ರಿಯೋ ಡಿ ಜನೈರೋ: ಮೂಢನಂಬಿಕೆ ವಿರೋ ಮಸೂದೆಯನ್ನೇನಾದರೂ, ಇಲ್ಲಿ ಬಿಟ್ಟು ಬ್ರೆಜಿಲ್‌ನಲ್ಲಿ ಮಂಡಿಸಿದ್ದರೆ, ಒಂದೇ ಕ್ಷಣದಲ್ಲಿ ಅದು ತಿರಸ್ಕೃತವಾಗಿ, ಕಸದ ಬುಟ್ಟಿ ಸೇರಿ ಬಿಡುತ್ತಿತ್ತು!
ಏಕೆ ಅಂತೀರಾ? ಇದಕ್ಕೆ ಕಾರಣಗಳಿವೆ. ಅಲ್ಲಿನ ಅಧ್ಯಕ್ಷರೇ ದೆವ್ವಕ್ಕೆ ಹೆದರಿ ಸರ್ಕಾರಿ ಬಂಗಲೆಯನ್ನೇ ತೊರೆದಿದ್ದಾರೆ. ಬ್ರೆಜಿಲ್ಲಾದಲ್ಲಿರುವ ಅಲ್ವೋರೆಡಾ ಪ್ಯಾಲೇಸ್ ಅನ್ನು ಖಾಲಿ ಮಾಡಿರುವ ಅಧ್ಯಕ್ಷ ಮೈಕೆಲ್ ಟೆಮರ್, ಇದಕ್ಕೆ ಭದ್ರತೆಯ ಕಾರಣಗಳನ್ನು ನೀಡಿದ್ದಾರೆ.
ಈ ವೈಭವೋಪೇತ ಬಂಗಲೆಯಲ್ಲಿ ಏಕೋ ಎಲ್ಲವೂ ಸರಿ ಇಲ್ಲ ಎಂದೆನಿಸುತ್ತಿದೆ. ಏನೋ ಕೇಳಿಸಬಾರದ ಸೌಂಡು, ಮತ್ತಿನ್ನೇನೋ ವಿಲಕ್ಷಣ ಬೆಳವಣಿಗೆಗಳಿಂದಾಗಿ ಮನೆ ಖಾಲಿ ಮಾಡ್ತಾ ಇದ್ದೇನೆ. ನನಗೆ ಅನ್ನಿಸುವ ಪ್ರಕಾರ, ಅಲ್ಲಿ ದೆವ್ವಗಳೇ ಇರಬೇಕು ಎಂದು ಅಧ್ಯಕ್ಷ ಮೈಕೆಲ್ ಟೆಮರ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದಷ್ಟೇ ಅಲ್ಲ, ಮೈಕೆಲ್ ಪತ್ನಿ, ಒಬ್ಬ ಮಾಂತ್ರಿಕನನ್ನು ಕರೆದುಕೊಂಡು ಹೋಗಿ ಶಾಂತಿಯನ್ನೂ ಮಾಡಿಸಿದ್ದಾರಂತೆ. ಆದರೂ ಆ ದೆವ್ವ ಹೋಗಿಲ್ಲದ ಕಾರಣಕ್ಕಾಗಿ ಕಡೆಯದಾಗಿ ನಿವಾಸವನ್ನೇ ಖಾಲಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ. ಹೀಗಾಗಿ ಅಷ್ಟೇನೂ ದೊಡ್ಡದಲ್ಲದ, ಆದರೂ ವೈಭವಕ್ಕೆ ಕಡಿಮೆ ಇಲ್ಲದ ಉಪಾಧ್ಯಕ್ಷರಿಗೆ ಮೀಸಲಾಗಿದ್ದ ಜಬರು ಪ್ಯಾಲೇಸ್‌ಗೆ ಈ ವಿಐಪಿ ದಂಪತಿ ತೆರಳಿದ್ದಾರೆ.
ಇನ್ನೂ ವಿಶೇಷವೆಂದರೆ, ಅಧ್ಯಕ್ಷರ ಬಂಗ್ಲೆಯಲ್ಲಿ ಇತ್ತೀಚಿನ ವರೆಗೆ ಹಿಂದಿನ ಅಧ್ಯಕ್ಷೆ ಡಿಲ್ಮಾ ರೌಸೆಫ್ ವಾಸವಾಗಿದ್ದರು. ಆದರೆ, ಇವರನ್ನು ವಾಗ್ಧಂಡನೆ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ರೌಸೆಫ್ ಅಧ್ಯಕ್ಷರಾಗಿದ್ದ ವೇಳೆ ಮೈಕೆಲ್ ಉಪಾಧ್ಯಕ್ಷರಾಗಿದ್ದ ಕಾರಣ, ಜಬರು ಪ್ಯಾಲೇಸ್‌ನಲ್ಲಿ ವಾಸವಿದ್ದರು. ಇವರು ಅಧ್ಯಕ್ಷರಾಗಿ ತೆರಳಿದ ಮೇಲೆ ಅಲ್ವೋರೆಡಾ ಪ್ಯಾಲೇಸ್‌ಗೆ ಶಿಫ್ಟ್ ಆಗಿದ್ದರು. ಈ ನಿವಾಸ ಖಾಲಿಯೇ ಇತ್ತು.
ಅಂದಹಾಗೆ, ಅಲ್ವೋರೆಡಾ ಪ್ಯಾಲೇಸ್ ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಲಾಗಿದ್ದು, ಬ್ರೆಜಿಲ್ ರಾಜಧಾನಿಯ ಹೃದಯಭಾಗದಲ್ಲಿದೆ. ಇದರಲ್ಲಿ ದೊಡ್ಡದಾದ ಈಜುಕೊಳ, ಫುಟ್ಬಾಲ್ ಮೈದಾನ, ವೈದ್ಯಕೀಯ ಕೇಂದ್ರ, ದೊಡ್ಡ ಲಾನ್ ಕೂಡ ಇವೆ.