾವಾಗ ಕೊಟ್ಟೆ?’ ಎಂದು ಪ್ರಶ್ನಿಸಿತು. ಕುಹಕ ನಗು ನಕ್ಕ ನರಿ, “ನೀನು ನನ್ನ ಗಂಟಲಿನಲ್ಲಿರುವ ಮೂಳೆಯನ್ನು ತೆರೆಯಲು ನಿನ್ನ ಕೊಕ್ಕನ್ನು ನನ್ನ ಬಾಯಲ್ಲಿ ತೂರಿಸಿದ್ದೆ. ಆ ಸಂದರ್ಭದಲ್ಲಿ ನಾನು ನಿನ್ನ ಜೀವಕ್ಕೆ ಕುತ್ತು ತರಬಹುದಿತ್ತು. ಆದರೆ, ನಾನು ಹಾಗೆ ಮಾಡಲಿಲ್ಲ. ಅದು ನಾನು ನಿನಗೆ ಕೊಟ್ಟ ವಿಶೇಷ ಉಡುಗೊರೆಯಲ್ಲದೆ ಮತ್ತಿನ್ನೇನು?’ ಎಂದು ನುಡಿದು ಮತ್ತೆ ಕುಹಕ ನಗೆ ನಕ್ಕು ತನ್ನ ಹಾದಿ ಹಿಡಿಯಿತು. ಬಾತುಕೋಳಿ ದಾರಿ ಕಾಣದೇ ಕಣ್ಣು ಬಾಯಿ ಬಿಡುತ್ತಾ ನಿಂತಿತು.
ಸಂಗ್ರಹ: ಎಂ.ಎಸ್.ರಾಘವೇಂದ್ರ