Advertisement

Election: ನೆಲದವರೆಗೂ ಬಗ್ಗಿದ್ದೇನೆ, ತಾಳ್ಮೆಗೂ ಮಿತಿ ಇದೆ: ಕುಮಾರಸ್ವಾಮಿ

12:18 AM Oct 23, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ಟಿಕೆಟ್‌ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಮಂಗಳವಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ನನ್ನಷ್ಟು ಉಪ ಚುನಾವಣೆಗಳನ್ನು ಎದುರಿಸಿದ, ಯಶಸ್ವಿಯಾಗಿ ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ. ಎಂತೆಂತಹ ಚುನಾವಣೆಗಳನ್ನು, ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದೇನೆ. ಚನ್ನಪಟ್ಟಣ ಚುನಾವಣೆ ಎದುರಿಸುವುದಕ್ಕೆ ನನಗೆ ಭಯವಿಲ್ಲ. ನಿಮ್ಮಂತಹ ಕಾರ್ಯಕರ್ತರು ಜತೆಯಲ್ಲಿ ಇರಬೇಕಾದರೆ ನಾವು ಹೆದರುತ್ತೇವೆಯೇ? ಎಂದು ಪ್ರಶ್ನಿಸಿದರು.

ಜೆಡಿಎಸ್‌ ಟಿಕೆಟ್‌ ಕೊಟ್ರೂ ಕೈ ಹಿಡಿಯುತ್ತಿರುವ ಸಿಪಿವೈ
ಬಿಜೆಪಿಗೆ ರಾಜೀನಾಮೆ ಕೊಟ್ಟು ಜೆಡಿಎಸ್‌ನಿಂದ ಸ್ಪರ್ಧಿಸಲು ಯೋಗೇಶ್ವರ್‌ಗೆ ಹೇಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದರು. ಒಂದು ಸ್ಥಾನ ಮುಖ್ಯವಲ್ಲ. ನನಗೆ ಕೆಲಸ ಮಾಡಲು ಎನ್‌ಡಿಎ ನಾಯಕರು ಮುಕ್ತ ಅವಕಾಶ ನೀಡಿದ್ದಾರೆ. ಕಾಂಗ್ರೆಸ್‌ನವರು ಕುತಂತ್ರ ಮಾಡಿ ನಮ್ಮ ಪಕ್ಷವನ್ನು ಪಾತಾಳಕ್ಕೆ ತುಳಿದಿದ್ದಾರೆ. ಅವರು ತುಳಿದಷ್ಟೂ ಪ್ರಬಲವಾಗಿದ್ದೇವೆ.

ಜೆಡಿಎಸ್‌ ಟಿಕೆಟ್‌ ಕೊಡುತ್ತೇವೆ ಎಂದರೂ ಯೋಗೇಶ್ವರ್‌ ಮಾತ್ರ ಕಾಂಗ್ರೆಸ್‌ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಕಾರ್ಯಕರ್ತರು ಒಟ್ಟಾಗಿರಿ, ಯಾರಿಗೂ ತಲೆ ಬಾಗಬೇಕಿಲ್ಲ. ಗೌರವಕ್ಕೆ ತಲೆ ಬಾಗೋಣ. ಇನ್ನೂ ಮೂರು ದಿನ ಸಮಯ ಇದೆ. ನನ್ನ ಕಾರ್ಯಕರ್ತರ ಭಾವನೆಯೇ ಅಂತಿಮ. ಸಮಯ ಕೊಡಿ ಎಂದು ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಮನವಿ ಮಾಡಿಕೊಂಡರು.

ಯೋಗಿ ಜೇಬಿನಲ್ಲಿ 5 ಬಿ. ಫಾರಂ
ರಾಜ್ಯದ ಬಿಜೆಪಿ ನಾಯಕರು ಯೋಗೇಶ್ವರ್‌ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸೇರಲು ಸಜ್ಜಾಗಿರುವ ಸಿ.ಪಿ. ಯೋಗೇಶ್ವರ್‌ ಜೇಬಿನಲ್ಲಿ ಐದು ಬಿ ಫಾರಂ ಇಟ್ಟುಕೊಂಡು ತಿರುಗಾಡುತ್ತಿದ್ದಾರೆ. ನಾನು ಅಡ್ಜಸ್ಟ್ಮೆಂಟ್ ರಾಜಕೀಯ ಮಾಡಲ್ಲ. ಒಂದು ಪಕ್ಷದಲ್ಲಿ ಇದ್ದು ಬೇರೆ ಪಕ್ಷಗಳ ಬಿ. ಫಾರಂ ಇಟ್ಟುಕೊಂಡು ಓಡಾಡುವುದು ಗೊತ್ತಿಲ್ಲ. ಹಾಗೆ ಮಾಡುವ ಜಾಯಮಾನವೂ ನನ್ನದಲ್ಲ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next