ನವದೆಹಲಿ: ನಾಯಕತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ಆಗ್ರಹಿಸಿ 23 ಹಿರಿಯ ನಾಯಕರು ಬರೆದ ಪತ್ರಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದು ‘ಎಲ್ಲರೂ ಒಗ್ಗೂಡಿ, ಹೊಸ ಮುಖ್ಯಸ್ಥರನ್ನು ಹುಡುಕಿ’ ಎಂದಿದ್ದಾರೆಂದು ವರದಿಯಾಗಿದೆ.
ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ ತಮ್ಮ ಜವಬ್ದಾರಿಯಿಂದ ಹೊರಬರಲಿದ್ದು, ಅವರಿಗೆ ಆ ಹುದ್ದೆಯಲ್ಲಿ ಮುಂದುವರೆಯುವ ಇಚ್ಛೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 10ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಮತ್ತೊಮ್ಮೆ ಜವಬ್ದಾರಿ ವಹಿಸಿಕೊಳ್ಳಬೇಕೆಂದು ಮನವಿ ಮಾಡಿದಾಗಲೂ ಪಕ್ಷವನ್ನು ಮುನ್ನಡೆಸಲು ಆಸಕ್ತಿ ಇಲ್ಲ ಎಂದು ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದರು.
ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ಮನೀಶ್ ತಿವಾರಿ ಸೇರಿದಂತೆ 23 ನಾಯಕರು, ಕಾಂಗ್ರೆಸ್ ಪಕ್ಷದ ನಾಯಕತ್ವದ ಬದಲಾವಣೆಗಾಗಿ ಪತ್ರ ಬರೆದು ಆಗ್ರಹಿಸಿದ್ದರು.
ರಾಹುಲ್ ಗಾಂಧಿ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಭರವಸೆ ಪಡೆದ ಬಳಿಕವೇ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದರು. ನೂತನ ಅಧ್ಯಕ್ಷರು ಗಾಂಧಿ ಕುಟುಂಬದ ಹೊರತಾಗಿರುವವರೇ ಆಗಿರಬೇಕು ಎಂದು ಸೋನಿಯ ಗಾಂಧಿ ಮಾತ್ರವಲ್ಲದೆ ರಾಹುಲ್ ಗಾಂಧಿ ತಿಳಿಸಿರುವುದಾಗಿ ವರದಿಯಾಗಿದೆ.