Advertisement

“ಘೊಟಾಲೆಬಾಜ್‌ ಬಿಜೆಪಿ’ಕಿರುಹೊತ್ತಗೆ  ಬಿಡುಗಡೆ

06:50 AM Nov 05, 2017 | Harsha Rao |

ಮುಂಬಯಿ: ಬಿಜೆಪಿ ಸಚಿವರು ಎದುರಿಸುತ್ತಿರುವ  ಭ್ರಷ್ಟಾಚಾರ ಆರೋಪಗಳ ಕುರಿತಂತೆ ವಿವರಗಳನ್ನು ಒಳಗೊಂಡ ಕಿರುಪುಸ್ತಕ “ಘೊಟಾಲೆಬಾಜ್‌ ಬಿಜೆಪಿ’ಯನ್ನು ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಬಿಡುಗೊಳಿಸಿ ಬಿಜೆಪಿ ವಿರುದ್ಧದ ಸಮರವನ್ನು ಮತ್ತಷ್ಟು  ತೀವ್ರಗೊಳಿಸಿದ್ದರೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರದಲ್ಲಿ  ಸಚಿವರಾಗಿರುವ ಶಿವಸೇನೆ ನಾಯಕರನ್ನು ಈ ಪುಸ್ತಕ ಸಂದಿಗ್ಧತೆಯಲ್ಲಿ  ಸಿಲುಕುವಂತೆ ಮಾಡಿದೆ. ಉದ್ಧವ್‌ ಠಾಕ್ರೆ ಅವರು ಬಿಡುಗಡೆ ಮಾಡಿದ ಈ ಪುಸ್ತಕದ  ಸಂಬಂಧ ಮುಖ್ಯಮಂತ್ರಿ ಫ‌ಡ್ನವೀಸ್‌ ಅವರು ಶಿವಸೇನೆ ವಿರುದ್ಧ  ತೀವ್ರ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ  ಸೇನಾ ಸಚಿವರು ಈ ವಿಚಾರದಲ್ಲಿ  ಪಕ್ಷದ ನಿಲುವಿನಿಂದ ಒಂದಿಷ್ಟು ಅಂತರವನ್ನು ಕಾಯ್ದುಕೊಳ್ಳುವ ಮೂಲಕ “ಡ್ಯಾಮೇಜ್‌ ಕಂಟ್ರೋಲ್‌’ಗೆ ಮುಂದಾಗಿದ್ದಾರೆ. 

Advertisement

ಶಿವಸೇನೆ ವರಿಷ್ಠ ಉದ್ಧವ್‌ ಠಾಕ್ರೆ ಅವರು ಶಿವಸೇನೆ ಭವನದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಮಾವೇಶದ ಸಂದರ್ಭದಲ್ಲಿ ಈ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದ್ದು ಇದರಲ್ಲಿ  ಬಿಜೆಪಿ ನಾಯಕರ ವಿರುದ್ಧದ  ಭ್ರಷ್ಟಾಚಾರ ಆರೋಪಗಳ ವಿವರಗಳನ್ನು ನೀಡಲಾಗಿದೆ. ಇದು ಬಿಜೆಪಿ ಮಾತ್ರವಲ್ಲದೆ  ಸ್ವತಃ  ಮುಖ್ಯಮಂತ್ರಿ  ದೇವೇಂದ್ರ ಫ‌ಡ್ನವೀಸ್‌ ಅವರ  ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಈ ಬಗ್ಗೆ ಶಿವಸೇನೆಯಿಂದ ಸ್ಪಷ್ಟನೆಯನ್ನು ಕೋರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

ಬಿಜೆಪಿ ಮತ್ತು ಶಿವಸೇನೆ ನಡುವಣ ವೈಮನಸ್ಸು ತಾರಕಕ್ಕೇರಿರುವಂತೆಯೇ ಈ ಬೆಳವಣಿಗೆಗಳು ಘಟಿಸಿದ್ದು ಸರಕಾರದ ಸ್ಥಿರತೆಯ  ಬಗೆಗೆ ಅನುಮಾನಗಳು ಕಾಡಲಾರಂಭಿಸಿವೆ. ಶಿವಸೇನೆ ಬಿಡುಗಡೆ ಮಾಡಿದ ಪುಸ್ತಕದಲ್ಲಿ ಫ‌ಡ್ನವೀಸ್‌ ನೇತೃತ್ವದ  ಸರಕಾರದ  ಮೂರು ವರ್ಷಗಳ ಅವಧಿಯಲ್ಲಿ  ಬಿಜೆಪಿ ಸಚಿವರಾದ ಗಿರೀಶ್‌ ಬಾಪಟ್‌, ವಿನೋದ್‌ ತಾಬ್ಡೆ, ದಿಲೀಪ್‌ ಗಾಂಧಿ, ಮಾಜಿ ಸಚಿವರಾದ  ಏಕನಾಥ ಖಡ್ಸೆ  ಮತ್ತು ಇತರರ  ವಿರುದ್ಧ  ಭ್ರಷ್ಟಾಚಾರ ಆರೋಪಗಳು ಕೇಳಿಬಂದಿವೆ ಎಂದು ದೂರಲಾಗಿದೆ. 

ಈ ಬಗ್ಗೆ  ತೀಕ್ಷ್ಣವಾಗಿ  ಪ್ರತಿಕ್ರಿಯಿಸಿರುವ  ಬಿಜೆಪಿ  ಪದಾಧಿಕಾರಿಯೋರ್ವರು  ಈ ಪುಸ್ತಕದಲ್ಲಿ  ಶಿವಸೇನೆ  ತನ್ನದೇ ಸಚಿವರ  ಹೆಸರುಗಳನ್ನೂ  ಉಲ್ಲೇಖೀಸಬೇಕಿತ್ತು  ಎಂದು  ವ್ಯಂಗ್ಯವಾಡಿದ್ದಾರೆ.  ಎಂಐಡಿಸಿ  ಭೂ ವಿವಾದದ  ಆರೋಪಕ್ಕೊಳಗಾಗಿರುವ  ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ  ಅವರ  ಹೆಸರು  ಪುಸ್ತಕದ  ಮೊದಲ ಪುಟದಲ್ಲಿಯೇ  ಪ್ರಕಟಗೊಳ್ಳಬೇಕಿತ್ತು ಎಂದು  ಕಿಡಿಕಾರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next