Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ವಾರ್ಷಿಕ ಕ್ರೀಡೋತ್ಸವ

04:14 PM Jan 30, 2018 | Team Udayavani |

ನವಿಮುಂಬಯಿ: ನಮ್ಮ ದೇಹದ ಸಮತೋಲನ ಕಾಪಾಡಲು ಕ್ರೀಡೆ ಅಗತ್ಯವಾಗಿದೆ. ಮಕ್ಕಳಿಗೆ ಶಿಕ್ಷಣ ಹೇಗೆ ಅಗತ್ಯವೋ ಹಾಗೆಯೇ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅಷ್ಟೇ ಅಗತ್ಯ. ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಪ್ರಸಿದ್ಧ ಕ್ರೀಡಾಪಟು ತನಿಷ್ಕಾ ಶೆಟ್ಟಿಯ ಹಾಗೆ ನೀವೆಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಬೇಕು. ಮಕ್ಕಳನ್ನು ಆದಷ್ಟು ಮೊಬೈಲ್‌ನಿಂದ ದೂರ ಇಡಬೇಕು. ಇಂತಹ ಕ್ರೀಡಾಕೂಟಗಳಲ್ಲಿ ಮಕ್ಕಳು ಭಾಗವಹಿಸುವಂತೆ ಹಿರಿಯರು ಪ್ರೋತ್ಸಾಹಿಸಬೇಕು. ನಮ್ಮ ಜನ್ಮಭೂಮಿ, ಕಲಿತ ಶಾಲೆ ಹಾಗೂ ನಮ್ಮನ್ನು ಪ್ರೋತ್ಸಾಹಿಸಿದ ಸಂಘ-ಸಂಸ್ಥೆಗಳನ್ನು ಎಂದಿಗೂ ಮರೆಯಬಾರದು ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ  ಅವರು ನುಡಿದರು.

Advertisement

ಜ. 28 ರಂದು ಬೆಳಗ್ಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಆವರಣದಲ್ಲಿ, ಮಂದಿರದ ಅಂಗಸಂಸ್ಥೆ  ಶ್ರೀ ಮೂಕಾಂಬಿಕಾ ಚಾರಿಟೆಬಲ್‌  ಮಂಡಳದ ವತಿಯಿಂದ ಆಯೋಜಿಸಲಾಗಿದ್ದ 10ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದ ಕ್ರೀಡಾಳುಗಳಿಗೆ ಶುಭಹಾರೈಸಿದರು.

ಅತಿಥಿಗಳಾಗಿ ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ, ಚಿತ್ರನಿರ್ಮಾಪಕ ಅರವಿಂದ ಸಿಂಗ್‌ ಚೌಹಾಣ್‌, ದೇವಾಲಯ ಸಮಿತಿಯ ಜತೆ ಕಾರ್ಯದರ್ಶಿ  ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಮಂಡಳದ ಸದಸ್ಯರಾದ ಸತೀಶ್‌ ಎಸ್‌. ಪೂಜಾರಿ, ಪದ್ಮನಾಭ ಸಿ. ಶೆಟ್ಟಿ, ಉದ್ಯಮಿಗಳಾದ ಸುರೇಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ರಾಜೇಂದ್ರ ಶೆಟ್ಟಿ, ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ, ಉಪ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ, ಕ್ರೀಡಾಪಟುಗಳಾದ ಸ್ವೀಕೃತ್‌ ಎಸ್‌. ಶೆಟ್ಟಿ, ಕು| ತನಿಷ್ಕಾ ಎಸ್‌. ಶೆಟ್ಟಿ ಅವರು ಉಪಸ್ಥಿತರಿದ್ದರು.

ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಕು| ಮೈಥಿಲಿ, ಕು| ಅಶ್ನಾ ಮತ್ತು ಕು| ಸಾಕ್ಷಿ ಪ್ರಾರ್ಥನೆಗೈದರು. ಮಂಡಳದ ಅಧ್ಯಕ್ಷ ನಂದಿಕೂರು ಜಗದೀಶ್‌ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ದೇವಾಲಯದ ಅಧ್ಯಕ್ಷರಾದ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ದೇವಾಲಯ ದಿನದಿಂದ ದಿನಕ್ಕೆ ಪ್ರಗತಿಯ ಪಥದತ್ತ ಸಾಗುತ್ತಿದೆ. ಕಳೆದ 10 ವರ್ಷಗಳಿಂದ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದೇವೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಹೆಸರು ಗಳಿಸಬೇಕು ಎಂದು ನುಡಿದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗೌರವಾರ್ಪಣೆ, ಸಮ್ಮಾನ 

Advertisement

ಅತಿಥಿ-ಗಣ್ಯರುಗಳನ್ನು ಮಂಡಳದ ಪದಾಧಿಕಾರಿಗಳು ಗೌರವಿಸಿದರು. ಕ್ರೀಡಾಪಟುಗಳಾದ ಸ್ವೀಕೃತ್‌ ಶೆಟ್ಟಿ ಮತ್ತು ತನಿಷ್ಕಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. 

ಹರೀಶ್‌ ಶೆಟ್ಟಿ ನಲ್ಲೂರು, ತುಷಾರ್‌ ವಿ. ಶೆಟ್ಟಿ ಮತ್ತು ಚಿತ್ರನಟಿ ಪಾರ್ಥ್ ಚೌಹಾಣ್‌ ಅವರನ್ನು ಗೌರವಿಸಲಾಯಿತು. ಸುರೇಶ್‌ ಎಸ್‌. ಕೋಟ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಹರೀಶ್‌ ಪಡುಬಿದ್ರೆ ಅವರು ವಂದಿಸಿದರು. ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಬಲೂನ್‌ ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ವಯೋಮಿತಿಯವರಿಗೆ ವೈವಿಧ್ಯಮಯ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರಿಗೆ ಹಗ್ಗಜಗ್ಗಾಟ, ವಾಲಿಬಾಲ್‌, ಕ್ರಿಕೆಟ್‌ ಮತ್ತು ಮಹಿಳೆಯರಿಗೆ ತ್ರೋಬಾಲ್‌, ಹಗ್ಗಜಗ್ಗಾಟ, ತೆಂಗಿನ ಗರಿ ಹೆಣೆಯುವುದು ಇನ್ನಿತರ ಸ್ಪರ್ಧೆಗಳು ನಡೆಯಿತು. 

ಹರೀಶ್‌ ಶೆಟ್ಟಿ ನಲ್ಲೂರು ಅವರ ವತಿಯಿಂದ ಬೆಳಗ್ಗೆಯ ಉಪಾಹಾರ, ಮಂಡಳದ ವತಿಯಿಂದ ಮಧ್ಯಾಹ್ನದ ಊಟ ಹಾಗೂ ತುಷಾರ್‌ ವಿ. ಶೆಟ್ಟಿ ಅವರ ವತಿಯಿಂದ ಸಂಜೆಯ ಉಪಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಮಂಡಳದ ಉಪಾಧ್ಯಕ್ಷರುಗಳಾದ ಸುರೇಶ್‌ ಎಸ್‌. ಕೋಟ್ಯಾನ್‌, ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಂಕರ್‌ ಮೊಲಿ, ಜತೆ ಕಾರ್ಯದರ್ಶಿ ಹರೀಶ್‌ ಪಡುಬಿದ್ರೆ, ಕೋಶಾಧಿಕಾರಿ ಹರೀಶ್‌ ಶೆಟ್ಟಿ ನಲ್ಲೂರು, ಜತೆ ಕೋಶಾಧಿಕಾರಿ ರತ್ನಾ ಟಿ. ಗೌಡ, ಸಮಿತಿಯ ಸರ್ವ ಸದಸ್ಯರು, ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್‌, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಮಿತಿಯ ಸದಸ್ಯರು, ಉಪಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಆರ್‌. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಪ್ರವೀಣ್‌ ಕೆ. ಶೆಟ್ಟಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ಮಂಡಳಿಯ ಕಾರ್ಯಾಧ್ಯಕ್ಷೆ ಆಶಾ ವಿ. ಶೆಟ್ಟಿ ಮತ್ತು ಸರ್ವ ಸದಸ್ಯೆಯರು ಸಹಕರಿಸಿದರು. 

ತೀರ್ಪುಗಾರರಾಗಿ ಶೇಖರ್‌ ಸತ್ತೀಕರ್‌ ಮತ್ತು ರಿತೇಶ್‌ ಬಿ. ಶೆಟ್ಟಿ ಸಹಕರಿಸಿದರು. ತಾಳಿಪಾಡಿಗುತ್ತು ಭಾಸ್ಕರ್‌ ಶೆಟ್ಟಿ, ಹರೀಶ್‌ ಪಡುಬಿದ್ರೆ, ಹರೀಶ್‌ ನಲ್ಲೂರು, ವಿದ್ಯಾ ಅಂಚನ್‌, ರಾಧಾ ಪೂಜಾರಿ, ಜಯಂತಿ ಪೂಜಾರಿ ಮೊದಲಾದವರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next