Advertisement
ದೇಶದಲ್ಲಿ ಬಾಸುಮತಿ ಅಕ್ಕಿ, ಡಾರ್ಜಿಲಿಂಗ್ ಚಹ, ನಾಗಪುರ ಕಿತ್ತಳೆ, ಕೊಲ್ಲಾಪುರ ಚಪ್ಪಲಿ, ಕಾಂಚೀಪುರದ ರೇಷ್ಮೆ ಸೀರೆ, ಮಹಾರಾಷ್ಟ್ರದ ಅಲ್ಫಾ ನ್ಸೊ ಮಾವು ಇತ್ಯಾದಿ ಉತ್ಪನ್ನಗಳು ಜಿಐ ಟ್ಯಾಗ್ ಪಡೆದಿವೆ. ಕರ್ನಾಟಕದಲ್ಲಿ ನಂಜನಗೂಡು ರಸಬಾಳೆ, ಕೊಡಗಿನ ಕಿತ್ತಳೆ, ಧಾರವಾಡ ಪೇಡಾ, ಚನ್ನಪಟ್ಟಣದ ಬೊಂಬೆ, ಮೈಸೂರು ವೀಳ್ಯದೆಲೆ, ಮೈಸೂರು ರೇಷ್ಮೆ ಸೀರೆ, ಬೀದರ್‌ನ ಬಿದರಿ ಕಲೆ ಮೊದಲಾದ 40 ಉತ್ಪನ್ನಗಳಿಗೆ “ಜಿಐ ಟ್ಯಾಗ್’ ಸಿಕ್ಕಿದೆ. ಆದರೆ, ಈವರೆಗೆ ಯಾವುದೇ ಕೃಷಿ ಬೆಳೆಗೆ ಜಿಐ ಟ್ಯಾಗ್ ಸಿಕ್ಕಿರಲಿಲ್ಲ. ಕೃಷಿ ಬೆಲೆ ಆಯೋಗ ಇದೇ ಮೊದಲ ಬಾರಿಗೆ ಕೃಷಿ ಬೆಳೆಯಾದ ದೇಸಿ ಅಕ್ಕಿಗೆ “ಜಿಐ ಟ್ಯಾಗ್’ ಮಾಡಲು ಮುಂದಾಗಿದೆ.
Related Articles
Advertisement
“ಜಿಐ ಟ್ಯಾಗ್’ ಪಡೆದ ಸಾಮಗ್ರಿ ಆ ನಿರ್ದಿಷ್ಟ ವಲಯದೊಳಗೆ ಉತ್ಪಾದನೆಯಾಗಿರಬೇಕು ಹಾಗೂ ಕೆಲವು ವಿಶೇಷ ಗುಣಲಕ್ಷಣಗಳನ್ನು ಪಡೆದಿರಬೇಕು. ವಹಿವಾಟಿನಲ್ಲಿ ಬಳಕೆಯಾಗುವ “ಟ್ರೇಡ್ ಮಾರ್ಕ್’ ಉದ್ಯಮಕ್ಕೆ ಸಂಬಂಧಿಸಿದ್ದಾದರೆ “ಜಿಐ ಟ್ಯಾಗ್’ ವಿಶೇಷ ಪ್ರದೇಶದಲ್ಲಿ ಉತ್ಪಾದನೆಯಾಗುವ ಬೆಳೆ, ವಸ್ತು ಅಥವಾ ಉತ್ಪನ್ನವನ್ನು ಗುರುತಿಸಲು ಬಳಕೆಯಾಗುತ್ತದೆ.
ಭೌಗೋಳಿಕವಾಗಿ ವಿಶಿಷ್ಟ ಗುಣಲಕ್ಷಣ ಹೊಂದಿರುವ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ “ಜಿಐ ಟ್ಯಾಗ್’ (ಜಿಯಾಗ್ರಫಿಕಲ್ ಇಂಡಿಕೇಶನ್ಸ್ ಟ್ಯಾಗ್) ನೀಡುತ್ತದೆ. ಅಂಥ ಉತ್ಪನ್ನಗಳನ್ನು ಸಂಬಂ ಧಿಸಿದ ಗುಂಪು ಅಥವಾ ವ್ಯಕ್ತಿಗಳಲ್ಲದೆ ಬೇರೆಯವರು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಎಂಬುದು ಪ್ರಮುಖ ಷರತ್ತಾಗಿದೆ. ಒಮ್ಮೆ ನೋಂದಾಯಿಸಿದ ‘ಜಿಐ ಟ್ಯಾಗ್’, ಹತ್ತು ವರ್ಷಗಳ ಅವಧಿ ಗೆ ಚಾಲ್ತಿಯಲ್ಲಿ ಇರುತ್ತದೆ. ಆ ಬಳಿಕ ಮತ್ತೆ ಹತ್ತು ವರ್ಷಗಳ ಅವ ಧಿಗೆ ನವೀಕರಣ ಮಾಡಿಸಿಕೊಳ್ಳಬಹುದು.
“ಜಿಐ ಟ್ಯಾಗ್’ನಿಂದ ಏನು ಪ್ರಯೋಜನ?: “ಜಿಐ ಟ್ಯಾಗ್’ನಿಂದ ಭಾರತದ ಭೌಗೋಳಿಕ ವಲಯಗಳಿಗೆ ಕಾನೂನಾತ್ಮಕ ರಕ್ಷಣೆ ದೊರಕುತ್ತದೆ. ನೋಂದಾಯಿತ ಭೌಗೋಳಿಕ ಸನ್ನದಿನ ಅನಧಿ ಕೃತ ಬಳಕೆಗೆ ತಡೆ ಹಾಕುತ್ತದೆ. ಭೌಗೋಳಿಕ ಸನ್ನದಿಗೆ ಕಾನೂನು ಸಮ್ಮತ ರಕ್ಷಣೆ ಒದಗಿಸಿ, ಆ ವಲಯದ ಉತ್ಪನ್ನಗಳ ರಫ್ತಿಗೆ ಅವಕಾಶ ನೀಡುತ್ತದೆ. ನಿರ್ದಿಷ್ಟ ವಲಯದಲ್ಲಿ ಉತ್ಪಾದನೆಯಾದ ಸಾಮಗ್ರಿಗಳಿಗೆ ಮಾರುಕಟ್ಟೆ ಸಿಕ್ಕು, ಆ ಪ್ರದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗುತ್ತದೆ.
ರಾಜ್ಯದ ದೇಸಿ ಅಕ್ಕಿ ತಳಿಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ, ಈ ಅವಕಾಶದ ಲಾಭ ಬೆಳೆಗಾರರಿಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಕನ್ನಡ ನಾಡಿನ ದೇಸಿ ಅಕ್ಕಿ ತಳಿಗಳಿಗೆ “ಜಿಐ ಟ್ಯಾಗ್’ ಪಡೆದರೆ, ರೈತರು ಮಾರುಕಟ್ಟೆಯಲ್ಲಿ ಅತ್ಯ ಧಿಕ ಲಾಭ ಗಳಿಸಬಹುದು. ದೇಸಿ ಅಕ್ಕಿಯ ಹೆಸರಲ್ಲಿ ವ್ಯಾಪಾರಸ್ಥರು ಮಾಡುವ ಅಕ್ರಮವನ್ನೂ ನಿಲ್ಲಿಸಬಹುದೆಂಬ ಚಿಂತನೆ ಕೃಷಿ ಬೆಲೆ ಆಯೋಗದ್ದಾಗಿದೆ.
ಕರ್ನಾಟಕದ ದೇಸಿ ತಳಿಗಳಿಗೆ ಈಗ “ಜಿಐ ಟ್ಯಾಗ್’ ಕೊಡುವ ಮೂಲಕ ಆ ತಳಿ ಬೆಳೆಯುವ ರೈತರಿಗೆ ಆರ್ಥಿಕ ಸುಸ್ಥಿರತೆ ತಂದು ಕೊಡಲು ಸರ್ಕಾರ, ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ಬೆಲೆ ಆಯೋಗ ಪ್ರಯತ್ನ ನಡೆಸುತ್ತಿದೆ. ಇದರ ಮೊದಲ ಹಂತವಾಗಿ “ರಾಜಮುಡಿ’ ಅಕ್ಕಿ ತಳಿಗೆ “ಜಿಐ ಟ್ಯಾಗ್’ ಮಾಡುವ ಕಾರ್ಯ ನಡೆದಿದೆ.-ಪ್ರಕಾಶ ಕಮ್ಮರಡಿ, ಅಧ್ಯಕ್ಷರು, ಕರ್ನಾಟಕ ಕೃಷಿ ಬೆಲೆ ಆಯೋಗ * ಎಚ್.ಕೆ. ನಟರಾಜ