Advertisement
ರಾಜ್ಯ ವಿಧಾನಸಭೆ ಚುನಾವಣೆಗೆ ಮಹೂರ್ತ ನಿಗದಿಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಒಳ್ಳೆಯ ಸರ್ಕಾರ ನೀಡುವ ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುವ ಶಾಸಕರನ್ನು ಆಯ್ಕೆ ಮಾಡುವ ಅಧಿಕಾರ ಮತದಾರರಿಗೆ ಮತ್ತೂಮ್ಮೆ ಸಿಕ್ಕಿದೆ.
Related Articles
Advertisement
ಮತ್ತೂಂದು ವಿಚಾರ ಎಂದರೆ ಇದೀಗ ರಾಜಕೀಯ ಪಕ್ಷಗಳಿಗೆ ಮಡಿವಂತಿಕೆ ಎಂಬುದು ಬಹಿರಂಗ ವಾಗಿಯೇ ಇಲ್ಲ. ಗೆಲ್ಲುವ ಸಾಮ ರ್ಥ್ಯವನ್ನೇ ಮಾನದಂಡವಾಗಿರಿಸಿ ಕೊಂಡು ಜಾತಿ ಬಲ, ಹಣ ಬಲ ಪ್ರಮುಖವಾಗಿ ಗಮನಿಸಿ ಗೆಲ್ಲುವ ಕುದುರೆ ನಮ್ಮಲ್ಲಿರಬೇಕು ಎಂದು ಬಯಸುವುದೇ ಹೆಚ್ಚು. ಹೇಗಾ ದರೂ ಮಾಡಿ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕು. ಯಾರ ಹಂಗಿಲ್ಲದೆ ಆಡಳಿತ ನಡೆಸುವ ಅವಕಾಶ ಸಿಕ್ಕರೆ ನಾವಂದುಕೊಂಡಿದ್ದು ಮಾಡಲು ಸಾಧ್ಯ ಎಂಬುದು ಮೂರೂ ಪಕ್ಷಗಳ ಪ್ರತಿಪಾದನೆಯೂ ಹೌದು. ಅವರಂದುಕೊಂಡದ್ದು ಏನು ಎಂಬುದು ಯಕ್ಷಪ್ರಶ್ನೆ. ಕಳೆದ ಮೂರು ದಶಕಗಳ ರಾಜ್ಯ ರಾಜಕಾರಣದಲ್ಲಿ ಸ್ವಂತ ಶಕ್ತಿಯ ಮೇಲೆ ಈ ಮೂರೂ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆಗ ಯಾಕೆ ಈಗಂದುಕೊಳ್ಳುತ್ತಿರುವುದನ್ನು ಮಾಡಲಿಲ್ಲ ಎಂಬುದಕ್ಕೂ ಅವುಗಳ ಬಳಿ ಉತ್ತರವಿಲ್ಲ. ಇನ್ನೊಮ್ಮೆ ಅವಕಾಶ ಕೊಟ್ಟು ನೋಡಿ ಎಂಬ ಸಬೂಬು ಅಷ್ಟೇ ಅವರಿಗಿರುವ ಹಾದಿ.
ಆದರೆ, ರಾಜಕೀಯ ಪಕ್ಷಗಳು ತಮ್ಮ ಚಿಂತನೆ ಅಥವಾ ಕಾರ್ಯ ಕ್ರಮಗಳನ್ನು ಜನರ ಮುಂದೆ ಇಡುವ ಸಮಯವಂತೂ ಬಂದಿದೆ. ಈಗಲಾದರೂ ಅಭಿವೃದ್ಧಿ ಪರ ತಮ್ಮ ಸ್ಪಷ್ಟ ನಿಲುವು ಅದಕ್ಕೆ ಪೂರಕವಾದ ಪ್ರಣಾಳಿಕೆ ಹಾಗೂ ಅದನ್ನು ಜಾರಿಗೊಳಿಸುವ ಬದ್ಧತೆಗೆ ಖಾತರಿ ತೋರಬೇಕಿದೆ. ಯಾಕೆಂದರೆ, ಮಂತ್ರಕ್ಕೆ ಮಾವಿನ ಕಾಯಿ ಉದುರುವುದಿಲ್ಲ ಎಂಬಂತೆ ಕೇವಲ ಪ್ರಚಾರ ಅಥವಾ ಅಗ್ಗದ ಭರವಸೆಗಳ ಘೋಷಣೆಗೆ ಮತಗಳು ಬುಟ್ಟಿಗೆ ಬೀಳುತ್ತವೆ ಎಂಬುದು ಸುಳ್ಳು. ಅಭಿವೃದ್ಧಿ ಹಾಗೂ ಕಾರ್ಯಕ್ರಮಗಳ ಬಗ್ಗೆ ಸ್ಪಷ್ಟತೆ, ನಿಖರತೆ, ವಾಸ್ತವಾಂಶದ ಅರಿವು ಎಷ್ಟರ ಮಟ್ಟಿಗೆ ರಾಜಕೀಯ ಪಕ್ಷ ಅಥವಾ ಮತ ಕೇಳುವ ಅಭ್ಯರ್ಥಿಗೆ ಇದೆ ಎಂಬುದನ್ನೂ ಮತದಾರ ಊಹಿಸಬಲ್ಲ. ಇದೀಗ ಏನಿದ್ದರೂ ಅಳೆದೂ ತೂಗಿ, ಕಾರ್ಯಕ್ರಮ, ಪ್ರಚಾರ, ವರ್ಚಸ್ಸು, ಸಾಮರ್ಥ್ಯ, ಒಳ್ಳೆಯತನ ನೋಡಿಯೇ ಮತ ಹಾಕುವುದು. ಜನಸಾಮಾನ್ಯರು ಯೋಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವ ದಿನ ಸನಿಹವಾಗುತ್ತಿದೆ. ಮತದಾರರ ಕೈಯ್ಯಲ್ಲಿ ರಾಜ್ಯದ ಭವಿಷ್ಯವಿದೆ. ಅವರ ತೀರ್ಮಾನ ಏನು ಎಂಬುದು ಕಾದು ನೋಡಬೇಕಾಗಿದೆ.ಏನೇ ಆದರೂ ನಿರ್ಧಾರ ಪ್ರಬುದ್ಧವಾಗಿರಲಿ.