Advertisement

ಶುರುವಾಗಿದೆ ಟಿಡಿಎಸ್‌ ಲೆಕ್ಕಾಚಾರ

12:12 PM Jul 17, 2020 | mahesh |

ಪ್ರತೀವರ್ಷ ಏಪ್ರಿಲ್‌ ತಿಂಗಳು ಬಂತೆಂದರೆ ತೆರಿಗೆ ಲೆಕ್ಕಾಚಾರಗಳು ಶುರುವಾಗುತ್ತವೆ. ಈ ವರ್ಷ ಕೊರೊನಾ ಕಾರಣಕ್ಕೆ ಈ ಪ್ರಕ್ರಿಯೆ ಬಹಳ ವಿಳಂಬವಾಗಿದೆ. ಈ ಹಂತದಲ್ಲಿ ಗಮನಸೆಳೆಯುವ ಮಹತ್ವದ ಸಂಗತಿಯೆಂದರೆ ಟಿಡಿಎಸ್‌ ಸಲ್ಲಿಕೆ. ಟ್ಯಾಕ್ಸ್‌ ಡಿಡಕ್ಟೆಡ್‌ ಆ್ಯಟ್‌ ಸೋರ್ಸ್‌ ಎನ್ನುವುದು ಇದರ ವಿಸ್ತೃತ ರೂಪ. ಯಾರೂ ತೆರಿಗೆ ತಪ್ಪಿಸಿಕೊಳ್ಳಬಾರದು ಎನ್ನುವ ಹಿನ್ನೆಲೆಯಲ್ಲಿ ಟಿಡಿಎಸ್‌ ಕತ್ತರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಟಿಡಿಎಸ್‌ ಅಂದರೇನು? ಅದನ್ನು ಹಿಂಪಡೆಯುವುದು ಹೇಗೆ? ಅದರ ಬೇರೆ ಬೇರೆ ಲೆಕ್ಕಾಚಾರಗಳೇನು ಎಂಬ ಮಾಹಿತಿ ಇಲ್ಲಿದೆ.

Advertisement

ಟಿಡಿಎಸ್‌ ಅಂದರೇನು?
ಟ್ಯಾಕ್ಸ್‌ ಡಿಡಕ್ಟೆಡ್‌ ಆ್ಯಟ್‌ ಸೋರ್ಸ್‌ ಎನ್ನುವುದು ಇದರ ವಿಸ್ತೃತ ರೂಪ. ಅಂದರೆ ತೆರಿಗೆಯನ್ನು ಹಣದ ಮೂಲದಲ್ಲಿಯೇ ಕತ್ತರಿಸುವುದು. ಇನ್ನೂ ಬಿಡಿಸಿ ಹೇಳುವುದಾದರೆ ಕಂಪನಿಯೊಂದು ಸಂಬಳ ನೀಡುವಾಗ, ಸರ್ಕಾರದಿಂದ ನಿರ್ದೇಶಿತವಾಗಿರುವ ಪ್ರಮಾಣದಲ್ಲಿ ತೆರಿಗೆ ಹಣವನ್ನು ಕತ್ತರಿಸಿ, ಬಾಕಿ ಮೊತ್ತವನ್ನು ಮಾತ್ರ ಉದ್ಯೋಗಿಗೆ ನೀಡುತ್ತದೆ. ಹೀಗೆ ಕತ್ತರಿಸಿರುವ ಹಣವನ್ನು ಉದ್ಯೋಗಿಯ ಪಾನ್‌ ಖಾತೆಯ (ಶಾಶ್ವತ ಖಾತೆ ಸಂಖ್ಯೆ) ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತದೆ.

ಎಲ್ಲ ಆದಾಯಕ್ಕೂ ಟಿಡಿಎಸ್‌ ಅನ್ವಯಿಸಲ್ಲ
ಟಿಡಿಎಸ್‌ ಎಲ್ಲ ರೀತಿಯ ಆದಾಯಗಳಿಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ ಡೆಟ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಭಾರತೀಯರು ಹೂಡಿದ ಹಣ ಹಿಂಪಡೆದರೆ, ಅದಕ್ಕೆ ಟಿಡಿಎಸ್‌ ಇಲ್ಲ. ಅದೇ ಅನಿವಾಸಿ ಭಾರತೀಯರು ಹಣ ಪಡೆದರೆ ಟಿಡಿಎಸ್‌ ಅನ್ವಯಿಸುತ್ತದೆ. ಇನ್ನು ವೇತನ, ಬಡ್ಡಿ, ಕಮಿಷನ್‌, ಲಾಭಾಂಶ ನೀಡುವಾಗ ಟಿಡಿಎಸ್ ಕತ್ತರಿಸಲ್ಪಡುತ್ತದೆ. ಟಿಡಿಎಸ್‌ ವ್ಯಾಪ್ತಿಗೆ ಬರುವ ಬೇರೆ ಬೇರೆ ಆದಾಯ ಮೂಲವನ್ನು ಸರ್ಕಾರ ನಿಗದಿ ಮಾಡಿದೆ.

ವೇತನೇತರ ಕಡಿತದ ಪ್ರಮಾಣ ಇಳಿಕೆ
ಮೇ 14, 2020ರಿಂದ ಸರ್ಕಾರ ವೇತನೇತರ ಟಿಡಿಎಸ್‌ ಕಡಿ ತದ ಪ್ರಮಾಣವನ್ನು ಶೇ.25ರಷ್ಟು ತಗ್ಗಿಸಿದೆ. ಇದರಲ್ಲಿ ಮನೆ ಬಾಡಿಗೆ, ನಿಗದಿತ ಠೇವಣಿಗಳಿಂದ ಪಡೆದ ಬಡ್ಡಿ, ಲಾಭಾಂಶ ಇತ್ಯಾದಿಗಳು ಸೇರುತ್ತವೆ. ಆದರೆ ವೇತನ ನೀಡುವಾಗ ಮಾಡುವ ಕಡಿತದಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಎನ್ನುವು ದನ್ನು ಗಮನಿಸಬೇಕು. ಜೊತೆಗೆ ಕಡಿತದ ಪ್ರಮಾಣ ಇಳಿಸಿದ್ದು 2021, ಮಾ.31ರವರೆಗೆ ಮಾತ್ರ ಅನ್ವಯ ಎನ್ನುವುದೂ ಗೊತ್ತಿರಬೇಕು.

ಫಾರ್ಮ್ 26 ಎಎಸ್‌ ಮತ್ತು ಫಾರ್ಮ್ 16
ಟಿಡಿಎಸ್‌ ಸಲ್ಲಿಕೆ ವೇಳೆ ಎರಡು ಮುಖ್ಯ ಪತ್ರಕಗಳನ್ನು ಗಮನಿಸಲೇಬೇಕು
1.  ಫಾರ್ಮ್ 26 ಎಎಸ್‌: ಆ್ಯನ್ಯುಯಲ್‌ ಸ್ಟೇಟ್‌ಮೆಂಟ್‌ ಅಥವಾ ವಾರ್ಷಿಕ ವಿವರ. ಇದರಲ್ಲಿ ವಿವಿಧಮೂಲಗಳಿಂದ ಕತ್ತರಿ ಸಲ್ಪಟ್ಟ ನಮ್ಮ ಟಿಡಿಎಸ್‌ ಮಾಹಿತಿಗಳನ್ನು ತಿಳಿಸಲಾಗಿರುತ್ತದೆ. ಪ್ರತೀ ವಿತ್ತೀಯವರ್ಷ ಮುಗಿದ ನಂತರ ಈ ವಿವರವನ್ನು ತೆರಿಗೆ ಕತ್ತರಿಸಿದ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸುತ್ತವೆ. ಅದನ್ನು ಆದಾಯ ತೆರಿಗೆ ಇಲಾಖೆಯ ವೆಬ್‌ ಸೈಟ್‌ ಮೂಲಕ ನಾವು ಪಡೆಯಬಹುದು.

Advertisement

2.  ಫಾರ್ಮ್ 16: ಇದರಲ್ಲಿ ತನ್ನ ಉದ್ಯೋಗಿಯಿಂದ ಸಂಸ್ಥೆಯೊಂದು ಕತ್ತರಿಸಿದ ತೆರಿಗೆ ಹಣ ಮತ್ತು ಅದನ್ನು ಸರ್ಕಾರಕ್ಕೆ ಸಲ್ಲಿಸಿದ ಮಾಹಿತಿಯಿರುತ್ತದೆ. ಇದು ಉದ್ಯೋಗಿಗೆ ಸಂಸ್ಥೆ ನೀಡಲೇಬೇಕಾದ ವಾರ್ಷಿಕ ಪ್ರಮಾಣಪತ್ರ. ಇದು ಸಿಕ್ಕಿದ ನಂತರವೇ ಉದ್ಯೋಗಿ ಕಡಿತಗೊಂಡ ತನ್ನ ಹಣವನ್ನು ಮರಳಿ ಪಡೆಯಲು ಅರ್ಜಿ ಸಲ್ಲಿಸಬಹುದು.

ಟಿಡಿಎಸ್‌ ಹಣ ಹಿಂಪಡೆಯುವುದು ಹೇಗೆ?
ನಮಗೆ ಒಂದು ವರ್ಷದಲ್ಲಿ ಇರುವ ಆದಾಯ, ಅದಕ್ಕೆ ಎದುರಾಗುವ ತೆರಿಗೆ ಪ್ರಮಾಣ ಇದನ್ನು ಮೊದಲು ಪರಿಶೀಲಿಸಬೇಕು. ನಂತರ ತೆರಿಗೆ ಮಿತಿಗಿಂತ ಹೆಚ್ಚು ಹಣವನ್ನು ಕಡಿತ ಮಾಡಲಾಗಿದೆ ಅನಿಸಿದರೆ, ಅದನ್ನು ಹಿಂಪಡೆಯಲು ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಇದು ವಿತ್ತೀಯ ವರ್ಷಾಂತ್ಯದಲ್ಲಿ ನಡೆಯುವ ಪ್ರಕ್ರಿಯೆ. ಎರಡು ದಾರಿಗಳಲ್ಲಿ ಇದನ್ನು ಮಾಡಬಹುದು.

1. ಮಾಮೂಲಿ
ಪ್ರಕ್ರಿಯೆ: ಐಟಿಆರ್‌ ಅಥವಾ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಪತ್ರಕವನ್ನು ಭರ್ತಿ ಮಾಡಿ, ಅದನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸ ಬೇಕು. ಈ ವೇಳೆ ನಿಮ್ಮ ಬ್ಯಾಂಕ್‌ ಹೆಸರು, ಐಎಫ್ ಎಸ್‌ಸಿ, ಪಾನ್‌ ಸಂಖ್ಯೆಯನ್ನು ಸರಿಯಾಗಿ ನಮೂದಿ ಸಬೇಕು.

2.ಅಂತರ್ಜಾಲದಲ್ಲಿ: ಐಟಿ ಇಲಾಖೆಯ https://incometaxindiaefi ling.gov.in ವೆಬ್‌ಸೈಟ್‌ ತೆರೆದು, ನಿಮ್ಮ ಲಾಗಿನ್‌ ಐಡಿಯನ್ನು ಸೃಷ್ಟಿಸಿಕೊಳ್ಳಬೇಕು. ನಂತರ ಸಂಬಂಧಪಟ್ಟ ಐಟಿಆರ್‌ ಪತ್ರಕವನ್ನು ಇಳಿಸಿಕೊಂಡು (ಡೌನ್‌ ಲೋಡ್‌) ಅದನ್ನು ಭರ್ತಿ ಮಾಡಬೇಕು. ಅದನ್ನು ವೆಬ್‌ ಮೂಲಕವೇ ಸಲ್ಲಿಸಬೇಕು. ಈ ಪ್ರಕ್ರಿಯೆ ಮುಗಿಸಿದ ನಂತರ ಐಟಿಆರ್‌ ಸಲ್ಲಿಕೆಯಾಗಿದೆ ಎಂಬುದನ್ನು ಪ್ರಮಾಣೀಕರಿಸಬೇಕಾಗುತ್ತದೆ. ಅದಕ್ಕೆಂದೇ ಒಂದು ಕೊಂಡಿ ನಮಗೆ ಸಿಗುತ್ತದೆ. ಅದನ್ನು ಇ-ವೆರಿಫೈ ಮಾಡಬೇಕು, ನಿಮ್ಮ ಡಿಜಿಟಲ್‌ ಸಹಿ, ಆಧಾರ್‌ ಒಟಿಪಿ ಅಥವಾ ನಿಮ್ಮ ನೆಟ್‌ಬ್ಯಾಂಕಿಂಗ್‌ ಮೂಲಕ ಇದನ್ನು ಸಾಧಿಸಬಹುದು. ಇ-ವೆರಿಫೈ ಸಾಧ್ಯವಾಗದಿದ್ದರೆ, ನೀವು ತುಂಬಿದ ಪತ್ರಕವನ್ನು ಡೌನ್‌ ಲೋಡ್‌ ಮಾಡಿಕೊಂಡು, ಮುದ್ರಿಸಿ (ಪ್ರಿಂಟ್‌ ತೆಗೆದು), ಸಹಿ ಹಾಕಿ, ಆದಾಯ ತೆರಿಗೆ ಇಲಾಖೆಗೆ ಕಳುಹಿಸಬೇಕು.

ಪ್ರಶ್ನೆಉತ್ತರ
ಪ್ರಶ್ನೆ: ಒಬ್ಬ ವ್ಯಕ್ತಿಗೆ ಹಲವು ರೀತಿಯ ಆದಾಯವಿದ್ದರೆ, ಎಲ್ಲ ಮೂಲಗಳಿಗೆ ಒಂದೇ ಟಿಡಿಎಸ್‌ ದರ ಇರುತ್ತದೆಯಾ? 
ಉತ್ತರ: ಇಲ್ಲ, ಟಿಡಿಎಸ್‌ ವ್ಯಾಪ್ತಿಗೆ ಬರುವ ಬೇರೆ ಬೇರೆ ಆದಾಯಗಳಿಗೆ, ನಿಯಮಗಳಿಗನುಗುಣವಾಗಿ ಬೇರೆ ಬೇರೆ ದರವಿರುತ್ತದೆ.

ಪ್ರಶ್ನೆ: ಸಂಬಳದಿಂದ ಕಡಿತ ಮಾಡುವ ಟಿಡಿಎಸ್‌ ದರವೆಷ್ಟು?
ಉತ್ತರ: ಇದನ್ನು ಆದಾಯ ತೆರಿಗೆಯ ವಿವಿಧ ದರಗಳನ್ನು ಗಮನಿಸಿ ನಿರ್ಧರಿಸಲಾಗುತ್ತದೆ. ಇದರಲ್ಲಿ ಸೆಸ್‌ ಕೂಡಾ ಸೇರಿರುತ್ತದೆ.

ಪ್ರಶ್ನೆ: ಯಾವಾಗ ಟಿಡಿಎಸ್‌ ಕತ್ತರಿಸಲಾಗುತ್ತದೆ?
ಉತ್ತರ: ಒಬ್ಬ ವ್ಯಕ್ತಿಗೆ ವೇತನ ಅಥವಾ ಇನ್ನಿತರ ಮೂಲಗಳಿಂದ ಹಣ ಬರುತ್ತಿದೆ ಎಂದುಕೊಳ್ಳೋಣ. ಆತನಿಗೆ ಹಣ ಕೊಡುವ ಸಂಸ್ಥೆ ಅಥವಾ ವ್ಯಕ್ತಿಗಳು, ದರಕ್ಕೆ ತಕ್ಕಂತೆ ಟಿಡಿಎಸ್‌ ಕತ್ತರಿಸಿ ಉಳಿದ ಹಣ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next